ನವದೆಹಲಿ: ಕೆಮ್ಮು ಸೇರಿದಂತೆ ಎಲ್ಲಾ ಔಷಧೀಯ ಸಿರಪ್ ಗಳನ್ನು ಖರೀದಿಸಲು ಇನ್ನು ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯವಾಗಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದ್ದು, ವೈದ್ಯರ ಚೀಟಿ ಇಲ್ಲದೆ ಸಿರಪ್ ಗಳ ನೇರ ಮಾರಾಟಕ್ಕೆ ಅವಕಾಶ ಇರುವುದಿಲ್ಲ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ-1940ರಡಿ ರೂಪಿಸಲಾದ ಡ್ರಗ್ಸ್ ನಿಯಮಗಳು-1945ಕ್ಕೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ.
ಇತ್ತೀಚಿನ ತಿದ್ದುಪಡಿ ಪ್ರಕಾರ, ಕಾಯ್ದೆಯ ನಿಬಂಧನೆಗಳಿಂದ ವಿನಾಯಿತಿ ಪಡೆದಿರುವ ಔಷಧೀಯ ವಸ್ತುಗಳ ಪಟ್ಟಿಯಿಂದ 'ಸಿರಪ್' ಎಂಬ ಪದವನ್ನು ತೆಗೆದುಹಾಕಲಾಗಿದೆ. ಈ ಮೊದಲು 'ಸಿರಪ್ ಗಳು, ಮಾತ್ರೆಗಳು ಮತ್ತು ಕೆಮ್ಮಿನ ಮಾತ್ರೆಗಳಿಗೆ' ವಿನಾಯಿತಿ ನೀಡಲಾಗಿತ್ತು.
ಮಂಗಳವಾರ ಹೊರಡಿಸಲಾದ ತಿದ್ದುಪಡಿಯ ಬಳಿಕ ಕೆಮ್ಮಿನ ಸಿರಪ್ ಗಳನ್ನು ಖರೀದಿಸಲು ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯವಾಗಲಿದೆ. ಹೀಗಾಗಿ ಈ ಸಿರಪ್ ಗಳ ಪ್ರತ್ಯಕ್ಷ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಆದರೆ ಕೆಮ್ಮಿಗೆ ಬಳಸುವ ಮಾತ್ರೆಗಳು ಹಾಗೂ ಟ್ಯಾಬ್ಲೆಟ್ ಗಳು ಹಿಂದಿನಂತೆಯೇ ಕೌಂಟರ್ ನಲ್ಲಿ ಲಭ್ಯವಿರಲಿವೆ.
ಈ ತಿದ್ದುಪಡಿಯು ಡಿಸೆಂಬರ್ 2025ರಲ್ಲಿ ಹೊರಡಿಸಲಾಗಿದ್ದ ಕರಡು ಅಧಿಸೂಚನೆಯ ನಂತರದ ಬೆಳವಣಿಗೆಯಾಗಿದೆ. ಕರಡು ನಿಯಮಗಳ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರ ಆಹ್ವಾನಿಸಿತ್ತು. ಕರಡು ನಿಯಮಗಳ ಬಗ್ಗೆ ಸ್ವೀಕರಿಸಲಾದ ಎಲ್ಲ ಅಭಿಪ್ರಾಯಗಳು, ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕವೇ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

