ತಿರುವನಂತಪುರ: 'ಕೇರಳಂ ರಾಜ್ಯದ ಖಜಾನೆ ಖಾಲಿಯಾಗಿದ್ದು, ಹಿಂದಿನ ಎಲ್ಡಿಎಫ್ ಸರ್ಕಾರದ ಆಡಳಿತದಲ್ಲಿ ₹5.07 ಲಕ್ಷ ಕೋಟಿ ಸಾಲ ಉಳಿಸಿಕೊಳ್ಳಲಾಗಿದೆ' ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ವಾಗ್ದಾಳಿ ನಡೆಸಿದ್ದಾರೆ.
ಖಜಾನೆಯಲ್ಲಿ ಸುಮಾರು ₹6 ಸಾವಿರ ಕೋಟಿಯಷ್ಟು ಮೊತ್ತ ಬಾಕಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ, ಜನರನ್ನು ದಾರಿತಪ್ಪಿಸಲು ಎಲ್ಡಿಎಫ್ ಸೃಷ್ಟಿಸಿದ ಕಟ್ಟುಕಥೆಯಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಜನರ ದಾರಿ ತಪ್ಪಿಸಿದೆ ಎಂದು ಆರೋಪಿದ್ದಾರೆ.
'ವಾಸ್ತವದಲ್ಲಿ ಕೇರಳಂ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯಿಂದ (ಕೆಐಐಎಫ್ಬಿ) ಪಡೆದ ಸಾಲ, ಕೇರಳಂನ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಸಪ್ಲೆಕೋ) ₹2 ಸಾವಿರ ಕೋಟಿ ಸಾಲ ಬಾಕಿ ಸೇರಿ ಖಜನಾನೆಯಲ್ಲಿ ಭಾರಿ ಪ್ರಮಾಣದಲ್ಲಿ ಸಾಲ ಬಾಕಿ ಇದೆ' ಎಂದು ಉಲ್ಲೇಖಿಸಿದ್ದಾರೆ.
'ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಸಾವಿರಾರು ಕೋಟಿಯಷ್ಟು ಡಿ.ಎ ಮತ್ತು ಡಿ.ಆರ್ ಬಾಕಿಯನ್ನು ಉಳಿಸಿಕೊಳ್ಳಲಾಗಿದೆ' ಎಂದು ಸತೀಶನ್ ದೂರಿದ್ದಾರೆ.
'ಕೇರಳಂ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಗೆ ಸುಮಾರು ₹56 ಸಾವಿರ ಕೋಟಿಯಷ್ಟು ಸಾಲ ಮರುಪಾವತಿಸಬೇಕಿದೆ. ಹಿಂದೆ ವಿರೋಧ ಪಕ್ಷದ ಮುಖಂಡನಿದ್ದಾಗ, ಕೆಐಐಎಫ್ಬಿಯಿಂದ ಸಾಲ ಪಡೆಯುವುದಕ್ಕೆ ಮಿತಿ ಇರಲಿ ಎಂದು ಹಲವು ಬಾರಿ ಎಚ್ಚರಿಕೆ ನೀಡಿದರೂ, ಎಲ್ಡಿಎಫ್ ಕಿವಿಗೆ ಹಾಕಿಕೊಳ್ಳದ ಕಾರಣ ಈಗ ರಾಜ್ಯದ ಆರ್ಥಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ' ಎಂದು ಅವರು ದೂರಿದರು.
ವಿಧಾನಸಭೆಯಲ್ಲಿ ಗುರುವಾರ, ರಾಜ್ಯಪಾಲರ ನೀತಿ ಘೋಷಣೆ ಭಾಷಣಕ್ಕೆ ಪ್ರತಿಯಾಗಿ ಧನ್ಯವಾದ ಸಲ್ಲಿಸುವ ವೇಳೆ, ಸತೀಶನ್ ರಾಜ್ಯದ ಆರ್ಥಿಕ ಚಿತ್ರಣ ತೆರೆದಿಟ್ಟರು.
'ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಮಂಡಿಸುವ ಮೊದಲು ವಾಸ್ತವ ಅಂಶಗಳ ಕುರಿತು ಪರಿಶೀಲನೆ ನಡೆಸಲಾಗಿತ್ತೇ ಎಂದು ಸತೀಶನ್, ಮಾಜಿ ಮುಖ್ಯಮಂತ್ರಿ, ಈಗಿನ ವಿರೋಧ ಪಕ್ಷದ ಮುಖಂಡ ಪಿಣರಾಯಿ ವಿಜಯನ್ ಅವರನ್ನು ಪ್ರಶ್ನಿಸಿದರು.

