HEALTH TIPS

ಶೋಯಬ್ ಅಖ್ತರ್ ಅಣ್ಣನ ಅಂತ್ಯಕ್ರಿಯೆಗೆ ಬಂದ ಲಷ್ಕರ್ ಉಗ್ರ ಕಸೂರಿ: ವಿವರ ಇಲ್ಲಿದೆ

 ಇಸ್ಲಾಮಾಬಾದ್‌: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯಬ್‌ ಅಖ್ತರ್‌ ಅವರ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆಯ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಸೇರಿದಂತೆ ಹಲವು ಉಗ್ರರು ಭಾಗಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊಗಳು ಹಾಗೂ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸಂಚಲನ ಸೃಷ್ಟಿಸಿವೆ. 


ಶೋಯಬ್‌ ಅಣ್ಣ ಶಾಹಿದ್‌ ಅಖ್ತರ್‌ ಅವರು ಜೂನ್‌ 24ರಂದು ನಿಧನರಾದರು. ಅಂತ್ಯಕ್ರಿಯೆ ಇಸ್ಲಾಮಾಬಾದ್‌ನ ಎಚ್‌-8 ಸ್ಮಶಾನದಲ್ಲಿ ನಡೆದಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್‌ ದಾಳಿ, 2008ರಲ್ಲಿ ಮುಂಬೈನಲ್ಲಿ ನಡೆದ ಸರಣಿ ದಾಳಿ (26/11) ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳ ಹಿಂದೆ ಇರುವ ಎಲ್‌ಇಟಿಯ ಹಲವು ಉಗ್ರರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಎಲ್‌ಇಟಿಯ ರಾಜಕೀಯ ವೇದಿಕೆಯಾದ ಪಾಕಿಸ್ತಾನ್‌ ಮಾರ್ಕಾಜಿ ಮುಸ್ಲಿಂ ಲೀಗ್‌ (ಪಿಎಂಎಂಎಲ್‌) ಅಧ್ಯಕ್ಷ ಇನಾಮ್‌ ಉರ್‌ ರೆಹಮಾನ್‌ ಕೂಡ ಭಾಗಿಯಾಗಿದ್ದ ಎಂಬುದನ್ನು ತೋರುವ ದೃಶ್ಯಗಳು ಸದ್ಯ ಹರಿದಾಡುತ್ತಿರುವ ವಿಡಿಯೊಗಳಲ್ಲಿವೆ.

ವಿಶ್ವಸಂಸ್ಥೆಯೇ ಭಯೋತ್ಪಾದಕ ಎಂದು ಹೆಸರಿಸಿರುವ ಹಫೀಜ್‌ ಸಯೀದ್‌, ಜಮಾತ್-ಉದ್-ದವಾ (ಜೆಯುಡಿ) ಮತ್ತು ಮಿಲ್ಲಿ ಮುಸ್ಲಿಂ ಲೀಗ್‌ನಂತಹ (ಎಂಎಂಎಲ್) ತನ್ನ ಸಂಘಟನೆಗಳ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಗೂ ದೇಶೀಯವಾಗಿ ಇರುವ ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪಿಎಂಎಂಎಲ್ ಅನ್ನು ಸ್ಥಾಪಿಸಿದ್ದ. ಈ ಪಕ್ಷವು 2024ರ ಚುನಾವಣೆಯಲ್ಲೂ ಕಣಕ್ಕಿಳಿದಿತ್ತು.

ಕಸೂರಿಯಂತಹ ಉಗ್ರರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು, ಪಾಕಿಸ್ತಾನವು ಭಯೋತ್ಪಾದನಾ ಕೃತ್ಯಗಳಿಗೆ ಮತ್ತು ಭಾರತ ವಿರೋಧಿ ಶಕ್ತಿಗಳಿಗೆ ನಿರಂತರ ಬೆಂಬಲ ನೀಡುತ್ತಿರುವುದನ್ನು ಖಾತ್ರಿಪಡಿಸಿದೆ. ಏತನ್ಮಧ್ಯೆ, ಇಂತಹ ನಿಷೇಧಿತ ಸಂಘಟನೆಗಳು ಪಾಕಿಸ್ತಾನದಲ್ಲಿ ಹೊಂದಿರುವ ಪ್ರಭಾವದ ಬಗ್ಗೆಯೂ ಪ್ರಶ್ನೆಗಳು, ಕಳವಳಗಳು ವ್ಯಕ್ತವಾಗುತ್ತಿವೆ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 2011ರಲ್ಲೇ ವಿದಾಯ ಹೇಳಿರುವ ಶೋಯಬ್‌ ಅಖ್ತರ್‌, ಸದ್ಯ ಆಟದ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ.

