ಮಾಸ್ಕೊ: ರಷ್ಯಾದ ರಾಜಧಾನಿ ಮಾಸ್ಕೊ ನಗರದ ಮೇಲೆ ಇಲ್ಲಿಯವರೆಗಿನ ಅತ್ಯಂತ ದೊಡ್ಡ ಮಟ್ಟದ ಡ್ರೋನ್ ದಾಳಿಯನ್ನು ಉಕ್ರೇನ್ ಗುರುವಾರ ನಡೆಸಿದೆ. ನಗರದಲ್ಲಿರುವ ಅತ್ಯಂತ ಪ್ರಮುಖ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 17 ಮಂದಿಗೆ ಗಾಯಗಳಾಗಿವೆ.
'ತೈಲ ಸಂಸ್ಕರಣಾ ಘಟಕದ ಜೊತೆ ನಗರದ ಶಾಪಿಂಗ್ ಕೇಂದ್ರ ಮತ್ತು ವಸತಿ ಸಮುಚ್ಛಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಜಾನ್ ನಗರದಲ್ಲಿ ಆಗ್ನೇತ ಏಷ್ಯಾ ದೇಶಗಳ ನಾಯಕರ ಶೃಂಗಸಭೆಯನ್ನು ರಷ್ಯಾ ಅಧ್ಯಕ್ಷ ಪುಟಿನ್ ಅವರು ಆಯೋಜಿಸಿದ್ದರು. ಸಭೆ ವೇಳೆಯೇ ದಾಳಿ ನಡೆಸಲಾಗಿದೆ. ಶೃಂಗವನ್ನು ಉದ್ದೇಶಿಸಿ ಪುಟಿನ್ ಅವರು ಮಾತನಾಡಿದರಾದರೂ, ಉಕ್ರೇನ್ ದಾಳಿಯ ಕುರಿತು ಪ್ರಸ್ತಾಪ ಮಾಡಲಿಲ್ಲ.
ಯುನೆಸ್ಕೊ ಸಂರಕ್ಷಿತ 11ನೇ ಶತಮಾನದ ಉಕ್ರೇನ್‌ನ ಚರ್ಚ್‌ವೊಂದರ ಮೇಲೆ ರಷ್ಯಾವು ವಾರದ ಹಿಂದೆ ದಾಳಿ ನಡೆಸಿತ್ತು. ಜೊತೆಗೆ ಕೀವ್ ನಗರದ ಮೇಲೆಯೂ ದಾಳಿ ನಡೆಸಿತ್ತು. ಇವಕ್ಕೆ ಪ್ರತಿಯಾಗಿ ದಾಳಿ ಮಾಡಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಮೃತದೇಹ ವಾಪಸ್:
ಉಕ್ರೇನ್‌ನ 522 ಮಂದಿಯ ಮೃತದೇಹಗಳನ್ನು ರಷ್ಯಾ ಗುರುವಾರ ವಾಪಸು ಮಾಡಿದೆ. ಇವರು ಸಾಮಾನ್ಯ ನಾಗರಿಕರು ಎಂದು ರಷ್ಯಾ ಹೇಳಿದೆ. ಆದರೆ, ಇವು ಸೈನಿಕರು ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

