ವಾಷಿಂಗ್ಟನ್: ಅಮೆರಿಕ ಹಾಗೂ ಇರಾನ್ ನಡುವಣ ಅಂತಿಮ ಒಪ್ಪಂದದ ಮಾತುಕತೆಗಾಗಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹಾಗೂ ಅವರ ಪತ್ನಿ ಉಷಾ ವ್ಯಾನ್ಸ್, ಸ್ವಿಟ್ಜರ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಕೊನೆಗೊಳಿಸಲು 14 ಅಂಶಗಳ ಕರಡು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ ಅನಿಶ್ಚಿತತೆಯು ಮುಂದುವರಿದಿತ್ತು.
ಆದರೆ ಜೆ.ಡಿ. ವ್ಯಾನ್ಸ್ ದಂಪತಿ ಸ್ವಿಟ್ಜರ್ಲೆಂಡ್‌ಗೆ ಪ್ರಯಾಣ ಬೆಳೆಸುವುದರೊಂದಿಗೆ ಅಂತಿಮ ಒಪ್ಪಂದದ ಮಾತುಕತೆ ಸುಗಮಗೊಂಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವೀಟ್ಕಾಫ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಸಹ ಸ್ವಿಟ್ಜರ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.
ತಮ್ಮ ಪ್ರಯಾಣಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವ್ಯಾನ್ಸ್, 'ಇರಾನ್ ನಿಯೋಗ ಈಗಾಗಲೇ ಸ್ವಿಟ್ಜರ್ಲೆಂಡ್‌ಗೆ ತಲುಪಿದೆ ಎಂದು ತಿಳಿದುಬಂದಿದೆ. ಮಾತುಕತೆಗಳು 'ಕೆಲವು ದಿನಗಳವರೆಗೆ' ಮುಂದುವರಿಯಬಹುದು' ಎಂದು ತಿಳಿಸಿದ್ದಾರೆ.
'ನಾನು ಅಲ್ಲಿ ಒಂದು ಅಥವಾ ಎರಡು ದಿನಗಳು ಮಾತ್ರ ಇರಲು ಸಾಧ್ಯ. ಪರಮಾಣು ವಿಷಯ ಮತ್ತು ಲೆಬನಾನ್ ಕದನ ವಿರಾಮದ ವಿಷಯದಲ್ಲಿ ಪ್ರಗತಿ ಸಾಧಿಸುತ್ತೇವೆ ಎಂಬ ಭರವಸೆ ಇದೆ. ಇವೆರಡೂ ನಾವು ಮುಖ್ಯವಾಗಿ ಗಮನಹರಿಸಲಿರುವ ಮಹತ್ತರ ವಿಷಯಗಳಾಗಿವೆ. ಇರಾನಿಯನ್ನರು ಕೂಡ ತಾವು ಚರ್ಚಿಸಲು ಬಯಸುವ ಕೆಲವು ವಿಷಯಗಳನ್ನು ಹೊಂದಿರುತ್ತಾರೆ' ಎಂದು ಪ್ರತಿಕ್ರಿಯಿಸಿದ್ದಾರೆ.
'ಲೆಬನಾನ್‌ನಲ್ಲಿ ಮುಂದುವರಿದಿರುವ ಸಂಘರ್ಷ ಕಳವಳಕಾರಿಯಾಗಿದೆ. ಅಲ್ಲಿ ಪರಿಸ್ಥಿತಿ ತೀವ್ರವಾಗಿ ಉಲ್ಬಣವಾಗದಂತೆ ನೋಡಿಕೊಳ್ಳಬೇಕು. ಇಸ್ರೇಲ್ ಮತ್ತು ಲೆಬನಾನ್ ಎರಡೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಶ್ರಮಿಸಬೇಕಾಗಿದೆ' ಎಂದು ಹೇಳಿದ್ದಾರೆ.
ಶುಕ್ರವಾರ ಅಮೆರಿಕ-ಇರಾನ್ ನಡುವೆ ಅಂತಿಮ ಸುತ್ತಿನ ಮಾತುಕತೆ ಆರಂಭಗೊಳ್ಳಬೇಕಿತ್ತು. ಆದರೆ, ಇಸ್ರೇಲ್-ಲೆಬನಾನ್ ಕದನ ವಿರಾಮ ಅನಿಶ್ಚಿತತೆಯಿಂದಾಗಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರ ಸ್ವಿಟ್ಜರ್ಲೆಂಡ್ ಭೇಟಿಯನ್ನು ಗುರುವಾರ ಮುಂದೂಡಿದ್ದರು.
ಮತ್ತೊಂದೆಡೆ ಕದನ ವಿರಾಮ ಜಾರಿಯಾದರೂ, ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿರುವುದನ್ನು ಖಂಡಿಸಿ, ಹೊರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿರುವುದಾಗಿ ಇರಾನ್ ಶನಿವಾರ ಹೇಳಿದೆ. ಈ ನಡುವೆ ಮಧ್ಯಂತರ ಒಪ್ಪಂದದಂತೆ 60 ದಿನಗಳಲ್ಲಿ ಯಾವುದೇ ನಿರ್ಣಯಕ್ಕೆ ಬರುವಲ್ಲಿ ವಿಫಲವಾದರೆ ಹೊರ್ಮುಜ್‌ನಲ್ಲಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

