HEALTH TIPS

ಜೂ. 6ರಂದು ಭಾರತಕ್ಕೆ ಆಗಮಿಸಲಿರುವ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದಿಪ್ಕೆ; ಧರ್ಮೇಂದ್ರ ಪ್ರಧಾನ್ ರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ

ನವದೆಹಲಿ: NEET UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6ರಂದು ಭಾರತಕ್ಕೆ ಆಗಮಿಸಿ ಹೊಸದಿಲ್ಲಿಯ ಜಂತರ್ ಮಂತರ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಸೋಮವಾರ ಘೋಷಿಸಿದ್ದಾರೆ.

ಅಮೆರಿಕದ ಬೋಸ್ಟನ್ ನಲ್ಲಿ ನೆಲೆಸಿರುವ ದಿಪ್ಕೆ, ಭಾರತಕ್ಕೆ ಮರಳಿದ ಬಳಿಕ ಪ್ರತಿಭಟನೆಯ ನೇತೃತ್ವ ವಹಿಸುವುದಾಗಿ ಎಕ್ಸ್ ನಲ್ಲಿ ಪ್ರಕಟಿಸಿದ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. NEET ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅದರ ಪರಿಣಾಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

'ಭಾರತದ ಸಂವಿಧಾನ ನೀಡಿರುವ ಹಕ್ಕಿನಡಿ ನಾವೆಲ್ಲರೂ ಒಂದಾಗಿ ಸೇರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುವ ಸಮಯ ಬಂದಿದೆ. ಇದಕ್ಕಾಗಿ ಶಾಂತಿಯುತವಾಗಿ ಧ್ವನಿ ಎತ್ತಬೇಕು' ಎಂದು ಅವರು ಹೇಳಿದ್ದಾರೆ.

ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಆರಂಭಿಸಲಾದ ಆನ್ಲೈನ್ ಮನವಿಗೆ ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ ಎಂದು ದಿಪ್ಕೆ ಪ್ರತಿಪಾದಿಸಿದ್ದಾರೆ. ಲಕ್ನೊ, ಜೈಪುರ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳ ಮೂಲಕ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದೆ ಎಂದಿದ್ದಾರೆ.

NEET, CBSE ಮತ್ತು CUET ಸೇರಿದಂತೆ ಪ್ರಮುಖ ಪರೀಕ್ಷೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ ಎಂದು ಆರೋಪಿಸಿರುವ ಅವರು, 'ಇಷ್ಟು ದೊಡ್ಡ ಪ್ರಮಾದದ ಬಳಿಕವೂ ಸಚಿವರು ರಾಜೀನಾಮೆ ನೀಡದಿದ್ದರೆ, ದೇಶದಲ್ಲಿ ಯಾವುದೇ ಹೊಣೆಗಾರಿಕೆ ಉಳಿದಿಲ್ಲ ಎಂಬುದನ್ನು ಅದು ಸೂಚಿಸುತ್ತದೆ' ಎಂದು ಹೇಳಿದ್ದಾರೆ.

ಜೂನ್ 6ರಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರಿಂದ ಅನುಮತಿ ಪಡೆಯಲಾಗುವುದು ಎಂದು ತಿಳಿಸಿರುವ ದಿಪ್ಕೆ, ಚಳುವಳಿ ಸಂಪೂರ್ಣ ಅಹಿಂಸಾತ್ಮಕವಾಗಿರಲಿದೆ ಎಂದು ಹೇಳಿದ್ದಾರೆ. ಸರ್ಕಾರದಿಂದ ಉತ್ತರದಾಯಿತ್ವವನ್ನು ಪಡೆಯಲು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುವಂತೆ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಅವರು ಕರೆ ನೀಡಿದ್ದಾರೆ.

ಬಂಧನದ ಸಾಧ್ಯತೆ ಕುರಿತು ವ್ಯಕ್ತವಾಗಿರುವ ಆತಂಕಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ನನ್ನ ಸ್ನೇಹಿತರು ಹಾಗೂ ಕುಟುಂಬದವರು ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭಾರತವು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ಸಿಗುತ್ತದೆ ಎಂಬ ನಂಬಿಕೆ ನನಗಿದೆ' ಎಂದು ಹೇಳಿದ್ದಾರೆ.

'ನಾನು ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್ ಮತ್ತು ಜವಾಹರಲಾಲ್ ನೆಹರೂ ಅವರ ದೊಡ್ಡ ಅಭಿಮಾನಿ. ಪ್ರಜಾಪ್ರಭುತ್ವದಲ್ಲಿ ಧ್ವನಿ ಎತ್ತುವ ಹಕ್ಕನ್ನು ನೀಡುವ ಭಾರತದ ಸಂವಿಧಾನದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ' ಎಂದಿದ್ದಾರೆ.

