ಬೊಕಾರೋ : ಪ್ರಿಯಕರನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹದಿನೇಳು ವರ್ಷ ವಯಸ್ಸಿನ ಬಾಲಕಿಯೊಬ್ಬಳು 100 ಅಡಿ ಎತ್ತರದ ಮೊಬೈಲ್ ಟವರ್ ಏರಿದ ಘಟನೆ ಮಂಗಳವಾರ ಜಾರ್ಖಂಡ್‌ನ ಬೊಕಾರೋ ಜಿಲ್ಲೆಯಲ್ಲಿ ನಡೆದಿದೆ.
'ಬಾಲಕಿಯನ್ನು ಅಪಹರಿಸಿದ್ದ ಆರೋಪದಡಿ ಆಕೆಯ ತಾಯಿಯು ಯುವಕನ ವಿರುದ್ಧ ಕೆಲವು ದಿನಗಳ ಹಿಂದೆ ದೂರು ನೀಡಿದ್ದರು.
ಇದರ ಆಧಾರದ ಮೇಲೆ ಆತನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು' ಎಂದು ಪೋಲಿಸರು ತಿಳಿಸಿದ್ದಾರೆ.
'ಬಾಲಕಿಯು ಮಂಗಳವಾರ ಬೆಳಿಗ್ಗೆ ಗೋಮಿಯ ಸಮೀಪದ ಧೆಂಧೆ ಗ್ರಾಮದಲ್ಲಿರುವ ಟವರ್ ಹತ್ತಿ ತನ್ನ ಬೇಡಿಕೆ ಈಡೇರಿಸದಿದ್ದರೆ ಮೇಲಿನಿಂದ ಕೆಳಕ್ಕೆ ಜಿಗಿಯುವುದಾಗಿ ಬೆದರಿಕೆ ಹಾಕಿದಳು. ಅವಳು ಪಕ್ಕದ ಲಾಲ್‌ಪನಿಯ ಪ್ರದೇಶದವಳು' ಎಂದು ಗೋಮಿಯ ಪೋಲಿಸ್ ಠಾಣಾಧಿಕಾರಿ ಪ್ರಫುಲ್ ಕುಮಾರ್ ಮಹತೊ ತಿಳಿಸಿದ್ದಾರೆ.
'ರಾಂಚಿಯ ಸುಖ್‌ದೇವ್ ನಗರ ಪ್ರದೇಶದಲ್ಲಿ ಬಾಲಕಿಯನ್ನು ರಕ್ಷಣೆ ಮಾಡಿದ ನಂತರ ಆರೋಪಿಯನ್ನು ಬಂಧಿಸಲಾಗಿತ್ತು. ರಾಂಚಿಯವನಾದ ಆರೋಪಿಯು ಪ್ರಸ್ತುತ ತೆನುಘಾಟ್ ಜೈಲಿನಲ್ಲಿದ್ದಾನೆ' ಎಂದು ಅವರು ಹೇಳಿದ್ದಾರೆ.

