ಇಂದೋರ್: ಯೋಗಪಟುಗಳು ಅಭ್ಯಾಸದ ವೇಳೆ ಯೋಗದ ಭಂಗಿಯಲ್ಲಿ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಲು ಸಹಾಯವಾಗುವಂತೆ 'ಎಐ ಯೋಗ ಕೋಚ್' ಹೆಸರಿನ ಮಾದರಿಯೊಂದನ್ನು ಇಂದೋರ್ ಮೂಲದ ಸಂಸ್ಥೆಯು ಅಭಿವೃದ್ಧಿಪಡಿಸಿದೆ.
ಈ ಎಐ ಮಾಡೆಲ್ 2 ಲಕ್ಷದ 80 ಸಾವಿರ ಫೋಟೊಗಳ ಸಹಾಯದಿಂದ ಸೂರ್ಯ ನಮಸ್ಕಾರ, 104 ಯೋಗ ಭಂಗಿಗಳನ್ನು ವಿಶ್ಲೇಷಿಸಲಿದೆ.
ಜೂನ್ 21ರಂದು ಜರಗುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಇದರ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ.
ರಾಜ್ಯ ಸರ್ಕಾರದ ವತಿಯಿಂದ ನಡೆಯುವ ಶ್ರೀ ಜಿ.ಎಸ್ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆಯ(ಎಸ್ಜಿಎಸ್ಐಟಿಎಸ್) ಸಂಶೋಧಕರು 'ಎಐ ಯೋಗ ಕೋಚ್' ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಮಧ್ಯ ಪ್ರದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯು(ಎಂಪಿಸಿಎಸ್ಟಿ) ₹7.10 ಲಕ್ಷ ಅನುದಾನ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಜಗತ್ತಿನ ಹಲವು ಕಡೆಗಳಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿದೆ. ಆದರೆ, ಬಹುತೇಕರಿಗೆ ಸರಿಯಾದ ಭಂಗಿಗಳ ಪರಿಚಯವಿಲ್ಲ. ಹಾಗಾಗಿ, ಎಐ ಮಾಡೆಲ್ ಮೂಲಕ ತಪ್ಪಾದ ಭಂಗಿಗಳನ್ನು ಗುರುತಿಸುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಯೋಗಪಟುಗಳಿಗೆ ಉಪಯೋಗವಾಗಲಿದೆ ಎಂದು ಯೋಜನೆಯ ಪ್ರಧಾನ ತನಿಖಾಧಿಕಾರಿ ಲಲಿತ್ ಪುರೋಹಿತ್ ತಿಳಿಸಿದ್ದಾರೆ.
ಡೀಪ್ ಲರ್ನಿಂಗ್, ಮೆಷಿನ್ ಲರ್ನಿಂಗ್ ಮತ್ತು ಕಂಪ್ಯೂಟರ್ ವಿಷನ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸಣ್ಣ-ಪುಟ್ಟ ತಪ್ಪುಗಳನ್ನು ಕೂಡ ಇದು ಕಂಡು ಹಿಡಿಯಲಿದೆ. ಇದನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