'ನಾವು ಇನ್ನೆಷ್ಟು ದಿನ ಭಯದಲ್ಲೇ ಬದುಕಬೇಕು? ಈ ದೇಶ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಇದು ನಮ್ಮೆಲ್ಲರ ದೇಶ. ನಮ್ಮ ಭವಿಷ್ಯದ ಪ್ರಶ್ನೆ ಎದುರಾಗಿದೆ. ದೇಶದಲ್ಲಿ ಎಲ್ಲಿಯಾದರೂ ತಪ್ಪು ನಡೆದರೆ, ಅದರ ವಿರುದ್ಧ ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ರೀತಿಯಲ್ಲಿ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿ' ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಹಲವು ಉದ್ಯೋಗಾವಕಾಶಗಳು ಬಂದಿದ್ದರೂ, NEET ವಿವಾದದಿಂದ ತೊಂದರೆ ಅನುಭವಿಸಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಲು ಹಾಗೂ ದೇಶಕ್ಕಾಗಿ ಕೆಲಸ ಮಾಡಲು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ ಎಂದು ದಿಪ್ಕೆ ತಿಳಿಸಿದ್ದಾರೆ.

'ಕಳೆದ ಕೆಲವು ದಿನಗಳಲ್ಲಿ ನನಗೆ ಅನೇಕ ಉದ್ಯೋಗಾವಕಾಶಗಳು ಬಂದಿದ್ದವು. ಆದರೆ ನಾನು ಅವುಗಳನ್ನು ಸ್ವೀಕರಿಸುವುದಿಲ್ಲ. ನನ್ನ ದೇಶವನ್ನು ನಾನು ಪ್ರೀತಿಸುತ್ತೇನೆ. ದೇಶಕ್ಕಾಗಿ ಏನಾದರೂ ಮಾಡಲು ಬಯಸುತ್ತೇನೆ. ಇಂದು ನಾವು ಏನಾಗಿದ್ದೇವೋ ಅದಕ್ಕೆ ಈ ದೇಶವೇ ಕಾರಣ' ಎಂದು ಹೇಳಿದ್ದಾರೆ.

NEET ಪರೀಕ್ಷೆಯ ಅಕ್ರಮಗಳಿಗೆ ಸಂಬಂಧಿಸಿದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ 'ಜಿರಳೆಗಳು' ಎಂಬ ಪದ ಬಳಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಈ ಬೆಳವಣಿಗೆಯ ನಂತರ ದಿಪ್ಕೆ 'ಕಾಕ್ರೋಚ್ ಜನತಾ ಪಕ್ಷ' ಎಂಬ ವಿಡಂಬನಾತ್ಮಕ ರಾಜಕೀಯ ಚಳುವಳಿಯನ್ನು ಆರಂಭಿಸಿದ್ದರು. 'ಜಿರಳೆ' ಎಂಬ ಪದವನ್ನು ಯುವಜನರ ಕ್ರಿಯಾಶೀಲತೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆಗೆ ಒತ್ತಾಯಿಸುವ ಸಂಕೇತವಾಗಿ ಪರಿವರ್ತಿಸುವ ಉದ್ದೇಶದಿಂದ ಈ ಚಳುವಳಿಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದ್ದರು.

►NEET ವಿವಾದ

ಮೇ 3ರಂದು ನಡೆದ NEET UG 2026 ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳ ನಡುವೆ ಪ್ರಸಾರವಾಗಿದ್ದ 'ಊಹೆ ಪ್ರಶ್ನೆಪತ್ರಿಕೆಗಳು' ಹಾಗೂ ಅಣಕು ಪ್ರಶ್ನೆಪತ್ರಿಕೆಗಳಲ್ಲಿ, ನಿಜವಾದ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಹೋಲುವ ಹಲವು ಪ್ರಶ್ನೆಗಳು ಕಂಡುಬಂದಿದ್ದವು. ಈ ಬೆಳವಣಿಗೆಯ ಬಳಿಕ ದಿಪ್ಕೆ, ಧರ್ಮೇಂದ್ರ ಪ್ರಧಾನ್ ಅವರ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿದ್ದರು.

ಪ್ರಕರಣ ಬೆಳಕಿಗೆ ಬಂದ ನಂತರ ಕೇಂದ್ರ ಸರ್ಕಾರವು ಸಿಬಿಐ ತನಿಖೆಗೆ ಆದೇಶಿಸಿತ್ತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಮೇ 3ರಂದು ನಡೆದ ಪರೀಕ್ಷೆಗೆ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ರದ್ದುಗೊಂಡ ಪರೀಕ್ಷೆಯನ್ನು ಹೆಚ್ಚುವರಿ ಭದ್ರತಾ ಕ್ರಮಗಳೊಂದಿಗೆ ಜೂನ್ 21ರಂದು ಮತ್ತೆ ನಡೆಸಲು ನಿರ್ಧರಿಸಲಾಗಿದೆ.

ತಮ್ಮ ರಾಜೀನಾಮೆಗೆ ಆಗ್ರಹಗಳು ಹೆಚ್ಚುತ್ತಿರುವ ನಡುವೆಯೇ, ಧರ್ಮೇಂದ್ರ ಪ್ರಧಾನ್ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ತನಿಖೆ ಮತ್ತು ಸರಿಪಡಿಸುವ ಕ್ರಮಗಳ ಮೂಲಕ ಹೊಣೆಗಾರಿಕೆಯನ್ನು ಖಚಿತಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ, ನ್ಯಾಯಸಮ್ಮತ ಮತ್ತು ಪಾರದರ್ಶಕ ಮರುಪರೀಕ್ಷೆ ನಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries