ಮುಂಬೈ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಕುಸಿಯುತ್ತಿರುವ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸುವ ಯತ್ನವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನಲ್ಲಿರುವ ಚಿನ್ನದ ಸಂಪತ್ತಿನ ಒಂದು ಭಾಗವನ್ನು ಮಾರಾಟ ಮಾಡಿದೆ ಎಂದು ಅಂತರ್‌ರಾಷ್ಟ್ರೀಯ ವಿತ್ತೀಯ ಸುದ್ದಿ ಸಂಸ್ಥೆ 'ಬ್ಲೂಮ್‌ಬರ್ಗ್ ಇಕನಾಮಿಕ್ಸ್ʼ ಬಹಿರಂಗಪಡಿಸಿದೆ.
ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶವನ್ನು ಆಧರಿಸಿ ತಾನು ಈ ವರದಿಯನ್ನು ಸಿದ್ಧಪಡಿಸಿರುವುದಾಗಿ ಬ್ಲೂಮ್‌ಬರ್ಗ್ ಇಕನಾಮಿಕ್ಸ್ ತಿಳಿಸಿದೆ. ಇಂಧನ ದರದಲ್ಲಿ ಭಾರೀ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಂತಹ ಬಾಹ್ಯ ಆಘಾತಗಳಿಂದ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸಲು ಆರ್‌ಬಿಐ ಈ ಕ್ರಮವನ್ನು ಕೈಗೊಂಡಿದೆ ಎನ್ನಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮೇ 22ರವರೆಗೆ ಎರಡು ವಾರಗಳಲ್ಲಿ ಸುಮಾರು 12 ಶತಕೋಟಿ ಡಾಲರ್ ಮೌಲ್ಯದ ಚಿನ್ನದ ಮೀಸಲುನಿಧಿಯನ್ನು ಮಾರಾಟ ಮಾಡಿದೆ. ಇದೇ ವೇಳೆ 7.5 ಶತಕೋಟಿ ಡಾಲರ್ ಮೌಲ್ಯದ ಕರೆನ್ಸಿ ಸಂಪತ್ತನ್ನು ಖರೀದಿಸಿದೆ ಎಂದು ಬ್ಲೂಮ್‌ಬರ್ಗ್ ಇಕನಾಮಿಕ್ಸ್‌ನ ಹಿರಿಯ ಭಾರತೀಯ ಆರ್ಥಿಕ ತಜ್ಞ ಅಭಿಷೇಕ್ ಗುಪ್ತಾ ಅವರು ಬರೆದಿದ್ದಾರೆ.
ಚಿನ್ನದ ಮೇಲಿನ ಆಮದು ಸುಂಕದಲ್ಲಿ ಹೇರಿಕೆ ಮಾಡಿದ ಹೊರತಾಗಿಯೂ ರೂಪಾಯಿ ಮೌಲ್ಯದಲ್ಲಿ ಕುಸಿತವನ್ನು ತಡೆಯಲು ಸಾಧ್ಯವಾಗಲಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನವನ್ನು ಮಾರಾಟ ಮಾಡುತ್ತಿದ್ದುದೇ ಇದಕ್ಕೆ ಕಾರಣವೆಂದು ಗುಪ್ತಾ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಸಂಸ್ಥೆಗಳು ಆರ್‌ಬಿಐನಿಂದ ಪ್ರತಿಕ್ರಿಯೆ ಕೋರಿ ಇ-ಮೇಲ್ ಸಂದೇಶವನ್ನು ಕಳುಹಿಸಿದರೂ, ಅದು ತಕ್ಷಣವೇ ಯಾವುದೇ ಉತ್ತುರ ನೀಡಿಲ್ಲವೆಂದು ತಿಳಿದು ಬಂದಿದೆ.
ಭಾರತವು ತನ್ನಲ್ಲಿದ್ದ ಚಿನ್ನವನ್ನು ಮಾರಾಟ ಮಾಡುವುದರ ಜೊತೆಗೆ ಬ್ರಿಟನ್‌ನಲ್ಲಿ ತಾನು ಇರಿಸಿದ್ದ 104 ಟನ್ ಚಿನ್ನವನ್ನು, ಸ್ವದೇಶಕ್ಕೆ ತಂದಿರುವುದಾಗಿಯೂ ವರದಿ ಹೇಳಿದೆ.
ಆ ಮೂಲಕ ಭಾರತವು ತನ್ನ ವಿದೇಶಿ ಕರೆನ್ಸಿ ಆಸ್ತಿಗೆ 7.5 ಶತಕೋಟಿ ಡಾಲರ್‌ಗಳನ್ನು ಸೇರ್ಪಡೆಗೊಳಿಸಿದೆ. ಅಮೆರಿಕ ಹಾಗೂ ಇರಾನ್ ಯುದ್ಧ ಹಾಗೂ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡಚಣೆಯುಂಟಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಬಂಡವಾಳದ ಹೊರ ಹರಿವನ್ನು ತಡೆಯಲು ಆರ್‌ಬಿಐ ಈ ಕ್ರಮವನ್ನು ಕೈಗೊಂಡಿದೆ ಎಂದು ಅಭಿಷೇಕ್ ಗುಪ್ತಾ ಅವರು ಹೇಳಿದ್ದಾರೆ.
ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಬಡ್ಡಿದರ ಹೆಚ್ಚಳ ಹಾಗೂ ಸಾಗರೋತ್ತರ ದೇಶಗಳ ಹೂಡಿಕೆದಾರರಿಂದ ಡಾಲರ್‌ನ ಒಳಹರಿವನ್ನು ಆಕರ್ಷಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ.
ಆರ್‌ಬಿಐನ ಈ ಪ್ರಯತ್ನಗಳಿಗೆ ಅಲ್ಪಮಟ್ಟಿನ ಯಶಸ್ಸು ದೊರೆತಿದ್ದು, ಮೇ 20ರಿಂದೀಚೆಗೆ ಏಶ್ಯದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸಿದೆ. ಮಂಗಳವಾರ ಡಾಲರ್ ಎದುರು ರೂಪಾಯಿ ಮೌಲ್ಯವು 0.2 ಶೇಕಡದಷ್ಟು ಕುಸಿದಿದ್ದು, 95.17 ಆಗಿದೆ.

