ಪಟ್ನಾ: ಬಿಹಾರ ಸರ್ಕಾರ ಶನಿವಾರ (ಜೂನ್ 20) ಭರತ್ ಭೂಷಣ್ ತಿವಾರಿ (28) ಅವರ ನಕಲಿ ಎನ್ಕೌಂಟರ್ ಆರೋಪದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಭೋಜಪುರ ಜಿಲ್ಲೆಯ ಶಾಹ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ (ಜೂನ್ 17) ಈ ಘಟನೆ ನಡೆದಿತ್ತು. ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯ ಪೊಲೀಸ್ ಎನ್ಕೌಂಟರ್ ಬಗ್ಗೆ ಆಡಳಿತಾರೂಢ ಪಕ್ಷದ ನಾಯಕರು ಸೇರಿದಂತೆ ಹಲವರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಘಟನೆಯು ಇಡೀ ಪ್ರದೇಶದಲ್ಲಿ ತೀವ್ರ ಸಾರ್ವಜನಿಕ ಆಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿದೆ.
"ಭೋಜಪುರ ಜಿಲ್ಲೆಯ ಶಾಹ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲೌತಿ ಗ್ರಾಮದಲ್ಲಿ 17.06.2026ರಂದು ನಡೆದ ಪೊಲೀಸ್ ಎನ್ಕೌಂಟರ್ನ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಸಂಪೂರ್ಣ ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯೊಂದಿಗೆ ಘಟನೆಯ ಎಲ್ಲಾ ಆಯಾಮಗಳ ಬಗ್ಗೆ ಸಮಗ್ರ ತನಿಖೆಯನ್ನು ಖಚಿತಪಡಿಸಿಕೊಳ್ಳುವುದು ಈ ನ್ಯಾಯಾಂಗ ತನಿಖೆಯ ಉದ್ದೇಶವಾಗಿದೆ" ಎಂದು ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
2026ರ ಜೂನ್ 16 ಮತ್ತು 17ರಂದು ಭೋಜಪುರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಬಿಡುಗಡೆಯಾದ ಎರಡು ಪತ್ರಿಕಾ ಪ್ರಕಟಣೆಗಳಲ್ಲಿ ಬೇರೆ ಬೇರೆ ರೀತಿಯ ಸಮರ್ಥನೆಗಳನ್ನು ನೀಡಿದ ಕಾರಣ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜೂನ್ 16ರ ಪ್ರಕಟಣೆಯಲ್ಲಿ, "ವ್ಯಕ್ತಿಯೊಬ್ಬ ಆಯುಧವನ್ನು ಹಿಡಿದುಕೊಂಡು ತಿರುಗಾಡುತ್ತಿದ್ದಾನೆ ಎಂದು ಶಾಹ್ಪುರ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿತ್ತು. ಆದರೆ ಆತ ಮಾನಸಿಕವಾಗಿ ಅಸ್ವಸ್ಥನಾಗಿರುವುದನ್ನು ಪೊಲೀಸ್ ತಂಡ ಪತ್ತೆಹಚ್ಚಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಆತನಿಗೆ ಚಿಕಿತ್ಸೆ ಮತ್ತು ಆರೈಕೆ ನೀಡಲು ಮಾನಸಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಆತನ ವಶದಲ್ಲಿರುವ ಆಯುಧವನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲು ಪೊಲೀಸ್ ತಂಡ ನಿರಂತರ ಪ್ರಯತ್ನ ನಡೆಸುತ್ತಿದೆ" ಎಂದು ತಿಳಿಸಲಾಗಿತ್ತು.
