ನವದೆಹಲಿ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ಹೈ-ಡ್ರಾಮಾ ಈಗ ದೇಶವೇ ಬೆಚ್ಚಿಬೀಳುವಂತಹ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ತಮಗೆ ಅಸಲಿ ಟಿಎಂಸಿ ಎಂದು ಮಾನ್ಯತೆ ಸಿಗುವುದು ಕಷ್ಟ ಎಂದು ಅರಿತಿರುವ 20 ಮಂದಿ ಟಿಎಂಸಿ ಬಂಡಾಯ ಸಂಸದರು, ಭಾನುವಾರ ರಾತ್ರಿ ಅತ್ಯಂತ ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ.
ಸಂಸತ್ತಿನಲ್ಲಿ ಅನರ್ಹತೆಯಿಂದ ಪಾರಾಗಲು ಈ ರೆಬೆಲ್ ಪಡೆ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (TMC Rebels Join NDA) ಎಂಬ ಅಷ್ಟಾಗಿ ಪರಿಚಿತವಲ್ಲದ ಪಕ್ಷದ ಜೊತೆ ತಮ್ಮ ಇಡೀ ಬಣವನ್ನು ವಿಲೀನ ಮಾಡಿದೆ. ಅಷ್ಟೇ ಅಲ್ಲದೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ (NDA) ಒಕ್ಕೂಟಕ್ಕೆ ತಮ್ಮ ಪೂರ್ಣ ಬೆಂಬಲ ಘೋಷಿಸುವ ಮೂಲಕ ಮಮತಾ ಬ್ಯಾನರ್ಜಿಗೆ ಚೇತರಿಸಿಕೊಳ್ಳಲಾಗದ ಭೀಕರ ಪೆಟ್ಟು ನೀಡಿದ್ದಾರೆ.
ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರೊಂದಿಗೆ ಸಭೆ ನಡೆಸಿದ ಬಳಿಕ, ಈ ರೆಬೆಲ್ ಸಂಸದರ ದಂಡು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿವಾಸದಲ್ಲಿ ಒಟ್ಟುಗೂಡಿ ಈ ಮಹತ್ವದ ರಾಜಕೀಯ ತೀರ್ಮಾನ ಕೈಗೊಂಡಿದೆ.
ದೀದಿಯ ಆಪ್ತ ಸುದೀಪ್ ಬಂದ್ಯೋಪಾಧ್ಯಾಯ ಕೂಡ ಬಂಡಾಯ ಕ್ಯಾಂಪ್‌ಗೆ!
ಮಮತಾ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಾಯಕ ಸುದೀಪ್ ಬಂದ್ಯೋಪಾಧ್ಯಾಯ ಅವರು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಭೂಪೇಂದರ್ ಯಾದವ್ ಅವರನ್ನು ಭೇಟಿಯಾದ ಬೆನ್ನಲ್ಲೇ ಬಂಡಾಯಗಾರರ ಕೈಜೋಡಿಸಿದ್ದಾರೆ. ಇದು ರೆಬೆಲ್ ಪಡೆಗೆ ಆನೆ ಬಲ ತಂದಿದೆ.
ಈ ಕುರಿತು ಮಾತನಾಡಿದ ಸುದೀಪ್ ಬಂದ್ಯೋಪಾಧ್ಯಾಯ, ಪಕ್ಷದ ಬಹುಪಾಲು ಸಂಸದರು ಮತ್ತು ಶಾಸಕರು ಈ ಬದಲಾವಣೆಯನ್ನು ಬಯಸಿದ್ದಾರೆ. ಮಮತಾ ಅವರು ಕೇವಲ ಮುಖ್ಯ ಸಲಹೆಗಾರ್ತಿ ಮತ್ತು ಪಕ್ಷದ ಗೌರವಾನ್ವಿತ ನಾಯಕಿಯ ಸ್ಥಾನದಲ್ಲಿ ಇರಬೇಕು, ಪಕ್ಷದ ಚುಕ್ಕಾಣಿ ಬದಲಾಗಬೇಕು ಎಂಬುದು ಎಲ್ಲರ ಆಸೆ. ಅವರ ಈ ಭಾವನಾತ್ಮಕ ಮನವಿಗೆ ಸ್ಪಂದಿಸಿ ನಾನು ಈ ತೀರ್ಮಾನ ಮಾಡಿದ್ದೇನೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಮ್ಮುಖದಲ್ಲೇ ನಾನು ಸ್ಪೀಕರ್‌ಗೆ ನೀಡುವ ಪತ್ರಕ್ಕೆ ಅಧಿಕೃತವಾಗಿ ಸಹಿ ಹಾಕಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
"ನಾವೇ ಅಸಲಿ ಟಿಎಂಸಿ": ಸೋಮವಾರ ಸ್ಪೀಕರ್ ಮುಂದೆ ಹಕ್ಕು ಮಂಡನೆ
ಬಂಡಾಯ ಸಂಸದರ ಸಂಖ್ಯೆ ಈಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬಂಡಾಯ ಗುಂಪಿನ ಪ್ರಮುಖ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಮಾತನಾಡಿ, ನಮ್ಮ ಜೊತೆ ಸದ್ಯಕ್ಕೆ 20 ಸಂಸದರಿದ್ದಾರೆ, ಇನ್ನೂ ಇಬ್ಬರು ಸಂಸದರು ನಮ್ಮ ಬಣ ಸೇರಲಿದ್ದು ನಮ್ಮ ಸಂಖ್ಯಾಬಲ 22 ಕ್ಕೆ ಏರಲಿದೆ ಎಂದಿದ್ದಾರೆ.
