ನವದೆಹಲಿ: ರಾಜ್ಯದ ಕೆಲವೆಡೆ ಸದ್ಯ ಉತ್ತಮ ಮಳೆಯಾಗುತ್ತಿರುವ ಹೊರತಾಗಿಯೂ, ಎಲ್ ನಿನೋ ಪ್ರಭಾವ ಶುರುವಾಗಿರುವ ಪರಿಣಾಮ ದೇಶದ 200 ಜಿಲ್ಲೆಗಳಿಗೆ ಮಳೆ ಕೊರತೆ ಆತಂಕ ಎದುರಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಳ್ಳುತ್ತಿರುವ ಎಲ್ ನಿನೋ ಪ್ರಭಾವ ಮುಂಗಾರು ಹಂಗಾಮಿನ ವೇಳೆ ಇನ್ನಷ್ಟು ತೀವ್ರಗೊಳ್ಳಲಿದೆ.
ಪರಿಣಾಮ ಮಳೆ ಪ್ರಮಾಣ ದೀರ್ಘಾವಧಿ ಸರಾಸರಿಗಿಂತ ಕಡಿಮೆಯಾಗಲಿದ್ದು, ಶೇ.90ಕ್ಕೆ ಕುಸಿಯಬಹುದೆಂದು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದೆ.ಎಲ್ ನಿನೋ ಸದರ್ನ್ ಆಸಿಲೇಶನ್ ಮತ್ತು ಇಂಡಿಯನ್ ಓಷನ್ ಡೈಪೋಲ್ನ ಇತ್ತೀಚಿನ ವರದಿ ಪ್ರಕಾರ ಪೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶ ಏರಿಕೆಯಾಗುತ್ತಿರುವುದು ಎಲ್ನಿನೋ ರಚನೆಗೆ ಪೂರಕ ವಾತಾವರಣ ಸೃಷ್ಟಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಪಾನ್ ಹವಾಮಾನ ಸಂಸ್ಥೆ ಸಹ ಪೆಸಿಫಿಕ್ನಲ್ಲಿ ಎಲ್ ನಿನೋ ರೂಪುಗೊಳ್ಳುತ್ತಿರುವುದನ್ನು ಖಚಿತಪಡಿಸಿತ್ತು.
ಕೆಲವು ದಿನಗಳ ಹಿಂದೆ ಎಲ್ ನಿನೊ ಪ್ರಮಾಣ ಕಡಿಮೆ ಇದ್ದ ಕಾರಣ ಈ ಕುರಿತು ಯಾವುದೇ ಘೋಷಣೆ ಮಾಡಿರಲಿಲ್ಲ. ಆದರೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಇದನ್ನು ಖಚಿತಪಡಿಸಿದೆ. ಈ ವರ್ಷದ ಮಾರ್ಚ್ನಿಂದ ಮೇವರೆಗೆ ಮುಂದುವರಿದ ತಟಸ್ಥ ಸಾಗರ ಪರಿಸ್ಥಿತಿಗಳ ನಂತರ ಎಲ್ ನಿನೋ ರೂಪುಗೊಳ್ಳುವ ಪ್ರಕ್ರಿಯೆ ತ್ವರಿತವಾಗಿ ಸಂಭವಿಸಿದೆ.ಉ.ಕರ್ನಾಟಕಕ್ಕೆ ಆತಂಕಎಲ್ ನಿನೋ ಪ್ರಭಾವದಿಂದ ಉತ್ತರ ಕರ್ನಾಟಕ, ಮರಾಠವಾಡ ಪ್ರದೇಶದ ಜಿಲ್ಲೆಗಳು ಸೇರಿದಂತೆ ದೇಶದಾದ್ಯಂತ 150-200 ಜಿಲ್ಲೆಗಳಲ್ಲಿ ಮಳೆ ಪ್ರಮಾಣ ತೀವ್ರ ಕಡಿಮೆಯಾಗುವ ಸಾಧ್ಯತೆ ಇದೆ. ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಢ, ಉತ್ತರ ಪ್ರದೇಶದ ಪೂರ್ವ ಭಾಗ, ಬಿಹಾರ, ಜಾರ್ಖಂಡ್, ತೆಲಂಗಾಣದ ಹಲವು ಜಿಲ್ಲೆಗಳು ಮತ್ತು ಕರಾವಳಿ ಪ್ರದೇಶದಲ್ಲಿ ಮಳೆ ಕೊರತೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

