ನವದೆಹಲಿ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಬಂಡಾಯ ಈಗ ದೇಶದ ಅತ್ಯುನ್ನತ ಕಾನೂನು ಮತ್ತು ಸಂವಿಧಾನದ ಹೊಸ್ತಿಲು ತಲುಪಿದೆ. ಟಿಎಂಸಿಯ 19 ಕ್ಕೂ ಹೆಚ್ಚು ರೆಬೆಲ್ ಸಂಸದರು ದೆಹಲಿಗೆ ಹಾರಲಿದ್ದು, ಕೇಂದ್ರ ಸಚಿವರೊಬ್ಬರ ನಿವಾಸದಲ್ಲಿ ರಹಸ್ಯ ಸಭೆ ನಡೆಸಿ ಹೊಸ ಬಣ ರಚಿಸಲು ಸಜ್ಜಾಗುತ್ತಿರುವ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಕ್ಯಾಂಪ್ ಭಾರಿ ಪ್ರತಿದಾಳಿ ನಡೆಸಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತುರ್ತು ಪತ್ರ ಬರೆದಿದ್ದು, ಟಿಎಂಸಿ ಒಡೆಯಲು ಯಾರಿಗೂ ಅವಕಾಶ ನೀಡಬೇಡಿ, ಬಂಡಾಯಗಾರರ ಯಾವುದೇ ಗುಂಪಿಗೆ ಪ್ರತ್ಯೇಕ ಮಾನ್ಯತೆ ನೀಡದೆ ಅವರನ್ನು ತಕ್ಷಣವೇ ಅನರ್ಹಗೊಳಿಸಿ ಎಂದು ಮನವಿ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಬಣದಲ್ಲಿ ಉಳಿದುಕೊಂಡಿರುವ ಇಬ್ಬರು ಪ್ರಮುಖ ಟಿಎಂಸಿ ಸಂಸದರು ಭಾನುವಾರ ನೇರವಾಗಿ ಸ್ಪೀಕರ್ ಓಂ ಬಿರ್ಲಾ ಅವರ ನಿವಾಸಕ್ಕೆ ತೆರಳಿ ಅಭಿಷೇಕ್ ಬ್ಯಾನರ್ಜಿ ಬರೆದಿರುವ ಈ ಹೈ-ವೋಲ್ಟೇಜ್ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಟಿಎಂಸಿ ಒಂದೇ ಮತ್ತು ಅವಿಭಜಿತ ಪಕ್ಷ
ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರು ಕಾನೂನು ಮತ್ತು ಸಂವಿಧಾನದ ನಿಯಮಗಳನ್ನು ಅತ್ಯಂತ ಕಠಿಣವಾಗಿ ಪ್ರಸ್ತಾಪಿಸಿದ್ದಾರೆ. ನಮ್ಮ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಒಂದು ಏಕೈಕ ಮತ್ತು ಅವಿಭಜಿತ ರಾಜಕೀಯ ಪಕ್ಷವಾಗಿದೆ. ಸಂಸತ್ತಿನಲ್ಲಿರುವ ಶಾಸಕಾಂಗ ಪಕ್ಷವು ಮೂಲ ರಾಜಕೀಯ ಪಕ್ಷದಿಂದಲೇ ತನ್ನ ಅಸ್ತಿತ್ವವನ್ನು ಪಡೆದುಕೊಂಡಿರುತ್ತದೆ. ಕಾನೂನಿನ ಪ್ರಕಾರ ದೇಶದಲ್ಲಿ ಒಂದೇ ಒಂದು ಟಿಎಂಸಿ ಪಕ್ಷವಿದೆ. ಸದನದಲ್ಲಿ ಪಕ್ಷದ ಪರವಾಗಿ ಒಬ್ಬರೇ ನಾಯಕರು ಮತ್ತು ಒಬ್ಬರೇ ವೀಪ್ ಇರುತ್ತಾರೆ. ಇವರೆಲ್ಲರೂ ಪಕ್ಷದ ಉನ್ನತ ಸಾಂಸ್ಥಿಕ ಅಧಿಕಾರದಿಂದ ನೇಮಕಗೊಂಡವರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಕೆಲವು ಸಂಸದರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಮೂಲ ರಾಜಕೀಯ ಪಕ್ಷದಿಂದ ಹೊರಬಂದು, ಸಂಸತ್ತಿನಲ್ಲಿ ತಮಗೆ ಪ್ರತ್ಯೇಕ ಗುಂಪು ಎಂದು ಮಾನ್ಯತೆ ನೀಡಬೇಕು ಎಂದು ಸ್ಪೀಕರ್ ಕಚೇರಿಗೆ ಪತ್ರ ನೀಡಲು ಸಂಚು ರೂಪಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ಯಾವುದೇ ಸದಸ್ಯ ಅಥವಾ ಸದಸ್ಯರ ಗುಂಪು ತಮ್ಮ ಸ್ವಂತ ಇಷ್ಟದಂತೆ ಪಕ್ಷದೊಳಗೆ ಮತ್ತೊಂದು ಸಮಾಂತರ ಬಣವನ್ನು ಸೃಷ್ಟಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಾದಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಮಹಾರಾಷ್ಟ್ರ ತೀರ್ಪು ನೆನಪಿಸಿದ ಅಭಿಷೇಕ್!
ತಮ್ಮ ವಾದಕ್ಕೆ ಬಲ ತುಂಬಲು ಅಭಿಷೇಕ್ ಅವರು 2023 ರ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಪ್ರಸಿದ್ಧ ಸುಭಾಷ್ ದೇಸಾಯಿ ವರ್ಸಸ್ ಮಹಾರಾಷ್ಟ್ರ ಗವರ್ನರ್ (ಶಿವಸೇನೆ ಬಿಕ್ಕಟ್ಟಿನ ಪ್ರಕರಣ) ಐತಿಹಾಸಿಕ ತೀರ್ಪನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಾನೂನಿನ ಅಸ್ತ್ರ
2003 ರ 91ನೇ ಸಂವಿಧಾನ ತಿದ್ದುಪಡಿಯ ಪ್ರಕಾರ, ಸಂವಿಧಾನದ 10ನೇ ವೇಳಾಪಟ್ಟಿಯಿಂದ (ಪಕ್ಷಾಂತರ ನಿರೋಧಕ ಕಾಯ್ದೆ) 'ಪಕ್ಷ ಸೀಳಿಕೆ ಎಂಬ ರಕ್ಷಣೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರರ್ಥ, ರಾಜಕೀಯ ಪಕ್ಷವೊಂದು ಎರಡು ಸ್ಪರ್ಧಾತ್ಮಕ ಗುಂಪುಗಳಾಗಿ ಒಡೆಯುವುದನ್ನು ದೇಶದ ಕಾನೂನು ಒಪ್ಪುವುದಿಲ್ಲ. ಎರಡು ಬಣಗಳು ತಾವೇ ಅಸಲಿ ಪಕ್ಷ ಎಂದು ವಾದಿಸಿದಾಗ, ಸ್ಪೀಕರ್ ಆದವರು ಯಾರು ಅಸಲಿ ರಾಜಕೀಯ ಪಕ್ಷ ಎಂಬುದನ್ನು ಮಾತ್ರ ನಿರ್ಧರಿಸಬೇಕೇ ಹೊರತು, ರೆಬೆಲ್ ಬಣಕ್ಕೆ ಪ್ರತ್ಯೇಕ ಮಾನ್ಯತೆ ಅಥವಾ ಸವಲತ್ತುಗಳನ್ನು ನೀಡುವಂತಿಲ್ಲ. ಶಾಸಕಾಂಗ ಪಕ್ಷಕ್ಕಿಂತ ಮೂಲ ರಾಜಕೀಯ ಪಕ್ಷವೇ ಸರ್ವೋಚ್ಚ ಎಂದು ಅಭಿಷೇಕ್ ಸುಪ್ರೀಂಕೋರ್ಟ್ ತೀರ್ಪನ್ನು ನೆನಪಿಸಿದ್ದಾರೆ.
"2/3 ಬಹುಮತವಿದ್ದರೂ ಅನರ್ಹತೆ ಗ್ಯಾರಂಟಿ!"
ಬಂಡಾಯಗಾರರ ಬಳಿ ಮೂರನೇ ಎರಡರಷ್ಟು (2/3) ಸಂಸದರ ಬಲವಿದೆ ಎಂಬ ವಾದವನ್ನು ಒಪ್ಪದ ಅಭಿಷೇಕ್ ಬ್ಯಾನರ್ಜಿ, ರೆಬೆಲ್ ಸಂಸದರ ಬಳಿ ಸಂಖ್ಯಾಬಲ ಇದ್ದರೂ ಸಹ, ನಮ್ಮ ಮೂಲ ರಾಜಕೀಯ ಪಕ್ಷವು ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಿಲ್ಲ ಅಥವಾ ಯಾವುದೇ ಹೊಸ ಪಕ್ಷ ಅಸ್ತಿತ್ವಕ್ಕೆ ಬಂದಿಲ್ಲ. ಸಂವಿಧಾನ ಶಿಲ್ಪಿಗಳು ರಾಜಕೀಯ ಪಕ್ಷ ಮತ್ತು ಶಾಸಕಾಂಗ ಪಕ್ಷ ಎಂಬ ಪದಗಳನ್ನು ಅತ್ಯಂತ ಜಾಗರೂಕತೆಯಿಂದ ಬಳಸಿದ್ದಾರೆ. ಕೇವಲ ಸಂಸದರ ಬಲ ಇದ್ದ ತಕ್ಷಣ ಹೊಸ ಬಣಕ್ಕೆ ಮಾನ್ಯತೆ ಸಿಗಲ್ಲ ಎಂದಿದ್ದಾರೆ.
ಯಾವ ಸಂಸದರು ಪಕ್ಷದ ಅಧಿಕೃತ ನಾಯಕ ಮತ್ತು ವೀಪ್ ಅವರ ಆದೇಶವನ್ನು ಉಲ್ಲಂಘಿಸಿ ಸ್ವತಂತ್ರವಾಗಿ ಕೆಲಸ ಮಾಡುತ್ತಾರೋ, ಅವರೆಲ್ಲರೂ ತಾವಾಗಿಯೇ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದಂತಾಗುತ್ತದೆ. ಇಂತಹ ನಡವಳಿಕೆಯನ್ನು ಕೇವಲ ಅನರ್ಹತೆಯ ಮೂಲಕವೇ ನೋಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿಕೃತ ನಾಯಕರಿಗೆ ತಮ್ಮ ವಾದ ಮಂಡಿಸಲು ಸೂಕ್ತ ಅವಕಾಶ ನೀಡಬೇಕು ಎಂದು ಅಭಿಷೇಕ್ ಬ್ಯಾನರ್ಜಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ವಿನಂತಿಸಿದ್ದಾರೆ.

