ವಾಷಿಂಗ್ಟನ್/ ಇಸ್ಲಾಮಾಬಾದ್: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸುವ ಶಾಂತಿ ಒಪ್ಪಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್‌ನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಪ್ರತ್ಯೇಕವಾಗಿ ಸಹಿ ಹಾಕಿದ್ದಾರೆ.
ಒಪ್ಪಂದದಂತೆ ಹೊರ್ಮುಜ್ ಜಲಸಂಧಿಯು ಹಡಗುಗಳ ಸಂಚಾರಕ್ಕೆ ಮುಕ್ತಗೊಳ್ಳಲಿರುವ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ತೈಲ ಬೆಲೆಯಲ್ಲಿ ಇಳಿಕೆ ಕಂಡಿದೆ.
ಪ್ಯಾರಿಸ್‌ನ ಹೊರವಲಯದ ವೆರ್ಸೈನಲ್ಲಿರುವ ಅರಮನೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಬುಧವಾರ ರಾತ್ರಿ ಏರ್ಪಡಿಸಿದ್ದ ಔತಣ ಕೂಟದ ಸಂದರ್ಭದಲ್ಲಿ ಟ್ರಂಪ್ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮತ್ತೊಂದೆಡೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
'ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್ ಅವರು ಸಹಿ ಹಾಕಿದ್ದು, ಒಪ್ಪಂದದ ಅಂಶಗಳನ್ನು ಅನುಷ್ಠಾನಕ್ಕೆ ತರುವ ಸಮಯ ಬಂದಿದೆ' ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಖಾಯಿ ಹೇಳಿದ್ದಾರೆ.
'ಐತಿಹಾಸಿಕ 'ಇಸ್ಲಾಮಾಬಾದ್ ಒಪ್ಪಂದ'ಕ್ಕೆ ಅಮೆರಿಕ ಮತ್ತು ಇರಾನ್ ಸಹಿ ಹಾಕಿವೆ ಎಂದು ಘೋಷಿಸಲು ನನಗೆ ಹೆಮ್ಮೆ ಎನಿಸುತ್ತದೆ' ಎಂದು ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ಅಧ್ಯಕ್ಷ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. ಎರಡೂ ದೇಶಗಳು ಸಹಿ ಹಾಕಿರುವ ಒಪ್ಪಂದ ಪತ್ರಕ್ಕೆ ಶೆಹಬಾಜ್ ಷರೀಫ್ ಅವರು ಸಹಿ ಹಾಕುವ ಮೂಲಕ ಅನುಮೋದಿಸಿದ್ದಾರೆ.
'ಒಪ್ಪಂದವು ತಕ್ಷಣದಿಂದಲೇ ಜಾರಿಗೆ ಬರಲಿದೆ. ಒಪ್ಪಂದದ ಮೊದಲ ಹೆಜ್ಜೆಯಾಗಿ, ಹೊರ್ಮುಜ್ ಜಲಸಂಧಿಯನ್ನು ಇರಾನ್ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲಿದೆ. ಇರಾನ್‌ನ ಬಂದರುಗಳ ಮೇಲೆ ಹೇರಿರುವ ದಿಗ್ಬಂಧನವನ್ನು ಅಮೆರಿಕ ತೆಗೆದು ಹಾಕಲಿದೆ' ಎಂದು ಷರೀಫ್ ಹೇಳಿದ್ದಾರೆ.
ಔಪಚಾರಿಕ ಸಮಾರಂಭದ ಬಗ್ಗೆ ಗೊಂದಲ:
ಇರಾನ್‌ನ ಪ್ರಮುಖ ಸಂಧಾನಕಾರ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಹಾಗೂ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಸ್ವಿಟ್ಜರ್ಲೆಂಡ್‌ನಲ್ಲಿ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕುವರು ಎಂದು ಭಾವಿಸಲಾಗಿತ್ತು. ಆದರೆ ಟ್ರಂಪ್ ಮತ್ತು ಪೆಜೆಶ್ಕಿಯಾನ್ ಈಗಾಗಲೇ ಸಹಿ ಹಾಕಿರುವುದರಿಂದ ಶುಕ್ರವಾರ ನಡೆಯುವ ಔಪಚಾರಿಕ ಸಮಾರಂಭದ ಬಗ್ಗೆ ಗೊಂದಲ ಮೂಡಿದೆ.