ಮರುದಿನ, ಅಂದರೆ ಈ ನಕಲಿ ಎನ್ಕೌಂಟರ್ ನಡೆದ ದಿನದಂದು ಪೊಲೀಸರು ಮತ್ತೊಂದು ಪ್ರಕಟಣೆ ಬಿಡುಗಡೆ ಮಾಡಿ, "2026ರ ಜೂನ್ 17ರ ಬೆಳಿಗ್ಗೆ ಸುಮಾರು 9 ಗಂಟೆಗೆ ಭರತ್ ಭೂಷಣ್ ತಿವಾರಿ ಎಂಬ ವ್ಯಕ್ತಿ ಪಿಸ್ತೂಲು ಹಿಡಿದು ಹಾರಿಸುತ್ತಾ ಸಾರ್ವಜನಿಕರಿಗೆ ಬೆದರಿಕೆ ಒಡ್ಡುತ್ತಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಪೊಲೀಸರು ಮತ್ತು ಭೋಜಪುರ ಎಸ್ಟಿಎಫ್ ತಂಡ ಆತನಿಗೆ ಶರಣಾಗುವಂತೆ ಪದೇ ಪದೇ ಸೂಚಿಸಿದರೂ, ಆತ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಪೊಲೀಸರ ಕಡೆಗೆ ಗುಂಡು ಹಾರಿಸುವುದನ್ನು ಮುಂದುವರಿಸಿದ್ದ. ಆತನ ಈ ವರ್ತನೆ ಪೊಲೀಸ್ ತಂಡ ಮತ್ತು ಸಾರ್ವಜನಿಕರ ಜೀವ ಹಾಗೂ ಸುರಕ್ಷತೆಗೆ ತೀವ್ರ ಅಪಾಯ ತಂದೊಡ್ಡಿತ್ತು" ಎಂದು ಹೇಳಲಾಗಿತ್ತು.
"ಪರಿಸ್ಥಿತಿಯನ್ನು ಹತೋಟಿಗೆ ತರಲು, ಬುಲೆಟ್ಪ್ರೂಫ್ ಜಾಕೆಟ್ಗಳನ್ನು ಧರಿಸಿದ್ದ ಎಸ್ಟಿಎಫ್ ಸಿಬ್ಬಂದಿ ಆ ವ್ಯಕ್ತಿಯನ್ನು ಸುತ್ತುವರೆಯಲು ಯತ್ನಿಸಿದರು. ಪೊಲೀಸರು ಆತನ ಹತ್ತಿರ ಹೋಗುತ್ತಿದ್ದಂತೆ, ಆತ ಪೊಲೀಸರ ಮೇಲೆಯೇ ಗುಂಡು ಹಾರಿಸಿದ. ಇದಕ್ಕೆ ಪ್ರತಿಯಾಗಿ ಪೊಲೀಸ್ ತಂಡವು ಆತ್ಮರಕ್ಷಣೆಗಾಗಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಯಾಗಿ ಗುಂಡು ಹಾರಿಸಿತು. ಈ ವೇಳೆ ಗುಂಡು ಆತನ ಕಾಲಿಗೆ ತಗುಲಿತ್ತು. ನಂತರ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆತ ಮೃತಪಟ್ಟಿದ್ದಾನೆ. ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ತಿಳಿಸಲಾಗಿತ್ತು.
ಆದರೆ, ಅದೇ ದಿನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ವೈರಲ್ ಆಗಿತ್ತು. ಅದರಲ್ಲಿ ಆ ವ್ಯಕ್ತಿ ತನ್ನ ಪಿಸ್ತೂಲನ್ನು ದೂರ ಎಸೆದು ಪೊಲೀಸರ ಮುಂದೆ ಶರಣಾಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಪೊಲೀಸರು ತನ್ನನ್ನು ಎದುರಿಸಲು ಗ್ರಾಮಕ್ಕೆ ಬಂದಾಗ ಸಂತ್ರಸ್ತನೇ ಮಾಡಿದ್ದ ಫೇಸ್ಬುಕ್ ಲೈವ್ ಪ್ರಸಾರದಲ್ಲೂ ಇದೇ ದೃಶ್ಯಾವಳಿ ಇತ್ತು. ರಾಜಕಾರಣಿಗಳು ತಾವು ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂಬುದೇ ಆತನ ಬೇಡಿಕೆಯಾಗಿತ್ತು ಎಂಬುದು ಆ ವಿಡಿಯೊದಲ್ಲಿದೆ.
ಜೂನ್ 19ರ ಸಂಜೆ, ಎನ್ಕೌಂಟರ್ ನಡೆದ ಸ್ಥಳದಲ್ಲಿದ್ದ ಒಬ್ಬ ಸಬ್ ಇನ್ಸ್ಪೆಕ್ಟರ್ ಮತ್ತು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಯಿತು. ಮೃತನ ತಂದೆ ಕಾಶೀನಾಥ್ ತಿವಾರಿ ಅವರು ತಮ್ಮ ಮಗನ ಪರವಾಗಿ ದನಿ ಎತ್ತಿದ್ದು, "ಭರತ್ ಶರಣಾಗಲು ಸಿದ್ಧನಿದ್ದಾಗ ಪೊಲೀಸರು ಗುಂಡು ಹಾರಿಸುವ ಅಗತ್ಯವೇ ಇರಲಿಲ್ಲ" ಎಂದಿದ್ದಾರೆ.
ಯಾರಿದು ಭರತ್ ಭೂಷಣ್ ತಿವಾರಿ?
ಬಿಹಾರದ ಭೋಜಪುರ ಜಿಲ್ಲೆಯ ಶಾಹ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಲೌತಿ ಎಂಬ ಗ್ರಾಮವಿದೆ. ಇದೇ ಗ್ರಾಮದ ನಿವಾಸಿಯಾಗಿದ್ದರು ಭರತ್ ಭೂಷಣ್ ತಿವಾರಿ. ಕೆಲವು ದಿನಗಳ ಹಿಂದೆ ಭರತ್ ಭೂಷಣ್ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಹಾಕಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಧಿಕಾರಿಯೊಬ್ಬರನ್ನು 'ಎನ್ಕೌಂಟರ್' ಮಾಡುವುದಾಗಿಯೂ ಅವರು ಹೇಳಿದ್ದರು.
ತಿವಾರಿ ಅವರು ಪ್ರವಾಹ, ನದಿ ತೀರದ ಭೂಸವೆತ ಮತ್ತು ನಿರಾಶ್ರಿತರ ಸಮಸ್ಯೆಗಳಂತಹ ಸಾರ್ವಜನಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮುನ್ನೆಲೆಗೆ ತರುತ್ತಿದ್ದಕ್ಕಾಗಿ ಸ್ಥಳೀಯವಾಗಿ ಪರಿಚಿತರಾಗಿದ್ದರು. ಅವರ ಕುಟುಂಬದ ಪ್ರಕಾರ, ಅವರಿಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ. ಅವರು ಸಾರ್ವಜನಿಕ ಸಮಸ್ಯೆಗಳ ಕುರಿತು ಮಾತನಾಡಲು ಆಗಾಗ್ಗೆ ಫೇಸ್ಬುಕ್ ಅನ್ನು ಬಳಸುತ್ತಿದ್ದರು.
ಭರತ್ ಭೂಷಣ್ ಅವರ ಈ ಪೋಸ್ಟ್ ವೈರಲ್ ಆದ ನಂತರ ಸ್ಥಳೀಯ ಪೊಲೀಸರು ಅವರ ಮನೆಗೆ ತೆರಳಿದ್ದರು. ತಾವು ಭರತ್ ಭೂಷಣ್ ಅವರಿಗೆ ಬುದ್ಧಿಮಾತು ಹೇಳಲು ಪ್ರಯತ್ನಿಸಿದೆವು, ಆದರೆ ಅವರು ಪಿಸ್ತೂಲು ಹೊರತೆಗೆದರು ಎಂದು ಪೊಲೀಸರು ಹೇಳಿದ್ದಾರೆ.
ಒಂದು ವಿಡಿಯೊದಲ್ಲಿ ಭರತ್ ಭೂಷಣ್ ಅವರ ತಾಯಿಯೂ ಸಹ ತಮ್ಮ ಮಗನಿಗೆ ಬುದ್ಧಿವಾದ ಹೇಳಲು ಯತ್ನಿಸುತ್ತಿರುವುದು ಕಂಡುಬಂದಿದೆ. ಈ ಎಲ್ಲಾ ವಿಡಿಯೊಗಳನ್ನು ಭರತ್ ಭೂಷಣ್ ಅವರೇ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಿದ್ದರು.
