ಟೆಹರಾನ್: ಹೊರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರಕ್ಕೆ ವಿಧಿಸಲಾಗಿರುವ ನಿಷೇಧ ಮುಂದುವರಿದಿದೆ ಎಂದು ಇರಾನ್ ಭಾನುವಾರ ತಿಳಿಸಿದೆ.
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಾಗಿ 60 ದಿನಗಳ ಕದನ ವಿರಾಮಕ್ಕೆ ಒಪ್ಪಂದವಾಗಿದ್ದರೂ, ಹೊರ್ಮುಜ್ ಜಲಸಂಧಿ ಮೂಲಕ ಹಡಗುಗಳ ಸಂಚಾರಕ್ಕೆ ವಿಧಿಸಲಾಗಿರುವ ನಿಷೇಧ ಮುಂದುವರಿದಿದೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್ಜಿಸಿ) ತಿಳಿಸಿದೆ.
ಇರಾನ್ ದೇಶದ ಫಾರ್ಸ್ ಸುದ್ದಿ ಸಂಸ್ಥೆಯು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಭಾನುವಾರ ಈ ವರದಿ ಮಾಡಿದೆ.
ಮುಂದಿನ ಆದೇಶದವರೆಗೆ ಯಾವುದೇ ವಾಣಿಜ್ಯ ಹಡಗುಗಳು, ತೈಲ ಟ್ಯಾಂಕರ್ಗಳು ಜಲಸಂಧಿಯ ಮೂಲಕ ಹಾದುಹೋಗಲು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ ಅನುಮತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಲೆಬನಾನ್ ಮೇಲಿನ ಇಸ್ರೇಲ್ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ ಈ ಕಠಿಣ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಆದಾಗ್ಯೂ ಹೊರ್ಮುಜ್ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಎಂದಿನಂತೆ ಮುಂದುವರಿದಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ. ಮಾತುಕತೆ ನಡುವೆಯೇ ಇರಾನ್ನ ಈ ನಡೆ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

