ಪಾಲಕ್ಕಾಡ್: ಜಿಲ್ಲಾ ಕಾರ್ಯದರ್ಶಿಯನ್ನು ಟೀಕಿಸಿದ್ದ ಪ್ರದೇಶ ಸಮಿತಿ ಸದಸ್ಯರೊಬ್ಬರಿಗೆ ಹಿಂಬಡ್ತಿ ನೀಡಿದ್ದನ್ನು ವಿರೋಧಿಸಿ ಸಿಪಿಐ(ಎಂ) ಪಾಲಕ್ಕಾಡ್ ಘಟಕದ ಸುಮಾರು ಎರಡು ಡಜನ್ ಸದಸ್ಯರು ರವಿವಾರ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಜಿಲ್ಲಾ ಕಾರ್ಯದರ್ಶಿ ಇ.ಎನ್. ಸುರೇಶ್ ಬಾಬು ಹಾಗೂ ಪ್ರದೇಶ ಸಮಿತಿ ಸದಸ್ಯ ಮತ್ತು ಪಾಲಕ್ಕಾಡ್ ನಗರ ಪಾಲಿಕೆ ಸದಸ್ಯ ಅಬ್ದುಲ್ ಶುಕೂರ್ ನಡುವಿನ ಸಂಘರ್ಷದಿಂದಾಗಿ ಪಕ್ಷದ ವಿವಿಧ ಶಾಖಾ ಸಮಿತಿಗಳ ಸದಸ್ಯರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರದೇಶ ಸಮಿತಿ ಸಭೆಯಲ್ಲಿ ಜಿಲ್ಲಾ ನಾಯಕತ್ವದ ವಿರುದ್ಧ ಅಬ್ದುಲ್ ಶುಕೂರ್ ಆರೋಪಗಳನ್ನು ಮಾಡಿದ್ದರು. ಇದಾದ ಬಳಿಕ ಅವರಿಗೆ ಇತ್ತೀಚೆಗೆ ಹಿಂಬಡ್ತಿ ನೀಡಲಾಗಿತ್ತು ಎನ್ನಲಾಗಿದೆ.
ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು ಅವರು ಶುಕೂರ್ ಅವರನ್ನು ನಿರಂತರವಾಗಿ ಕಡೆಗಣಿಸಿ ಅವಮಾನ ಮಾಡಿದ್ದಾರೆ ಎಂದು ರಾಜೀನಾಮೆ ನೀಡಿದ ಸದಸ್ಯರು ಆರೋಪಿಸಿದ್ದಾರೆ. ಸುರೇಶ್ ಬಾಬು ಅವರನ್ನು ಜಿಲ್ಲಾ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅವಮಾನಕ್ಕೀಡಾದ ಹಾಗೂ ಪಕ್ಷ ತೊರೆಯುವಂತಾದ ಸದಸ್ಯರ ಸಮಾವೇಶವನ್ನು ಈ ತಿಂಗಳ ಕೊನೆಯಲ್ಲಿ ಆಯೋಜಿಸಲು ಯೋಜಿಸಲಾಗಿದೆ ಎಂದು ಭಿನ್ನಮತೀಯರು ತಿಳಿಸಿದ್ದಾರೆ. ಮಲಬಾರ್ ಪ್ರದೇಶದ ಚುನಾಯಿತ ಶಾಸಕರು ಸಮಾವೇಶದ ನೇತೃತ್ವ ವಹಿಸಲಿದ್ದಾರೆ ಎಂದೂ ಹೇಳಿದ್ದಾರೆ.
ಈ ನಡುವೆ, ಪಾಲಕ್ಕಾಡ್ ನಗರ ಪಾಲಿಕೆಯ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಂದ ಕೆಳಗಿಳಿಯುವ ಕುರಿತು ಅಬ್ದುಲ್ ಶುಕೂರ್ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

