ಟೆಹ್ರಾನ್: ಯುಎಇಯ ಫುಜೈರಾಹ್ ಬಂದರಿನ ತೈಲ ಸೌಲಭ್ಯಗಳ ಮೇಲೆ ಈ ವಾರದ ಆರಂಭದಲ್ಲಿ ನಡೆದಿದ್ದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸ್ಪಷ್ಟಪಡಿಸಿದೆ. ಜೊತೆಗೆ, ಈ ದಾಳಿ ಅಮೆರಿಕ ಹಾಗೂ ಇಸ್ರೇಲ್ ರೂಪಿಸಿದ್ದ 'ಸುಳ್ಳು ಕಾರ್ಯಾಚರಣೆ' ಎಂದು ಟೆಹ್ರಾನ್ ಆರೋಪಿಸಿದೆ.
ಹಾರ್ಮುಝ್ ಜಲಸಂಧಿ ಬಿಕ್ಕಟ್ಟಿನ ಬಳಿಕ ಪ್ರಚಾರ ಯುದ್ಧ ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಅಧಿಕೃತ ನಿರಾಕರಣೆ ಹೊರಬಿದ್ದಿದೆ. ದಾಳಿಯಲ್ಲಿ ಇರಾನ್ ಯಾವುದೇ ಪಾತ್ರವಹಿಸಿಲ್ಲ ಎಂದು ಇರಾನ್ ಸರ್ಕಾರದ ಮಾಧ್ಯಮಗಳು ವರದಿ ಮಾಡಿವೆ.
ಇದಕ್ಕೂ ಮುನ್ನ, ಇರಾನ್ ಪ್ರದೇಶದಿಂದ ಉಡಾಯಿಸಲ್ಪಟ್ಟಿದ್ದ 12 ಬ್ಯಾಲಿಸ್ಟಿಕ್ ಕ್ಷಿಪಣಿಗಳು, ನಾಲ್ಕು ಡ್ರೋನ್ ಗಳು ಹಾಗೂ ಮೂರು ಕ್ರೂಸ್ ಕ್ಷಿಪಣಿಗಳನ್ನು ತಮ್ಮ ವಾಯು ರಕ್ಷಣಾ ವ್ಯವಸ್ಥೆ ತಡೆಹಿಡಿದಿದೆ ಎಂದು ಯುಎಇ ಹೇಳಿಕೆ ನೀಡಿತ್ತು. ಈ ಹೇಳಿಕೆಯ ಬೆನ್ನಲ್ಲೇ IRGC ಪ್ರತಿಕ್ರಿಯೆ ಪ್ರಕಟಿಸಿದೆ.
"ಸಂಯುಕ್ತ ಅರಬ್ ಸಂಸ್ಥಾನದ ವಿರುದ್ಧ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ ಯಾವುದೇ ಸಶಸ್ತ್ರ ಪಡೆಗಳು ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆಸಿಲ್ಲ" ಎಂದು IRGC ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಇರಾನ್ ನ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ ಹಾಗೂ IRNA ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

