ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಶಾಂತಿ ಒಪ್ಪಂದ ಸಂಬಂಧಿತ ತಾಂತ್ರಿಕ ವಿಷಯಗಳ ಕುರಿತು ಚರ್ಚೆಗೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್, ಸೇನಾ ಮುಖ್ಯಸ್ಥ ಆಸಿಂ ಮುನೀರ್ ಸ್ವಿಟ್ಜರ್ಲೆಂಡ್ಗ ತೆರಳಿದ್ದಾರೆ.
ಶಾಂತಿ ಒಪ್ಪಂದದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದ್ದು, ಶುಕ್ರವಾರ ನಡೆಯಬೇಕಿದ್ದ ಮೊದಲ ಸುತ್ತಿನ ಮಾತುಕತೆಯು, ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದ್ದರಿಂದ ಸ್ಥಗಿತಗೊಂಡಿತ್ತು.
ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿರುವ ಹಿನ್ನೆಲೆಯಲ್ಲಿ ತಾಂತ್ರಿಕ ವಿಷಯಗಳ ಕುರಿತು ಸ್ವಿಟ್ಜರ್ಲೆಂಡ್ನ ಬರ್ಗೆನ್ಸ್ಟಾಕ್ನಲ್ಲಿ ಚರ್ಚೆನಡೆಯಲಿದೆ ಎಂದು ಪಾಕ್ ಪ್ರಧಾನಿ ಕಚೇರಿ ತಿಳಿಸಿರುವುದಾಗಿ ವರದಿಯಾಗಿದೆ. ನಿಯೋಗವು ಮಧ್ಯರಾತ್ರಿಯೇ ತೆರಳಿದ್ದು, ಪ್ರಧಾನಿ ಶೆಷಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಮುನೀರ್ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅದು ಹೇಳಿದೆ.
ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಶುಕ್ರವಾರವೇ ಇರಾನ್ ನಿಯೋಗದ ಜೊತೆ ಮಾತುಕತೆ ನಡೆಸಬೇಕಿತ್ತು. ಲೆಬನಾನ್ ಮೇಲೆ ಇಸ್ರೇಲ್ ದಾಳಿ ಹಿನ್ನೆಲೆ ಇರಾನ್ ನಿಯೋಗ ಸ್ವಿಟ್ಜರ್ಲೆಂಡ್ಗೆ ಆಗಮಿಸದ ಹಿನ್ನೆಲೆ ಮಾತುಕತೆ ರದ್ದಾಗಿತ್ತು.
ಬಳಿಕ, ಅಮೆರಿಕ ಮತ್ತು ಕತಾರ್ನ ಸಂಧಾನಕಾರರು ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಸಂಘರ್ಷ ನಿಲ್ಲಿಸಲು ಒಪ್ಪಂದ ರೂಪಿಸುವಲ್ಲಿ ಯಶಸ್ವಿಯಾಗಿದ್ದು, ಅಮೆರಿಕ-ಇರಾನ್ ನಡುವೆ ಮಾತುಕತೆ ಆರಂಭಕ್ಕೆ ಕಾರಣವಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ನನಿಯೋಗ ಸಹ ಸ್ವಿಟ್ಜರ್ಲೆಂಡ್ಗ ತೆರಳಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ನಡುವೆ ಮಧ್ಯಂತರ ಒಪ್ಪಂದದಂತೆ 60 ದಿನಗಳಲ್ಲಿ ಯಾವುದೇ ನಿರ್ಣಯಕ್ಕೆ ಬರುವಲ್ಲಿ ವಿಫಲವಾದರೆ ಹೊರ್ಮುಜ್ನಲ್ಲಿ ಅಮೆರಿಕದಿಂದ ಟೋಲ್ ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ-ಇರಾನ್ ಮಾಡಿಕೊಂಡಿರುವ ಮಧ್ಯಂತರ ಶಾಂತಿ ಒಪ್ಪಂದದಲ್ಲಿ 60 ದಿನಗಳವರೆಗೆ ಟೋಲ್ರಹಿತವಾಗಿ ಹೊರ್ಮುಜ್ ಜಲಸಂಧಿ ತೆರೆಯಬೇಕು ಮತ್ತು ಲೆಬನಾನ್ ಸೇರಿ ಎಲ್ಲ ವಲಯಗಳಲ್ಲಿ ಯುದ್ಧ ವಿರಾಮ ಅಂತ್ಯಕ್ಕೆ ಒಪ್ಪಿಗೆ ಸೂಚಿಸಲಾಗಿದೆ.



