ದುಬೈ: ಇರಾನ್ ಮತ್ತು ಅಮೆರಿಕದ ನಡುವೆ ಸಂಘರ್ಷ ಉದ್ವಿಗ್ನಗೊಂಡಿರುವ ಹಿನ್ನೆಲೆ ತನ್ನ ವಾಯುಪ್ರದೇಶ ಮುಚ್ಚಿರುವುದಾಗಿ ಕುವೈತ್‌ನ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಗುರುವಾರ ತಿಳಿಸಿದೆ.
'ಇರಾನ್‌ನ ಆಕ್ರಮಣಕಾರಿ ದಾಳಿಗೆ ಕುವೈತ್ ಬಲಿಯಾಗುತ್ತಿದೆ. ಇದು ಈ ಪ್ರಾಂತ್ಯದ ವಿಮಾನ ಹಾರಾಟದ ಮೇಲೂ ಪರಿಣಾಮ ಬೀರುತ್ತಿದೆ.
ಇರಾನ್‌ನ ದಾಳಿಯಿಂದ ಉಂಟಾಗಬಹುದಾದ ಸಂಭಾವ್ಯ ಅಪಾಯಗಳಿಂದ ನಾಗರಿಕರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಅದು ತಿಳಿಸಿದೆ.
ಇರಾನ್ ದಾಳಿಯನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ಸಿಯಾಗಿ ಹಿಮ್ಮೆಟ್ಟಿಸಿದೆ ಎಂದು ಕುವೈತ್ ಸೇನೆಯು ಘೋಷಿಸಿದ ಬೆನ್ನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ. ಇದಕ್ಕೂ ಮುನ್ನ ವಿಮಾನಗಳು ಕೆಲವು ಸಮಯದವರೆಗೆ ಕುವೈತ್‌ನ ಹೊರವಲಯದಲ್ಲಿ ಸುತ್ತು ಹಾಕಿದ್ದವು.
ಕೆಲ ದಿನಗಳ ಹಿಂದೆ ಕುವೈತ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ನೇರ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಒಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.

