ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮೂವರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಟೋಲ್ ಪ್ಲಾಝಾದಲ್ಲಿ UPI ಮೂಲಕ ಶುಲ್ಕ ಪಾವತಿಸಿದ್ದ ಡಿಜಿಟಲ್ ಸುಳಿವಿನ ಆಧಾರದಲ್ಲಿ ಆರೋಪಿಗಳ ಪತ್ತೆ ನಡೆದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.ಬಂಧಿತರಲ್ಲಿ ಒಬ್ಬನನ್ನು ಬಿಹಾರದ ಬಕ್ಸರ್ ಜಿಲ್ಲೆಯ ಪಂಡಿಯಾಪಟ್ಟಿ ಗ್ರಾಮದ ನಿವಾಸಿ ವಿಶಾಲ್ ಶ್ರೀವಾಸ್ತವ್ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಉತ್ತರ ಪ್ರದೇಶದ ನಿವಾಸಿಗಳು. ಬಂಧಿತರ ಪೈಕಿ ಓರ್ವ 'ಶಾರ್ಪ್ ಶೂಟರ್' ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೇ 6ರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮ್ ಗ್ರಾಮ್‌ನ ಡೊಹಾರಿಯಾ ಲೇನ್‌ನಲ್ಲಿ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಎರಡು ದಿನಗಳ ಬಳಿಕ ಹತ್ಯೆ ನಡೆದಿದ್ದರಿಂದ, ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ರವಿವಾರ ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಬಳಿಕ ಬಂಧಿಸಿದೆ. ತನಿಖೆಯ ವೇಳೆ ಡಿಜಿಟಲ್ ಸುಳಿವುಗಳು ಮತ್ತು ಅಂತಾರಾಜ್ಯ ಸಂಪರ್ಕಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಹಂತಕರು ಪಶ್ಚಿಮ ಬಂಗಾಳದ ಹೊರಗಿನವರಾಗಿರಬಹುದು ಎಂಬ ಶಂಕೆ ಮೊದಲಿನಿಂದಲೂ ಇತ್ತು. ತಾಂತ್ರಿಕ ನಿಗಾವಣೆ, ಡಿಜಿಟಲ್ ಹಿಂಬಾಲಿಸುವಿಕೆ ಮತ್ತು ಇತರೆ ಮಾಹಿತಿಗಳ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳನ್ನು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ಟ್ರಾನ್ಸಿಟ್ ರಿಮ್ಯಾಂಡ್ ಮೇಲೆ ಪಶ್ಚಿಮ ಬಂಗಾಳಕ್ಕೆ ತರಲಾಗುವುದು' ಎಂದು ಅವರು ಹೇಳಿದ್ದಾರೆ.
ಹತ್ಯೆ ಮತ್ತು ಪಿತೂರಿಯಲ್ಲಿ ಕನಿಷ್ಠ ಎಂಟು ಮಂದಿ ಭಾಗಿಯಾಗಿರುವ ಶಂಕೆಯಿದೆ ಎಂದೂ ಅವರು ತಿಳಿಸಿದ್ದಾರೆ. ದಾಳಿಕೋರರು ಚಂದ್ರನಾಥ್ ರಥ್ ಅವರ ಚಲನವಲನಗಳನ್ನು ಮುಂಚಿತವಾಗಿ ಗಮನಿಸಿ ಸೂಕ್ಷ್ಮವಾಗಿ ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
'ಹಂತಕರು ತಮ್ಮ ಗುರುತು ಮತ್ತು ಚಲನವಲನಗಳನ್ನು ಮರೆಮಾಚಲು ಹಲವು ಕ್ರಮಗಳನ್ನು ಕೈಗೊಂಡಿದ್ದರು. ಹೀಗಾಗಿ, ತನಿಖಾಧಿಕಾರಿಗಳು ಡಿಜಿಟಲ್ ಹೆಜ್ಜೆ ಗುರುತುಗಳು, ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಸಾಕ್ಷ್ಯಗಳನ್ನೇ ಮುಖ್ಯವಾಗಿ ಅವಲಂಬಿಸಿದ್ದರು' ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಧ್ಯಮ್ ಗ್ರಾಮ್ ಕ್ರಾಸಿಂಗ್ ಸಮೀಪದ ಡೊಹಾರಿಯಾ ಪ್ರದೇಶದಲ್ಲಿ ಕಾರೊಂದು ಚಂದ್ರನಾಥ್ ರಥ್ ಅವರ ವಾಹನವನ್ನು ಅಡ್ಡಗಟ್ಟಿದ್ದು, ಅದರ ಹಿಂದೆ ಬೈಕ್ ಒಂದು ನಿಂತಿತ್ತು ಎನ್ನಲಾಗಿದೆ.
ಹತ್ಯೆಗೆ ಮುನ್ನ ದಾಳಿಕೋರರು ಬಳಸಿದ್ದ ಕಾರು ಬಾಲಿ ಟೋಲ್ ಪ್ಲಾಝಾ ದಾಟಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿದ್ದವರಲ್ಲಿ ಒಬ್ಬರು UPI ಮೂಲಕ ಟೋಲ್ ಶುಲ್ಕ ಪಾವತಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
'ಈ ಡಿಜಿಟಲ್ ಪಾವತಿಯಿಂದ ಮೊಬೈಲ್ ಸಂಖ್ಯೆ ಪತ್ತೆಯಾಗಿದ್ದು, ಅದರಿಂದ ಓರ್ವ ಶಂಕಿತ ಆರೋಪಿಯ ಗುರುತನ್ನು ಕಂಡುಹಿಡಿಯಲು ಸಾಧ್ಯವಾಯಿತು. ಇದೇ ಸುಳಿವು ತನಿಖಾ ತಂಡವನ್ನು ಆರೋಪಿಗಳವರೆಗೆ ಕರೆದೊಯ್ದಿತು' ಎಂದು ಅಧಿಕಾರಿ ತಿಳಿಸಿದ್ದಾರೆ.
ಟೋಲ್ ಪ್ಲಾಝಾ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿರುವ ವಾಹನ ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದವರ ವಿವರಗಳನ್ನು ಬಂಧಿತ ಆರೋಪಿಗಳೊಂದಿಗೆ ಹೋಲಿಕೆ ಮಾಡುವ ಕಾರ್ಯ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ಉಳಿದ ಆರೋಪಿಗಳ ಪತ್ತೆಗಾಗಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಎಸ್‌ಐಟಿ ದಾಳಿ ಮುಂದುವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

