ನವದೆಹಲಿ (PTI): ದೆಹಲಿ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪ್ರಮುಖ ಧಾರ್ಮಿಕ ಸ್ಥಳಗಳು, ಸರ್ಕಾರಿ ಸಂಸ್ಥೆಗಳು ಮತ್ತು ಪೊಲೀಸ್ ಘಟಕಗಳ ಮೇಲೆ ಖಾಲಿಸ್ತಾನಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಶನಿವಾರ ಎಚ್ಚರಿಕೆ ನೀಡಿವೆ.
'ಮುಂಬರುವ ದಿನಗಳಲ್ಲಿ ದಾಳಿಗಳು ನಡೆಯಲಿವೆ ಎಂಬ ಬೆದರಿಕೆಯ ಇಮೇಲ್ ಬಂದಿದ್ದು, ಹಾಗಾಗಿ ಕಣ್ಗಾವಲು ತೀವ್ರಗೊಳಿಸಲಾಗಿದೆ' ಎಂದು ಗುಪ್ತಚರ ಸಂಸ್ಥೆಯ ಮೂಲಗಳು ಹೇಳಿವೆ.
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ನಾಗರಸು ಗುರುದ್ವಾರದಲ್ಲಿ ನಿಹಾಂಗ್‌ಗಳ ಗುಂಪು ಮತ್ತು ಅಧಿಕಾರಿಗಳ ನಡುವೆ ಘರ್ಷಣೆ ನಡೆದ ಕಾರಣ ಈ ಬೆದರಿಕೆ ಬಂದಿದೆ. ಜೂನ್ 16ರಂದು ಕರ್ಣಪ್ರಯಾಗ ಮಾರುಕಟ್ಟೆಯಲ್ಲಿ ಸ್ಥಳೀಯರೊಂದಿಗೆ ನಡೆದ ಘರ್ಷಣೆಗೆ ಸಂಬಂಧಿಸಿ ಬಂಧನಕ್ಕೊಳಗಾದ ತಮ್ಮ ನಾಲ್ವರು ಸದಸ್ಯರನ್ನು ಬಿಡುಗಡೆ ಮಾಡುವಂತೆ ನಿಹಾಂಗ್‌ಗಳು ಒತ್ತಾಯಿಸಿದ್ದರು. ಶನಿವಾರ ನಾಲ್ವರಿಗೂ ಜಾಮೀನು ದೊರಕಿದೆ.