ಸ್ಥಳೀಯ ಪತ್ರಕರ್ತೆ ನೇಹಾ ಗುಪ್ತಾ ನೀಡಿರುವ ಮಾಹಿತಿ ಉಲ್ಲೇಖಿಸಿರುವ 'ಬಿಬಿಸಿ ನ್ಯೂಸ್ ಹಿಂದಿ' ವರದಿ ಪ್ರಕಾರ, "ಭರತ್ ಮೂರು ದಿನಗಳ ಕಾಲ ಪೊಲೀಸರಿಗೆ ಸವಾಲು ಹಾಕುತ್ತಿದ್ದರು. ಅವರು ಹಲವು ಬಾರಿ ಫೇಸ್ಬುಕ್ ಲೈವ್ ಮಾಡಿದ್ದರು. ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ನಾಯಕರು ಮತ್ತು ಅಧಿಕಾರಿಗಳು ಜನರಿಗೆ ನೀಡುವ ಭರವಸೆಗಳನ್ನು ಈಡೇರಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ ಸಂಭವಿಸಿದ ಭೂಸವೆತದ ವಿಷಯವನ್ನು ಅವರು ಎತ್ತುತ್ತಿದ್ದರು. ಈ ಬಗ್ಗೆ ಸರ್ಕಾರದ ಕಡೆಯಿಂದ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕೆ ಆಕ್ರೋಶಗೊಂಡಿದ್ದರು. ಅವರು ಈ ಭಾಗದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸಕ್ರಿಯರಾಗಿದ್ದರು" ಎಂದು ಹೇಳಿದ್ದಾರೆ.
ಕಳೆದ ಜೂನ್ 17ರ ಬೆಳಿಗ್ಗೆ ಸುಮಾರು 9 ಗಂಟೆಗೆ ಪೊಲೀಸರು ಭರತ್ ಭೂಷಣ್ ಅವರ ಮೇಲೆ ಶರಣಾಗುವಂತೆ ಒತ್ತಡ ಹೇರಿದ್ದರು.
ಭರತ್ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬುಲೆಟ್ಪ್ರೂಫ್ ಜಾಕೆಟ್ ಧರಿಸಿದ್ದ ಎಸ್ಟಿಎಫ್ ಸಿಬ್ಬಂದಿ ಆತನನ್ನು ಹತ್ತಿರದಿಂದ ಸುತ್ತುವರೆದರು. ಆದರೂ ಭರತ್ ಗುಂಡು ಹಾರಿಸುವುದನ್ನು ನಿಲ್ಲಿಸದಿದ್ದಾಗ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಗುಂಡು ತಗುಲಿದ ನಂತರ ಭರತ್ ಭೂಷಣ್ ಅವರನ್ನು ಚಿಕಿತ್ಸೆಗಾಗಿ ಆರಾ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. "ರೋಗಿಯ ಸೊಂಟದ ಕೆಳಭಾಗಕ್ಕೆ ನಾಲ್ಕು ಗುಂಡುಗಳು ತಗುಲಿದ್ದವು. ನಾವು ಗುಂಡುಗಳನ್ನು ಹೊರತೆಗೆದಿದ್ದೆವು, ಆದರೆ ರೋಗಿಯ ಪರಿಸ್ಥಿತಿ ಗಂಭೀರವಾಗಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪಾಟ್ನಾದ ಪಿಎಂಸಿಎಚ್ಗೆ ರೆಫರ್ ಮಾಡಲಾಯಿತು" ಎಂದು ಸದರ್ ಆಸ್ಪತ್ರೆಯ ವೈದ್ಯ ಎಂ.ಎಚ್. ಅನ್ಸಾರಿ ಹೇಳಿರುವುದಾಗಿ ಬಿಬಿಸಿ ನ್ಯೂಸ್ ಹಿಂದಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಗಂಭೀರ ಗಾಯಗೊಂಡಿದ್ದ ಭರತ್ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಪಿಎಂಸಿಎಚ್ನಲ್ಲಿ ಕೊನೆಯುಸಿರೆಳೆದರು.
