ನವದೆಹಲಿ (PTI): ಅಘ್ಗಾನಿಸ್ತಾನದಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆಗೆ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಉತ್ತರ ಭಾರತದ ಹಲವೆಡೆ ಕಂಪನಗಳು ವರದಿಯಾಗಿವೆ.
ಈಶಾನ್ಯ ಅಘ್ಗಾನಿಸ್ತಾನದಲ್ಲಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ.
ಇದರ ಕೇಂದ್ರ ಬಿಂದು 215 ಕಿ.ಮೀ ಆಳದಲ್ಲಿ ಇತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ (ಎನ್‌ಸಿಎಸ್) ಹೇಳಿದೆ.
ಈಶಾನ್ಯ ಅಘ್ಗಾನಿಸ್ತಾನದ ಜುಮ್‌ನಿಂದ ದಕ್ಷಿಣಕ್ಕೆ 43 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ಹೇಳಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಭೂಕಂಪದ ಅನುಭವ ಆಗುತ್ತಿದ್ದಂತೆ ಜನರು ಭೀತಿಯಿಂದ ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದರು. ಪಾಕಿಸ್ತಾನದ ಇಸ್ಲಾಮಾಬಾದ್, ಸ್ವಾತ್, ಉತ್ತರ ವಜೀರಿಸ್ತಾನ, ಚಿತ್ರಾಲ್ ಮತ್ತು ರಾವಲ್ಪಿಂಡಿಯಲ್ಲೂ ಕಂಪನದ ಅನುಭವವಾಗಿದೆ. ಭೂಕಂಪದಿಂದ ಯಾವುದೇ ಸಾವು, ಹಾನಿ ವರದಿಯಾಗಿಲ್ಲ.

