ದುಬೈ: ಅಮೆರಿಕ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಸತತ ಎರಡನೇ ದಿನವೂ ಪ್ರತಿದಾಳಿ ನಡೆಸಿದೆ. ಈ ಮೂಲಕ ಕದನ ವಿರಾಮದಿಂದ ಕೆಲದಿನಗಳ ಕಾಲ ಸ್ಥಗಿತಗೊಂಡಿದ್ದ ಕೊಲ್ಲಿ ರಾಷ್ಟ್ರಗಳ ಯುದ್ಧವೂ ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಂಡಿದೆ.
ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಇರಾನ್ ದಾಳಿ ಮುಂದುವರಿಸಿದೆ.
ಇರಾನ್ ಮೇಲೆ ಅಮೆರಿಕ ಸಹ ಗುರುವಾರ ಬೆಳಿಗ್ಗೆಯವರೆಗೂ ನಡೆಸಿದ ದಾಳಿಯೂ ಈ ಹಿಂದೆಂದಿಗಿಂತಲೂ ಭೀಕರವಾಗಿತ್ತು.
ಅಮೆರಿಕದ ದಾಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್, 'ಪ್ರಸ್ತುತ ಪರಿಸ್ಥಿತಿಯಲ್ಲಿ ಕದನ ವಿರಾಮ ಅರ್ಥಹೀನವಾಗಿದೆ' ಎಂದು ತಿಳಿಸಿದೆ.
ರಕ್ಷಣಾ ಕೇಂದ್ರಗಳ ಮೇಲೆ ತೀವ್ರ ದಾಳಿ: 'ಇರಾನ್ನ ವಾಯು ರಕ್ಷಣಾ ಕೇಂದ್ರಗಳು, ಸಂವಹನ ವ್ಯವಸ್ಥೆ ಹಾಗೂ ಇರಾನ್ನ ಸೇನಾ ಕಣ್ಗಾವಲು ಸಾಮರ್ಥ್ಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ' ಎಂದು ಅಮೆರಿಕ ಸೇನೆಯ ಕೇಂದ್ರ ಕಮಾಂಡ್ ತಿಳಿಸಿದೆ.
ಗುರುವಾರ ಸೂರ್ಯೋದಯಕ್ಕೂ ಮುಂಚೆಯೇ ಇರಾನ್ನ ಮೇಲೆ ಈ ದಾಳಿ ನಡೆಸಲಾಗಿದ್ದು, ಆಸ್ತಿ-ಪಾಸ್ತಿ, ಪ್ರಾಣ ಹಾನಿಯ ಕುರಿತಂತೆ ಉಭಯ ರಾಷ್ಟ್ರಗಳು ಮಾಹಿತಿ ನೀಡಿಲ್ಲ.
'ಇರಾನ್ ರಾಜಧಾನಿ ಟೆಹರಾನ್ ಹಾಗೂ ಬಂದರು ನಗರಿ ಬಂದರ್ ಅಬ್ಬಾಸ್, ಕೆಶಮ್ ದ್ವೀಪ, ಹೊರ್ಮುಜ್ ಜಲಸಂಧಿಯನ್ನು ಗುರಿಯಾಗಿಸಿ ಅಮೆರಿಕ ಪಡೆಗಳು ದಾಳಿ ನಡೆಸಿವೆ' ಎಂದು ಇರಾನ್ನ ಅರೆಸೇನಾ ಪಡೆ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ.
ಸೇನಾ ಉಪಕರಣಗಳ ಉತ್ಪಾದನಾ ಸಂಕೀರ್ಣ, ಮಿಲಿಟರಿ ಬ್ಯಾರಕ್, ಸೇನಾ ನೆಲೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ಕುವೈತ್, ಬಹರೇನ್, ಜೋರ್ಡಾನ್ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಪ್ರತಿದಾಳಿ ನಡೆಸಲಾಗಿದೆ ಎಂದು ಇರಾನ್ ತಿಳಿಸಿದೆ.
ಕೊಲ್ಲಿ ರಾಷ್ಟ್ರಗಳ ಮೇಲೆ ಇರಾನ್ ಪದೇ ಪದೇ ದಾಳಿ ನಡೆಸಿದ್ದು, ಈ ವಾರದಲ್ಲಿ ಮೂರನೇ ಬಾರಿಯಾಗಿದೆ. ಮೊದಲು ಇರಾನ್- ಇಸ್ರೇಲ್ ನಡುವೆ ದಾಳಿಗಳು ನಡೆದವು. ಇದಾದ ನಂತರ ಅಮೆರಿಕ ಹಾಗೂ ಇರಾನ್ ಎರಡು ಸುತ್ತು ದಾಳಿ, ಪ್ರತಿ ದಾಳಿ ನಡೆಸಿದ್ದವು.
ಕ್ಷಿಪಣಿ ದಾಳಿಗೆ ತಡೆ: 'ಇರಾನ್ನ 20 ಕ್ಷಿಪಣಿಗಳನ್ನು ತಡೆಯಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ' ಎಂದು ಜೋರ್ಡಾನ್ ತಿಳಿಸಿದೆ.
ಇರಾನ್ ದಾಳಿಯಿಂದ 11 ವರ್ಷದ ಬಾಲಕಿಗೆ ಗಾಯವಾಗಿದೆ. ಹಲವು ಕಾರು, ಮನೆಗಳಿಗೂ ಹಾನಿಯುಂಟಾಗಿದೆ ಎಂದು ಬಹರೇನ್ನ ಆಂತರಿಕ ಸಚಿವಾಲಯವು ತಿಳಿಸಿದೆ.
ಕದನ ವಿರಾಮ ಮೇಲೆ ಅನಿಶ್ಚಿತತೆಯ ತೂಗುಗತ್ತಿ: ಮತ್ತೆ ಆರಂಭಗೊಂಡಿರುವ ಸಂಘರ್ಷದಿಂದ ಉಭಯ ರಾಷ್ಟ್ರಗಳ ನಡುವೆ ಏರ್ಪಟ್ಟಿದ್ದ ಕದನ ವಿರಾಮದ ಮೇಲೆ ತೂಗುಗತ್ತಿ ಹೊಯ್ದಾಡುತ್ತಿದೆ.
'ಶಾಂತಿ ಮಾತುಕತೆ ಸ್ಥಗಿತಗೊಂಡರೆ, ಇರಾನ್ ತಕ್ಕ ಬೆಲೆ ತೆರಬೇಕಾಗುತ್ತದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು.
ಒಪ್ಪಂದವು ಕೊನೇ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ತಿಳಿಸಿದ್ದರು. ಇದೀಗ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷದಿಂದ ಒಪ್ಪಂದ ಮತ್ತಷ್ಟು ವಿಳಂಬವಾಗುವ ಆತಂಕ ಎದುರಾಗಿದೆ.
ಹೊರ್ಮುಜ್ ಸಂಪೂರ್ಣ ಸ್ಥಗಿತ
ಟೆಹರಾನ್: ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಇರಾನ್ನ ಗುರುವಾರ ಘೋಷಿಸಿದೆ. 'ಅಮೆರಿಕ ಪಡೆಗಳ ತೀವ್ರತರದ ದಾಳಿಯಿಂದ ಗುರುವಾರದಿಂದಲೇ ಇರಾನ್ ಸೇನಾ ಪಡೆಯ ಸೂಚನೆಯಂತೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ' ಎಂದು ಹೊರ್ಮುಜ್ ಜಲಸಂಧಿಯ ಪ್ರಾಧಿಕಾರ ತಿಳಿಸಿದೆ.
'ಪರವಾನಗಿ ಹೊಂದಿರುವವರು ಮುಂದಿನ ಆದೇಶದವರೆಗೂ ಕಾಯಬೇಕು' ಎಂದು ತಿಳಿಸಿದೆ. ಯುದ್ಧದ ಆರಂಭದಿಂದಲೂ ಈ ಜಲಸಂಧಿಯ ಮೂಲಕ ಸಂಚಾರ ನಿರ್ಬಂಧಿಸಿದ ಕಾರಣ ಈಗಿನ ನಿರ್ಧಾರದಿಂದ ಉಂಟಾಗಿರುವ ಪರಿಣಾಮದ ಕುರಿತು ಇನ್ನಷ್ಟೇ ತಿಳಿಯಬೇಕಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಇಂಧನ ಹಾಗೂ ಆಹಾರ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವಾಗಿರುವ ಇರಾನ್ ಪ್ರಬಲ ಹಿಡಿತ ಹೊಂದಿರುವ 'ಹೊರ್ಮುಜ್ ಜಲಸಂಧಿ'ಯೇ ಮಾತುಕತೆಯ ಕೇಂದ್ರಬಿಂದುವಾಗಿದೆ.
ವೆನೆಜುವೆಲ್ಲಾ ಮಾದರಿ ಕಾರ್ಯಾಚರಣೆ: ಟ್ರಂಪ್
'ಇರಾನ್ ಮೇಲೆ ಭೀಕರ ದಾಳಿ ನಡೆಸಲಾಗುವುದು ಮತ್ತು ಅಲ್ಲಿನ ತೈಲ ಹಾಗೂ ಅನಿಲ ಮೂಲಸೌಕರ್ಯಗಳ ಮೇಲೆ ನಾವು ಸದ್ಯದಲ್ಲಿಯೇ ಹಿಡಿತ ಸಾಧಿಸಲಿದ್ದೇವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. 'ಭವಿಷ್ಯದಲ್ಲಿ ನಾವು ಖಾರ್ಗ್ ದ್ವೀಪ ಸೇರಿದಂತೆ ಅನಿಲ ಕೇಂದ್ರಗಳ ಮೇಲೆ ನಿಯಂತ್ರಣ ಸಾಧಿಸುವ ದಿನಗಳು ದೂರವಿಲ್ಲ. ವೆನೆಜುವೆಲ್ಲಾ ಮಾದರಿಯಲ್ಲಿಯೇ ನಾವು ಇಲ್ಲಿಯೂ ಕೂಡ ಹಿಡಿತ ಸಾಧಿಸಲಿದ್ದೇವೆ' ಎಂದು ಟ್ರೂಥ್ ಸೋಷಿಯಲ್ನಲ್ಲಿ ಬರೆದುಕೊಂಡಿದ್ದಾರೆ.
ವಾಯು ಪ್ರದೇಶ ಮುಚ್ಚಿದ ಕುವೈತ್
ದುಬೈ: ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಕುವೈತ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಕುವೈತ್ನ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಈ ಘೋಷಣೆ ಮಾಡಿದೆ. ವಿಮಾನಗಳ ಸಂಚಾರವನ್ನು ಬೇರೆ ವಿಮಾನ ನಿಲ್ದಾಣಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದೆ.
ಕುವೈತ್ನ ವಾಯುಪ್ರದೇಶವನ್ನು ಗುರಿಯಾಗಿರಿಸಿಕೊಂಡು ಇರಾನ್ ಸತತ ದಾಳಿ ನಡೆಸುತ್ತಿವೆ ಎಂದು ಸೇನೆಯು ಘೋಷಿಸಿದ ಬಳಿಕ ಕುವೈತ್ಗೆ ಬರಬೇಕಿದ್ದ ಹಲವು ವಿಮಾನಗಳು ದೇಶದ ಹೊರಭಾಗದಲ್ಲಿಯೇ ಸುತ್ತಿದ್ದವು.
'ಇರಾನ್ ನಡೆಸುತ್ತಿರುವ ಪಾಪಕೃತ್ಯದ ತೀವ್ರ ಆಕ್ರಮಣ ಹಾಗೂ ಸಂಭಾವ್ಯ ಅಪಾಯದಿಂದ ನಾಗರಿಕ ವಿಮಾನಯಾನ ಹಾರಾಟದ ಮೇಲೆ ವ್ಯತ್ಯಯ ಉಂಟಾಗಬಹುದು' ಎಂದು ತಿಳಿಸಿದೆ.
ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಇತ್ತೀಚಿಗೆ ನಡೆಸಿದ ದಾಳಿಯಲ್ಲಿ ಭಾರತದ ಒಬ್ಬ ವ್ಯಕ್ತಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು.