'ನಾನು ಕ್ರಾಂತಿಕಾರಿ' ಎಂದಿದ್ದ ಭರತ್ ತಿವಾರಿ
ತಿವಾರಿ ತಮ್ಮ ವಿಡಿಯೊಗಳಲ್ಲಿ ತಮ್ಮನ್ನು ತಾವು "ಕ್ರಾಂತಿಕಾರಿ" ಎಂದು ಕರೆದುಕೊಂಡಿದ್ದರು. ಅಲ್ಲದೆ, ತಮ್ಮಂತಹ ವ್ಯಕ್ತಿಗಳನ್ನು ಈ ಹಿಂದೆ ಹಲವು ಬಾರಿ "ಹುಚ್ಚರು" ಮತ್ತು "ದೇಶದ್ರೋಹಿಗಳು" ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಬರೆದುಕೊಂಡಿದ್ದರು.
ನಿವೃತ್ತ ಪೊಲೀಸ್ ಚಾಲಕರೊಬ್ಬರ ಮಗನಾಗಿದ್ದ ತಿವಾರಿ, ಸಾವಿಗೀಡಾಗುವ ಒಂದು ದಿನದ ಮುಂಚೆ ಹಾಕಿದ್ದ ಮತ್ತೊಂದು ಪೋಸ್ಟ್ನಲ್ಲಿ, ಬಿಹಾರ ಆಡಳಿತ ವ್ಯವಸ್ಥೆಯು ತಮ್ಮನ್ನು ಮುಗಿಸಲು ಸಂಚು ರೂಪಿಸಿದೆ ಎಂದು ಆರೋಪಿಸಿದ್ದರು. "ಸಮಾಜ ಮತ್ತು ದೇಶಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ" ತಮ್ಮ ವಿರುದ್ಧ ವಿಶೇಷ ಪೊಲೀಸ್ ಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿಕೊಂಡಿದ್ದರು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮಂಗಳವಾರವೇ ತಿವಾರಿ ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಅಂದಿನ ವಿಡಿಯೊಗಳಲ್ಲಿ, ತಿವಾರಿ ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡು ಮಂಚದ ಮೇಲೆ ಮಲಗಿರುವುದು ಮತ್ತು ಪೊಲೀಸರು ಹಾಗೂ ಕುಟುಂಬಸ್ಥರು ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಆ ವೇಳೆ ಅವರ ತಾಯಿ ಅವರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಾಗ, ತಿವಾರಿ ಪೊಲೀಸರ ಕಡೆಗೆ ಪಿಸ್ತೂಲು ತೋರಿಸುತ್ತಿರುವುದು ವಿಡಿಯೊದಲ್ಲಿದೆ. ಮಂಗಳವಾರ ಅವರನ್ನು ವಶಕ್ಕೆ ಪಡೆಯಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು ಎಂದು ಮೂಲಗಳು ತಿಳಿಸಿವೆ.
ಬುಧವಾರ ಬೆಳಿಗ್ಗೆ ಸ್ಥಳೀಯ ಪೊಲೀಸರು ಮತ್ತು ಎಸ್ಟಿಎಫ್ ಸಿಬ್ಬಂದಿ ಆ ಪ್ರದೇಶವನ್ನು ಸುತ್ತುವರೆದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ಈ ವೇಳೆ ತಿವಾರಿ ಇಡೀ ಘಟನಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಪ್ರಸಾರ ಮಾಡುತ್ತಿದ್ದರು.
"ಈ ಜನರು ನನ್ನನ್ನು ಹುಚ್ಚ ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ಭಗತ್ ಸಿಂಗ್ ಅವರು ಸಮಾಜ ಮತ್ತು ದೇಶಕ್ಕಾಗಿ ಹೋರಾಡುತ್ತಿದ್ದಾಗ, ಅವರನ್ನೂ ಸಹ ಹುಚ್ಚ ಎಂದು ಕರೆಯಲಾಗಿತ್ತು" ಎಂದು ತಿವಾರಿ ಒಂದು ವಿಡಿಯೊದಲ್ಲಿ ಹೇಳುತ್ತಿರುವುದು ಕೇಳಿಬಂದಿದೆ.
