ನವದೆಹಲಿ: ನೀಟ್-ಯುಜಿ ಮರು ಪರೀಕ್ಷೆಗೆ ಅಗತ್ಯ ಸಿದ್ಧತಾ ಕ್ರಮಗಳನ್ನು ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಅಧಿಕಾರಿಗಳು ಬುಧವಾರ (ಜೂನ್ 10) ಆರೋಗ್ಯ ಸಚಿವಾಲಯ ಕುರಿತ ಸಂಸದೀಯ ಸ್ಥಾಯಿಸಮಿತಿಗೆ ವಿವರಣೆ ನೀಡಲಿದ್ದಾರೆ.
ಎನ್‌ಟಿಎ, ಎನ್‌ಎಂಸಿ, ಆರೋಗ್ಯ ಹಾಗೂ ಉನ್ನತ ಶಿಕ್ಷಣ ಸಚಿವಾಲಯದ ಅಧಿಕಾರಿಗಳಿಗೆ ಬುಧವಾರ (ಜೂನ್ 10) ಮಧ್ಯಾಹ್ನ ಸಮಿತಿಯನ್ನು ಭೇಟಿಯಾಗಿ ವಿವರಣೆ ನೀಡುವಂತೆ ಸಮನ್ಸ್ ನೀಡಲಾಗಿತ್ತು.
ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನೀಟ್-ಯುಜಿ ಪರೀಕ್ಷೆ ರದ್ದುಪಡಿಸಲಾಗಿತ್ತು. ಮರುಪರೀಕ್ಷೆಯನ್ನು ಇದೇ ಜೂನ್ 21ರಂದು ನಡೆಸಲು ಎನ್‌ಟಿಎ ನಿರ್ಧರಿಸಿದೆ.
ನೀಟ್-ಯುಜಿ ಮರುಪರೀಕ್ಷೆ ಕುರಿತು ವಿವಿಧ ಅಧಿಕಾರಿಗಳು ವಿವರಣೆ ನೀಡುತ್ತಿರುವ ಮೂರನೇ ಸಮಿತಿ ಇದಾಗಿದೆ. ಈ ಮೊದಲು ಶಿಕ್ಷಣ ಸಚಿವಾಲಯ ಮತ್ತು ಭರವಸೆಗಳ ಸಮಿತಿಯು ಅಧಿಕಾರಿಗಳಿಂದ ವಿವರಣೆ ಪಡೆದಿತ್ತು.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಿಬಿಎಸ್‌ಇಯ ಒಎಸ್‌ಎಂ ಲೋಪ ಕುರಿತಂತೆ ತನಿಖೆ ನಡೆಸುತ್ತಿರುವ ದಿಗ್ವಿಜಯ ಸಿಂಗ್ ನೇತೃತ್ವದ ಸಂಸತ್ತಿನ ಸಮಿತಿಯು ಈಗಾಗಲೇ ವಿವಿಧ ಅಧಿಕಾರಿಗಳಿಂದ ವಿವರಣೆ ಪಡೆದಿದೆ.