ಮತ್ತೊಂದೆಡೆ, ರೆಬೆಲ್ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಮಾತನಾಡಿ, ನಾವು ಈಗಾಗಲೇ ಸ್ಪೀಕರ್ ಕಚೇರಿಗೆ ಪ್ರಾಥಮಿಕ ಪತ್ರ ಸಲ್ಲಿಸಿದ್ದೇವೆ. ನಾಳೆ ನಾವೆಲ್ಲರೂ ಖುದ್ದಾಗಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಸಂಸತ್ತಿನಲ್ಲಿ ನಮಗೇ ಅಸಲಿ ಟಿಎಂಸಿ ಸಂಸದೀಯ ಗುಂಪು ಎಂದು ಅಧಿಕೃತ ಮಾನ್ಯತೆ ನೀಡಬೇಕು ಎಂದು ಹಕ್ಕು ಮಂಡಿಸಲಿದ್ದೇವೆ ಎಂದು ಸಾರಿದ್ದಾರೆ.
ಮಮತಾ ಬಣದ ಭಾರಿ ಜರ್ನಲ್ ರೀಶಫಲ್; ವಿಲೀನವಾಗದಿದ್ದರೆ ಅನರ್ಹತೆ ಗ್ಯಾರಂಟಿ!
ಬಂಡಾಯ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಮತಾ, ಪಕ್ಷದ ಸಂಘಟನೆಯಲ್ಲಿ ಭಾರಿ ಸರ್ಜರಿ ನಡೆಸಿದ್ದಾರೆ. ಬಂಡಾಯವೆದ್ದ ಸುದೀಪ್ ಬಂದ್ಯೋಪಾಧ್ಯಾಯ ಅವರನ್ನು ಉತ್ತರ ಕೋಲ್ಕತಾ ಜಿಲ್ಲಾಧ್ಯಕ್ಷ ಸ್ಥಾನದಿಂದ ಕಿತ್ತೆಸೆದು ಕುನಾಲ್ ಘೋಷ್ ಅವರನ್ನು ನೇಮಿಸಿದ್ದಾರೆ. ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಶತಾಬ್ದಿ ರಾಯ್ ಅವರನ್ನು ತೆಗೆದು ಅಲಿಫಾ ಅಹ್ಮದ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ, ತಮ್ಮ ಜೊತೆ ಉಳಿದಿರುವ ನಿಷ್ಠಾವಂತ ಸಂಸದರ ಸಣ್ಣ ಗುಂಪಿಗೆ ಹಿರಿಯ ನಾಯಕ ಸೌಗತ ರಾಯ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಿಸಿದ್ದಾರೆ.
ಕಾನೂನಿನ ಚಾಟಿ ಬೀಸಿದ ಸಾಗರಿಕಾ ಘೋಷ್
ಟಿಎಂಸಿ ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್ ಅವರು ರೆಬೆಲ್ ಸಂಸದರಿಗೆ ಸಂವಿಧಾನದ 10ನೇ ವೇಳಾಪಟ್ಟಿಯ ಕಾನೂನಿನ ಎಚ್ಚರಿಕೆ ನೀಡಿದ್ದಾರೆ. ಒರಿಜಿನಲ್ ಪಕ್ಷದ ಸಿಂಬಲ್ ಮೇಲೆ ಗೆದ್ದಿರುವ ಸಂಸದರು ಸಂಸತ್ತಿನೊಳಗೆ ತಮಗೆ ಇಷ್ಟ ಬಂದಂತೆ ಪ್ರತ್ಯೇಕ ಗುಂಪು ಮಾಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಒಂದೋ ಅವರು ತಮ್ಮ ಮೂಲ ಪಕ್ಷವನ್ನು ಸಂಪೂರ್ಣವಾಗಿ ಮತ್ತೊಂದು ಪಕ್ಷದೊಂದಿಗೆ ವಿಲೀನ ಮಾಡಬೇಕು ಅಥವಾ ಸಂಸದ ಸ್ಥಾನಕ್ಕೆ ರಿಸೈನ್ ಮಾಡಿ ಮನೆಗೆ ಹೋಗಬೇಕು. ವಿಲೀನದ ಪ್ರಕ್ರಿಯೆ ನಡೆಯದಿದ್ದರೆ ಸಂವಿಧಾನದ ಪ್ರಕಾರ ಇವರೆಲ್ಲರೂ ಅನರ್ಹಗೊಳ್ಳುವುದು ನೂರಕ್ಕೆ ನೂರು ಗ್ಯಾರಂಟಿ ಎಂದು Xನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯ ಭೀಕರ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಈ ಮಹಾ ಬಿಕ್ಕಟ್ಟು ಈಗ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸುದೀರ್ಘ ರಾಜಕೀಯ ಸಾಮ್ರಾಜ್ಯದ ಅಂತ್ಯ ಹಾಡಲಿದೆಯೇ ಎಂಬ ಕುತೂಹಲ ಮೂಡಿಸಿದೆ.