ತದನಂತರ, "ಸ್ವಲ್ಪ ತಡೆಯಿರಿ, ಇವರಿಗೆ ಈಗ ನನ್ನ ಹುಚ್ಚುತನ ಏನೆಂದು ತೋರಿಸುತ್ತೇನೆ" ಎಂದು ಹೇಳುತ್ತಾ ಅವರು ಆವರಣದ ಗೇಟ್ನತ್ತ ಓಡಿದ್ದಾರೆ.
ತಮ್ಮ ಕೊನೆಯ ಫೇಸ್ಬುಕ್ ಲೈವ್ ವಿಡಿಯೊದಲ್ಲಿ ತಿವಾರಿ, ಅಧಿಕಾರಿಗಳು ತಮ್ಮ ಬೇಡಿಕೆಗಳಿಗೆ ಸ್ಪಂದಿಸಿದರೆ ತಾವು ಆಯುಧವನ್ನು ಕೆಳಗಿಡಲು ಸಿದ್ಧರಿರುವುದಾಗಿ ತಿಳಿಸಿದ್ದರು.
"ನನ್ನ ಬೇಡಿಕೆಗಳನ್ನು ಈಡೇರಿಸುವುದಾದರೆ, ನನಗೆ ಶಸ್ತ್ರವನ್ನು ಕೆಳಗಿಡಲು ಯಾವುದೇ ಅಭ್ಯಂತರವಿಲ್ಲ" ಎಂದಿದ್ದರು ತಿವಾರಿ.
ಭರತ್ ಕುಟುಂಬದವರು ಏನಂತಾರೆ?
ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಭರತ್ ಭೂಷಣ್ ಅವರ ತಂದೆ ಕಾಶೀನಾಥ್ ತಿವಾರಿ, "ಬುಧವಾರ ಬೆಳಗ್ಗಿನಿಂದಲೇ ನನ್ನನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಲಾಗಿತ್ತು. ಅತ್ತ ಹಳ್ಳಿಯಲ್ಲಿ ನನ್ನ ಮಗನಿಗೆ ಗುಂಡಿಕ್ಕಲಾಯಿತು. ನನ್ನ ಮಗ ಯಾವುದೇ ಅಪರಾಧಿಯಾಗಿರಲಿಲ್ಲ. ಆತನಿಗೆ ಮಾನಸಿಕ ಸ್ಥಿಮಿತ ಇರಲಿಲ್ಲ ಅಷ್ಟೆ. ನನ್ನನ್ನು ಸಂಜೆ ಠಾಣೆಯಿಂದ ಬಿಡುಗಡೆ ಮಾಡಲಾಯಿತು. ಆತನ ಕಾಲಿಗೆ ಗುಂಡು ತಗುಲಿದೆ ಎಂದು ಪೊಲೀಸರು ನನಗೆ ಹೇಳಿದರು. ಅಷ್ಟೊಂದು ದೊಡ್ಡ ಪೊಲೀಸ್ ಪಡೆ ಇದ್ದರೂ ಒಬ್ಬ ನಿರಾಯುಧನನ್ನು ಅವರಿಗೆ ಹಿಡಿಯಲು ಸಾಧ್ಯವಾಗಲಿಲ್ಲವೇ? ಪೊಲೀಸರ ಯೋಜನೆ ನನ್ನ ಮಗನನ್ನು ಕೊಲ್ಲುವುದೇ ಆಗಿತ್ತು" ಎಂದು ಆರೋಪಿಸಿದ್ದಾರೆ.
ಭರತ್ ಭೂಷಣ್ ಅವರ ತಾಯಿ ಆಶಾ ದೇವಿ ಮಾತನಾಡಿ, "ಜವನಿಯಾ ಗ್ರಾಮದ (ಕಳೆದ ವರ್ಷ ಪ್ರವಾಹ ಪೀಡಿತ ಪ್ರದೇಶ) ಜನರು ತಮ್ಮಲ್ಲಿ ಮಣ್ಣು ತುಂಬಿಸುವ ಕೆಲಸ ನಡೆಯುತ್ತಿಲ್ಲ ಎಂದು ಹೇಳಿಕೊಂಡು ಬಂದಿದ್ದರು. ನನ್ನ ಮಗ ಸಮಾಜದ ಸಮಸ್ಯೆಯನ್ನು ಎತ್ತಿ ಹಿಡಿಯುತ್ತಿದ್ದ. ಆತ ಶರಣಾದ ಮೇಲೆಯೂ ಪೊಲೀಸರು ಆತನನ್ನು ಏಕೆ ಕೊಂದರು?" ಎಂದು ಪ್ರಶ್ನಿಸಿದ್ದಾರೆ.