ಔಪಚಾರಿಕ ಸಮಾರಂಭದ ಅಗತ್ಯವಿಲ್ಲ' ಎಂದು ಇಸ್ಮಾಯಿಲ್ ಬಖಾಯಿ ಹೇಳಿದ್ದಾರೆ. ಆದರೆ ಸ್ವಿಟ್ಜರ್ಲೆಂಡ್‌ನ ನಿಡ್ವಾಲ್ಡೆನ್‌ನಲ್ಲಿರುವ ಬರ್ಗನ್‌ಸ್ಟಾಕ್ ರೆಸಾರ್ಟ್‌ನಲ್ಲಿ ನಿಗದಿಯಂತೆ ಶುಕ್ರವಾರ ಸಮಾರಂಭ ನಡೆಯಲಿದ್ದು, ಮುಂದಿನ ಹಂತದ ಮಾತುಕತೆ ಪ್ರಾರಂಭವಾಗಲಿದೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.
'ಟೀಕಾಕಾರರು ಮೂರ್ಖರು'
ಇರಾನ್ ಜತೆಗಿನ ಶಾಂತಿ ಒಪ್ಪಂದವನ್ನು ಟೀಕಿಸುವವರ ವಿರುದ್ಧ ಡೊನಾಲ್ಡ್ ಟ್ರಂಪ್ ಕಿಡಿ ಕಾರಿದ್ದು ಇರಾನ್‌ಗೆ ವಿನಾಯಿತಿಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸುವವರನ್ನು 'ಮೂರ್ಖರು' ಎಂದು ಕರೆದಿದ್ದಾರೆ.
'ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕವು ದಾಖಲೆಯ ಏರಿಕೆ ಕಂಡಿದ್ದು ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಆದರೂ 'ಇರಾನ್‌ಗೆ ಸಂಬಂಧಿಸಿದಂತೆ ನಾನು ಕಠಿಣ ನಿಲುವು ತೆಗೆದುಕೊಂಡಿಲ್ಲ' ಎಂದು ಕೆಲವರು ಭಾವಿಸುತ್ತಿದ್ದಾರೆ. ಅವರು ಅಸೂಯೆಪಟ್ಟವರು ಕೆಟ್ಟ ಜನರು ಅಥವಾ ಮೂರ್ಖರು' ಎಂದು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅಮೆರಿಕದ ವಿದೇಶಾಂಗ ನೀತಿಗೆ ಹಿನ್ನೆಡೆ: ಟೀಕೆ
ಅಮೆರಿಕದ ವಿದೇಶಾಂಗ ನೀತಿಗೆ ಇರಾನ್ ಜತೆ ಒಪ್ಪಂದ ಮಾಡಿಕೊಳ್ಳುವ ಟ್ರಂಪ್ ಅವರ ನಿರ್ಧಾರವನ್ನು ಅಮೆರಿಕದ ಕೆಲವು ಮಾಧ್ಯಮಗಳು ಟೀಕಿಸಿವೆ. ಟ್ರಂಪ್ ಸ್ನೇಹಿ ಸುದ್ದಿ ವಾಹಿನಿ ಎನಿಸಿಕೊಂಡಿರುವ 'ಫಾಕ್ಸ್ ನ್ಯೂಸ್' ಕೂಡ 'ಒಪ್ಪಂದವು ಇರಾನ್‌ಗೆ ಭಾರಿ ಆರ್ಥಿಕ ಪ್ರಯೋಜನಗಳನ್ನು ನೀಡಿದೆ' ಎಂಬ ಟೀಕಾಕಾರರ ಹೇಳಿಕೆಗಳನ್ನು ಉಲ್ಲೇಖಿಸಿ ವರದಿ ಬಿತ್ತರಿಸಿದೆ. 'ಇರಾನ್‌ನ ಪರಮಾಣು ಯೋಜನೆಗಳನ್ನು ತಡೆಯಲು ಸಾಧ್ಯವಾಗದ ಈ ಒಪ್ಪಂದವು ಅಮೆರಿಕದ ವಿದೇಶಾಂಗ ನೀತಿಗೆ ದಶಕಗಳಲ್ಲಿ ಎದುರಾದ ಅತಿದೊಡ್ಡ ಹಿನ್ನಡೆ' ಎಂದು ರಿಪಬ್ಲಿಕನ್ ಪಕ್ಷದ ಸಂಸದ ಬಿಲ್ ಕ್ಯಾಸಿಡಿ ಟೀಕಿಸಿದ್ದಾರೆ.
ಪ್ರಮುಖ ಅಂಶಗಳು
ಶಾಂತಿ ಒಪ್ಪಂದವು ಯುದ್ಧಕ್ಕಿಂತ ಮೊದಲಿನ ಸ್ಥಿತಿಯನ್ನು ಪುನಃಸ್ಥಾಪಿಸಲು ನೆರವಾಗಲಿದೆ
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಎಲ್ಲ ರೀತಿಯ ಸೇನಾ ಸಂಘರ್ಷಕ್ಕೆ ತೆರೆ ಬೀಳಲಿದೆ
ಹೊರ್ಮುಜ್ ಜಲಸಂಧಿ ಮುಕ್ತಗೊಳ್ಳಲಿದ್ದು ಇರಾನ್ ಬಂದರುಗಳ ಮೇಲಿನ ದಿಗ್ಭಂದನವನ್ನು ಅಮೆರಿಕವು ತೆರವುಗೊಳಿಸಲಿದೆ
ಇರಾನ್ ಮೇಲಿನ ನಿರ್ಬಂಧಗಳನ್ನು ಅಮೆರಿಕವು ತೆರವುಗೊಳಿಸಲಿದೆ
ಇರಾನ್‌ನ ಪರಮಾಣು ಯೋಜನೆಗಳಿಗೆ ಸಂಬಂಧಿಸಿದಂತೆ ಅಮೆರಿಕ-ಇರಾನ್ ನಡುವಿನ ಮಾತುಕತೆ ಪುನರಾರಂಭಗೊಳ್ಳಲಿದೆ
ಮುಂದಿನ 60 ದಿನಗಳ ಒಳಗೆ ಅಂತಿಮ ಶಾಂತಿ ಒಪ್ಪಂದದ ರೂಪುರೇಷೆ ಪೂರ್ಣಗೊಳ್ಳಬೇಕು
- ಪೀಟ್ ಹೆಗ್ಸೆತ್, ಅಮೆರಿಕದ ರಕ್ಷಣಾ ಕಾರ್ಯದರ್ಶಿಒಪ್ಪಂದದ ಅಡಿಯಲ್ಲಿ ಇರಾನ್ ತನ್ನ ಬದ್ಧತೆಗಳನ್ನು ಪೂರೈಸದಿದ್ದರೆ ಅಮೆರಿಕವು ಸೇನಾ ಕಾರ್ಯಾಚರಣೆ ಪುನರಾರಂಭಿಸಲಿದೆ ಹಾಗೂ ಮತ್ತೆ ದಿಗ್ಬಂಧನ ಹೇರಲಿದೆ.ಇಸ್ಮಾಯಿಲ್ ಬಖಾಯಿ, ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇರಾನ್‌ನ ಕ್ಷಿಪಣಿ ಯೋಜನೆಗಳು ಈಗಿನ ಶಾಂತಿ ಒಪ್ಪಂದದ ಭಾಗವಾಗಿಲ್ಲ ಹಾಗೂ ಅಮೆರಿಕದೊಂದಿಗೆ ಭವಿಷ್ಯದ ಮಾತುಕತೆಗಳ ಭಾಗವಾಗುವುದಿಲ್ಲ.

