ವಾಷಿಂಗ್ಟನ್ (PTI): ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ವಿಶ್ವಾಸಾರ್ಹ ಮತ್ತು ಸಮರ್ಥ ಪೂರೈಕೆ ಸರಪಳಿಯೊಂದನ್ನು ಸೃಷ್ಟಿಸುವ ಅಮೆರಿಕದ ಉಪಕ್ರಮಕ್ಕೆ ಭಾರತವೂ ಸೇರಿದಂತೆ 35 ರಾಷ್ಟ್ರಗಳು ಗುರುವಾರ ಸಹಿ ಹಾಕಿವೆ.
'ಎಐ ಯುಗದಲ್ಲಿ ಬೆಳವಣಿಗೆ-ನಾವೀನ್ಯ ಪರ ನಿಯಂತ್ರಣ ಕ್ರಮಗಳನ್ನು ಒಳಗೊಂಡ ಎಐ ಅವಕಾಶಗಳ ಕುರಿತ ಜಂಟಿ ಹೇಳಿಕೆಗೆ ಇಲ್ಲಿ ನಡೆದ ಎರಡನೇ ಪ್ಯಾಕ್ಸ್ ಸಿಲಿಕಾ ಶೃಂಗದಲ್ಲಿ 35 ದೇಶಗಳು ಸಹಿ ಹಾಕಿವೆ' ಎಂದು ಅಮೆರಿಕದ ಆರ್ಥಿಕ ವ್ಯವಹಾರಗಳ ಕುರಿತಾದ ರಾಜ್ಯ ಉಪ ಕಾರ್ಯದರ್ಶಿ ಜೇಕಬ್ ಹೆಲ್ಬರ್ಗ್ ತಿಳಿಸಿದ್ದಾರೆ.
'ಮೊದಲು ಯಾರು ನಿಯಂತ್ರಿಸುತ್ತಾರೆ ಎಂಬುದರ ಮೇಲೆ ಎಐನ ಭವಿಷ್ಯ ನಿರ್ಧಾರವಾಗುವುದಿಲ್ಲ. ಬದಲಾಗಿ, ಮೊದಲು ಯಾರು ನಿರ್ಮಾಣ ಮಾಡುತ್ತಾರೆ ಮತ್ತು ಯಾರು ಹೆಚ್ಚು ಸಾಮರ್ಥ್ಯದೊಂದಿಗೆ ತಯಾರಿಸುತ್ತಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ' ಎಂದು ಅವರು ಹೇಳಿದರು.
'ನಾವೆಲ್ಲ ಒಟ್ಟಾಗಿ ನಾಗರಿಕರಿಗೆ ನೆರವಾಗುವ, ಆರ್ಥಿಕತೆಗೆ ಬಲ ತುಂಬುವ ಮತ್ತು ಉದ್ಯಮಶೀಲತೆ, ಸಂಶೋಧನೆ ಹಾಗೂ ಕಾನೂನು ನಿಯಮಗಳನ್ನು ಬಲಗೊಳಿಸುವ ಭವಿಷ್ಯತ್ತಿನ ಕೃತಕ ಬುದ್ಧಿಮತ್ತೆಯನ್ನು ರೂಪಿಸುವುದು ಆಶಯ' ಎಂದರು.
ಭಾರತದ ಪರವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಸ್. ಕೃಷ್ಣನ್ ಮತ್ತು ವಿದೇಶಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ (ಅಮೆರಿಕ) ನಾಗರಾಜ್ ನಾಯ್ಡು ಹಾಗೂ ಉದ್ಯಮದ ಪ್ರತಿನಿಧಿಗಳು ಹಾಜರಿದ್ದರು.