ಕೊನೆಯ ಫೇಸ್ಬುಕ್ ಲೈವ್
ಕಳೆದ ಮಂಗಳವಾರದಿಂದಲೇ ಪೊಲೀಸರು ಮತ್ತು ಭರತ್ ಭೂಷಣ್ ನಡುವೆ ಜಟಾಪಟಿ ನಡೆದಿತ್ತು. ಭರತ್ ಭೂಷಣ್ ಆಗಾಗ್ಗೆ ತಮ್ಮ ಫೇಸ್ಬುಕ್ ಪೇಜ್ನಿಂದ ಲೈವ್ ಬರುವ ಮೂಲಕ ಎಲ್ಲಾ ಘಟನಾವಳಿಗಳನ್ನು ಸಾರ್ವಜನಿಕಗೊಳಿಸುತ್ತಿದ್ದರು.
ಎನ್ಕೌಂಟರ್ ನಡೆಯುವ ಮುನ್ನವೂ ಅವರು ಲೈವ್ ಮಾಡಿದ್ದರು. ಅದರಲ್ಲಿ, ಮೈದಾನದ ಒಂದು ಬದಿಯಲ್ಲಿ ಪೊಲೀಸರು ನಿಂತಿರುವುದು ಮತ್ತು ಮತ್ತೊಂದು ಬದಿಯಲ್ಲಿ ಭರತ್ ತಮ್ಮ ಮಾತುಗಳನ್ನು ಆಡುತ್ತಾ ಲೈವ್ ಮಾಡುತ್ತಿರುವುದು ಕಾಣಿಸುತ್ತದೆ. ಈ ಲೈವ್ನಲ್ಲಿ ಅವರು ತಮ್ಮ ಪಿಸ್ತೂಲನ್ನು ಪೊಲೀಸರ ಕಡೆಗೆ ಎಸೆಯುತ್ತಿರುವುದು ಕಂಡುಬರುತ್ತದೆ. ಆದರೆ ಅದರ ಬೆನ್ನಲ್ಲೇ ವಿಡಿಯೊ ಕೊನೆಗೊಳ್ಳುತ್ತದೆ.
ಆದರೆ, ಪೊಲೀಸರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ, "ಭರತ್ ಭೂಷಣ್ ಪೊಲೀಸರ ಮೇಲೆ ನಿರಂತರವಾಗಿ ಬಿಟ್ಟು ಬಿಟ್ಟು ಗುಂಡು ಹಾರಿಸುತ್ತಿದ್ದ" ಎಂದು ತಿಳಿಸಿದ್ದಾರೆ.
'ಪೊಲೀಸರಿಗೆ ಸವಾಲು ಹಾಕುವವರಿಗೆ ತಕ್ಕ ಉತ್ತರ ಸಿಗಲಿದೆ' ಎಂದಿದ್ದರು ಸಿಎಂ
ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡಾಗಿನಿಂದಲೂ ಸಾಮ್ರಾಟ್ ಚೌಧರಿ ಅವರು ಎನ್ಕೌಂಟರ್ ಕುರಿತು ನೀಡಿದ್ದ ಹೇಳಿಕೆ ಚರ್ಚೆಗೆ ಬಂದಿತ್ತು.