ಕಸೂರಿ ಕಳವಳ!ಕಸೂರಿ ಸಾರ್ವಜನಿಕವಾಗಿಯೇ ಸಕ್ರಿಯವಾಗಿರುವುದು ಭಾರತದ ಮಟ್ಟಿಗೆ ಸಹಜವಾಗಿಯೇ ಆತಂಕಕಾರಿ ಸಂಗತಿ. ಲಷ್ಕರ್‌ ಸಂಘಟನೆಯು ಉಪ ಮುಖ್ಯಸ್ಥನಾಗಿರುವ ಈತ, ಭಾರತ ವಿರೋಧಿ ಪ್ರಚೋದನಕಾರಿ ಹೇಳಿಕೆ ನೀಡುವುದರಲ್ಲಿ ನಿಸ್ಸೀಮ.

ಭಾರತದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ 2025ರ ಏಪ್ರಿಲ್‌ 22ರಂದು ನಡೆದ ಭಯೋತ್ಪಾದಕ ದಾಳಿ ವೇಳೆ 26 ಪ್ರವಾಸಿಗರು ಹತ್ಯೆಯಾಗಿದ್ದರು. ಈ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿ, ತಕ್ಕ ಪ್ರತ್ಯುತ್ತರ ನೀಡಿದ್ದವು. ಅದಾದ ನಂತರ, ಕಸೂರಿ ಹಲವು ಸಲ ಭಾರತ ವಿರೋಧಿ ದ್ವೇಷ ಭಾಷಣಗಳನ್ನು ಮಾಡಿದ್ದ. 26/11 ಮಾದರಿಯ ಮತ್ತೊಂದು ದಾಳಿ ಸಂಘಟಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾನೆ.

ಫೆಬ್ರುವರಿಯಲ್ಲಿ ವಿಡಿಯೊವೊಂದನ್ನು ಹರಿಬಿಟ್ಟಿದ್ದ ಕಸೂರಿ, ಭಾರತವನ್ನು ಉದ್ದೇಶಿಸಿ, ಶತ್ರುವಿಗೆ ನೆಲ, ವಾಯು ಇಲ್ಲವೇ ಸಾಗರ; ಯಾವುದೇ ಮಾರ್ಗವನ್ನೂ ಉಳಿಸುವುದಿಲ್ಲ ಎಂದು ಬೆದರಿಸುವ ಯತ್ನ ಮಾಡಿದ್ದ.

ಸಿಂಧೂ ನದಿ ಒಪ್ಪಂದದ ವಿಚಾರವಾಗಿ ಭಾರತವು 'ಜಲ ಭಯೋತ್ಪಾದನೆ' ನಡೆಸುತ್ತಿದೆ ಎಂದು ಆರೋಪಿಸಿದ್ದ ಈತ, ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ಮೂಲಕ ಉತ್ತರಿಸುತ್ತೇವೆ ಎಂದೂ ಹೇಳಿದ್ದ.

ಮತ್ತೊಂದು ವಿಡಿಯೊದಲ್ಲಿ, ಎಲ್‌ಇಟಿಗೆ ಪಾಕ್ ಸೇನೆ ನೀಡುತ್ತಿರುವ ಬೆಂಬಲದ ಬಗ್ಗೆಯೂ ಮಾತನಾಡಿದ್ದ. ಸೇನೆಯು ತನ್ನ ಕಾರ್ಯಕ್ರಮಗಳಿಗೆ ಮತ್ತು ಯೋಧರ ಅಂತ್ಯಸಂಸ್ಕಾರದ ಪ್ರಾರ್ಥನೆಗಳನ್ನು ಮುನ್ನಡೆಸಲು ಆಗಾಗ್ಗೆ ತನಗೆ ಆಹ್ವಾನ ನೀಡುತ್ತದೆ ಎಂದೂ ಹೇಳಿಕೊಂಡಿದ್ದ.

'ಆಪರೇಷನ್‌ ಸಿಂಧೂರ' ದಾಳಿಯಿಂದ ಭಾರಿ ಪೆಟ್ಟು ತಿಂದಿರುವ ಎಲ್‌ಇಟಿ, ಮರುಸಂಘಟನೆಯಲ್ಲಿ ತೊಡಗಿದೆ ಎಂಬ ವಿಚಾರ ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries