ಟೆಹರಾನ್: ಸ್ವಿಟ್ಜರ್‌ಲ್ಯಾಂಡ್ ನಲ್ಲಿ ಅಮೆರಿಕದೊಂದಿಗೆ ನಡೆಯಲಿರುವ ಮಾತುಕತೆಯಲ್ಲಿ ಲೆಬನಾನ್ ನಲ್ಲಿ ಹಿಝ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಯುದ್ಧವೇ ಪ್ರಮುಖ ವಿಷಯವಾಗಿರಲಿದೆ ಎಂದು ಇರಾನ್ ರವಿವಾರ ತಿಳಿಸಿದೆ. ವಿದೇಶಗಳಲ್ಲಿ ಸ್ಥಗಿತಗೊಳಿಸಲಾಗಿರುವ ಇರಾನ್ ನ ನಿಧಿಗಳು ಹಾಗೂ ಇರಾನ್ ತೈಲ ಮಾರಾಟದ ಮೇಲಿನ ನಿರ್ಬಂಧಗಳ ವಿಷಯವೂ ಚರ್ಚೆಗೆ ಬರಲಿವೆ ಎಂದು ಹೇಳಿದೆ.
'ಲೆಬನಾನ್‌ಗೆ ಸಂಬಂಧಿಸಿದಂತೆ ಇಸ್ರೇಲ್ ತನ್ನ ಬದ್ಧತೆಗಳನ್ನು ಉಲ್ಲಂಘಿಸುತ್ತಿರುವ ವಿಚಾರವೇ ಇಂದಿನ ಮಾತುಕತೆಯ ಮುಖ್ಯ ಅಂಶವಾಗಲಿದೆ' ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೇಯಿ ಹೇಳಿದ್ದಾರೆ. ಅವರ ಹೇಳಿಕೆಯ ವೀಡಿಯೊವನ್ನು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಎನ್‌ಎ (IRNA) ಪ್ರಕಟಿಸಿದೆ.
ಫೆಬ್ರುವರಿ 28ರಿಂದ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿದ್ದ ಹಲವು ತಿಂಗಳ ದಾಳಿಯನ್ನು ಕೊನೆಗೊಳಿಸುವ ಉದ್ದೇಶದಿಂದ ಗುರುವಾರ ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಇರಾನ್ ತಿಳಿಸಿದೆ.
ಈ ಒಪ್ಪಂದದ ಪ್ರಕಾರ ಇಸ್ರೇಲ್ ಮತ್ತು ಹಿಝ್ಬುಲ್ಲಾ ನಡುವಿನ ಯುದ್ಧವೂ ಅಂತ್ಯಗೊಳ್ಳಬೇಕಿದೆ.
ಆದರೆ, ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಮುಂದುವರಿದಿರುವ ಕಾರಣ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಇರಾನ್ ಸೇನೆ ಶನಿವಾರ ಘೋಷಿಸಿದೆ.