ಪೊಲೀಸ್ ಇಲಾಯ ಹಲವು ಸಭೆಗಳ ಜೊತೆಗೆ ಸಾರ್ವಜನಿಕ ಸಭೆಗಳಲ್ಲೂ ಸಾಮ್ರಾಟ್ ಚೌಧರಿ ಅವರು, "ಬಿಹಾರದಲ್ಲಿ ಕಾನೂನಿನೊಂದಿಗೆ ಯಾರೂ ಆಟವಾಡಲು ಸಾಧ್ಯವಿಲ್ಲ. ಪೊಲೀಸರಿಗೆ ಸವಾಲು ಹಾಕುವ ಯಾರಿಗೇ ಆದರೂ 48 ಗಂಟೆಗಳ ಒಳಗೆ ತಕ್ಕ ಉತ್ತರ ಸಿಗಲಿದೆ" ಎಂದು ಹೇಳುತ್ತಾ ಬಂದಿದ್ದಾರೆ.
ರಾಜ್ಯದಲ್ಲಿ ಜಾತಿ ನೋಡಿ ಎನ್ಕೌಂಟರ್ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದರು. ಮೇ 19ರಂದು ಹೇಳಿಕೆ ನೀಡಿದ್ದ ತೇಜಸ್ವಿ, ಸರ್ಕಾರ ಜಾತಿಯನ್ನು ನೋಡಿ ಎನ್ಕೌಂಟರ್ ಮಾಡಿಸುತ್ತಿದೆ ಮತ್ತು ಮಹಿಳಾ ಸುರಕ್ಷತೆಯ ವಿಷಯದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದ್ದರು.
ಮೇ 23ರಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿ, "ನವೆಂಬರ್ 20, 2025ರಿಂದ ಇದುವರೆಗೆ ರಾಜ್ಯದಲ್ಲಿ 22 ಪೊಲೀಸ್ ಎನ್ಕೌಂಟರ್ಗಳು ನಡೆದಿವೆ. ಅದರಲ್ಲಿ 6 ಅಪರಾಧಿಗಳು ಹತರಾಗಿದ್ದಾರೆ. ಕುಂದನ್ ಠಾಕೂರ್, ಪ್ರಿಯಾಂಶು ದುಬೆ, ಅಭಿಜಿತ್ ಕುಶ್ವಾಹಾ, ದಯಾನಂದ್ ಮಾಲಾಕಾರ್, ರಾಮಧನಿ ಯಾದವ್ ಮತ್ತು ಸೋನು ಯಾದವ್ ಅವರು ಬೇರೆ ಬೇರೆ ಜಾತಿಗಳಿಗೆ ಸೇರಿದವರಾಗಿದ್ದಾರೆ. ಹೀಗಿರುವಾಗ, ನಿರ್ದಿಷ್ಟ ಜಾತಿಯವರನ್ನು ಗುರಿಯಾಗಿಸಿ ಎನ್ಕೌಂಟರ್ ಮಾಡಲಾಗುತ್ತಿದೆ ಎಂಬ ತೇಜಸ್ವಿ ಯಾದವ್ ಅವರ ಹೇಳಿಕೆ ಸಂಪೂರ್ಣ ತಪ್ಪು" ಎಂದು ಸ್ಪಷ್ಟನೆ ನೀಡಿದ್ದರು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಭರತ್ ತಿವಾರಿ ಎನ್ಕೌಂಟರ್ ವಿವಾದ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ತಿವಾರಿ ಅವರ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು, ಘಟನೆಯಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಬೇಕು ಮತ್ತು ತನಿಖೆಯ ಉಸ್ತುವಾರಿಗಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ಸಮಿತಿಯನ್ನು ರಚಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ತಿವಾರಿ ಅವರು ನಿಜವಾಗಿಯೂ ಶರಣಾಗಿದ್ದರೆ, ಅವರ ವಿರುದ್ಧ ಪ್ರಾಣಾಂತಿಕ ಬಲಪ್ರಯೋಗ ಮಾಡಿರುವುದು ಕಾನೂನುಬಾಹಿರ ಹತ್ಯೆಗೆ ಸಮನಾಗಬಹುದು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಈ ಪ್ರಕರಣವು ರಾಜಕೀಯ ವಲಯದಲ್ಲೂ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ಭರತ್ ತಿವಾರಿ ಅವರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಹೊಣೆಗಾರಿಕೆ ಮತ್ತು ಪಾರದರ್ಶಕ ತನಿಖೆಗೆ ಒತ್ತಾಯಿಸುತ್ತಿವೆ.

