ನವದೆಹಲಿ: 'ಐದು ರಾಜ್ಯಗಳಲ್ಲಿ ಈಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಅತ್ಯಧಿಕವಾಗಿ ಮತ ಚಲಾವಣೆ ಆಗಿದ್ದು, ಇದು ಮತದಾರರು ಚುನಾವಣಾ ವ್ಯವಸ್ಥೆಯ ಮೇಲಿಟ್ಟಿರುವ ವಿಶ್ವಾಸದ ದ್ಯೋತಕವಾಗಿದೆ' ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪ್ರತಿಪಾದಿಸಿದ್ದಾರೆ.
'ಜಾಗತಿಕವಾಗಿ ಅತ್ಯುತ್ತಮ ಚುನಾವಣಾ ಮಾಧ್ಯಮ ಪ್ರಚಾರ ಅಭಿಯಾನ' ಕುರಿತು ಬುಧವಾರ ಇಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, 'ದೇಶದಲ್ಲಿ 100 ಕೋಟಿಗೂ ಅಧಿಕ ಮತದಾರರ ಜೊತೆ ಸಂಪರ್ಕ ಹೊಂದಲು ಆಯೋಗವು ಕೆಳಮಟ್ಟದಲ್ಲಿ ಬಿಎಲ್‌ಒ, ಬಿಎಲ್‌ಎಗಳಿಗೆ ತರಬೇತಿ ನೀಡಿತ್ತು' ಎಂದರು.
ಆಯೋಗದ ದತ್ತಾಂಶಗಳ ಪ್ರಕಾರ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೆರಿಯಲ್ಲಿ ಇತ್ತೀಚೆಗೆ ನಡೆದಿದ್ದ ಚುನಾವಣೆಗಳಲ್ಲಿ, 1951ರ ನಂತರ ಅತ್ಯಧಿಕ ಪ್ರಮಾಣದಲ್ಲಿ ಮತ ಚಲಾವಣೆ ಆಗಿದೆ.

