ಸೋಲ್: ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವರಾದ ಚೋ ಹ್ಯೂನ್ ಅವರೊಂದಿಗೆ ದ್ವಿಪಕ್ಷೀಯ ಪಾಲುದಾರಿಕೆಯ ಕುರಿತು ಬುಧವಾರ ಮಾತುಕತೆ ನಡೆಸಿದರು.
ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯೂಂಗ್ ಅವರು ಏಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ವ್ಯಾಪಾರ, ಹೂಡಿಕೆ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಸಹಕಾರ ನೀಡಲು ಒಪ್ಪಿದ್ದರು.
ಈ ಕುರಿತು ಚರ್ಚೆ ಮುಂದುವರಿಸಲಾಗಿದೆ.
'ವಿದೇಶಾಂಗ ಸಚಿವರಾಗಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವುದು ಮತ್ತು ಪರಸ್ಪರ ಸಹಕಾರದೊಂದಿಗೆ ಪಾಲುದಾರಿಕೆಯನ್ನು ಮುಂದುವರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿ ಶ್ರಮಿಸುತ್ತಿದ್ದೇವೆ ಎಂಬ ಬದ್ಧತೆಯಿದೆ' ಎಂದು ಜೈಶಂಕರ್ 'ಎಕ್ಸ್'ನಲ್ಲಿ ತಿಳಿಸಿದರು.
'ನವೋದ್ಯಮ, ಫಿನ್‌ಟೆಕ್ ಮತ್ತು ಬಹುಪಕ್ಷೀಯ ವೇದಿಕೆಗಳಂತಹ ಕ್ಷೇತ್ರಗಳಲ್ಲಿನ ಅವಕಾಶಗಳ ಕುರಿತು ಚರ್ಚಿಸಲಾಗಿದೆ. ಜಾಗತಿಕ ಬೆಳವಣಿಗೆ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಯಿತು' ಎಂದು ಹೇಳಿದರು.
'ಅಧ್ಯಕ್ಷ ಲೀ ಜೇ-ಮ್ಯೂಂಗ್ ಅವರು ಭಾರತ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಹೊಸ ಆಯಾಮ ನೀಡಿದೆ' ಎಂದು ಚೋ ಹೇಳಿದರು.
ಈ ಮಾತುಕತೆಯು ಸುಮಾರು ಮೂರು ಗಂಟೆ ನಡೆಯಿತು. ವಿದೇಶ ಪ್ರವಾಸದಲ್ಲಿರುವ ಜೈಶಂಕರ್ ಅವರು ಮಂಗೋಲಿಯಾ ಭೇಟಿಯ ಬಳಿಕ ದಕ್ಷಿಣ ಕೊರಿಯಾದಲ್ಲಿ ಎರಡು ದಿನ ಇರಲಿದ್ದಾರೆ.

