ನವದೆಹಲಿ: ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್-ಯುಜಿ ಮರುಪರೀಕ್ಷೆಯು ಇಂದು ಮಧ್ಯಾಹ್ನ ಆರಂಭವಾಗಿದೆ.
ಅಂಗವಿಕಲ ಅಭ್ಯರ್ಥಿಗಳಿಗೆ (ಪಿಡಬ್ಲ್ಯುಡಿ/ಪಿಡಬ್ಲ್ಯುಬಿಡಿ) ಸಂಜೆ 6.20ರವರೆಗೆ ಪರೀಕ್ಷೆ ಬರೆಯಲು ಅವಕಾಶವಿದೆ. ಇಂಗ್ಲಿಷ್ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಅಭ್ಯರ್ಥಿಗಳು ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರ ಒಳಗೆ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿದ್ದರು. ನಂತರ 1.30ಕ್ಕೆ ಕೇಂದ್ರಗಳ ಪ್ರವೇಶ ದ್ವಾರಗಳನ್ನು ಮುಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಪಾರದರ್ಶಕವಾಗಿರುವ ನೀರಿನ ಬಾಟಲಿ, ಮಧುಮೇಹ ಸಮಸ್ಯೆ ಇರುವ ಅಭ್ಯರ್ಥಿಗಳು ಮಧುಮೇಹ ಮಾತ್ರೆಗಳು, ಬಾಳೆಹಣ್ಣು, ಸೇಬು ಮತ್ತು ಕಿತ್ತಳೆ ಮುಂತಾದ ಹಣ್ಣುಗಳನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ.
ಸಾಂಪ್ರದಾಯಿಕ ಅಥವಾ ಧಾರ್ಮಿಕ ಉಡುಪುಗಳನ್ನು ಧರಿಸಿದ ಅಭ್ಯರ್ಥಿಗಳು, ಪೂರ್ಣ ತೋಳಿನ ಬಟ್ಟೆ ಅಥವಾ ಉಣ್ಣೆಯ ಬಟ್ಟೆಗಳನ್ನು ಧರಿಸಿದವರು ತಪಾಸಣೆ ಮಾಡಿಸಿಕೊಂಡರು ಎಂದು ಎನ್‌ಟಿಎ ತಿಳಿಸಿದೆ.
ಕಳೆದ ಮೇ 3ರಂದು ನಡೆದಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೂ ಒತ್ತಾಯ ಕೇಳಿಬಂದಿತ್ತು. ತದನಂತರ ಎನ್‌ಟಿಎ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ರದ್ದುಗೊಳಿಸಿ, ಮರುಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿತ್ತು.
ಒಟ್ಟು 95,000 ಪರೀಕ್ಷಾ ಕೊಠಡಿಗಳಿದ್ದು, ಪ್ರತಿಯೊಂದು ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಟ್ಟಾರೆ 1,38,560 ಸಿಸಿಟಿವಿ ಕ್ಯಾಮೆರಾಗಳ ಮೂಲಕ ನೇರ ಕಣ್ಗಾವಲು ಇರಿಸಲಾಗಿದೆ. ನಕಲು ತಡೆಗಟ್ಟಲು 51,311 ಜ್ಯಾಮರ್‌ಗಳನ್ನು ಬಳಸಲಾಗುತ್ತಿದೆ ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ 40 ರಿಂದ 50 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರೀಕ್ಷೆಯನ್ನು ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ, ಪೊಲೀಸ್, ಅರೆಸೇನಾ ಪಡೆ, ಭಾರತೀಯ ವಾಯುಪಡೆ ಹಾಗೂ ಅಂಚೆ ಇಲಾಖೆಯ ಸಹಯೋಗವನ್ನು ಪಡೆಯಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.

