ಟೆಹ್ರಾನ್: ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕದ ಸೇನೆ ನಡೆಸಿದ ದಾಳಿ ವೇಳೆ ನಾಪತ್ತೆಯಾಗಿದ್ದ ಮೂವರು ಭಾರತೀಯರು ಮೃತಪಟ್ಟಿರುವುದಾಗಿ ಕೇಂದ್ರ ಬಂದರು ಸಚಿವ ಸರ್ಬಾನಂದ ಸೋನೊವಾಲ್ ಗುರುವಾರ ಖಚಿತಪಡಿಸಿದ್ದಾರೆ.
ಇರಾನ್ ಬಂದರಿನ ಮೇಲೆ ಅಮೆರಿಕ ಹೇರಿರುವ ದಿಗ್ಭಂಧನ ಉಲ್ಲಂಘಿಸಿ, ಅಲ್ಲಿಂದ ತೈಲ ಸಾಗಿಸುತ್ತಿದ್ದ ಮತ್ತು ತನ್ನ ಸೂಚನೆಗಳನ್ನು ಪಾಲಿಸಲು ವಿಫಲವಾದ ಕಾರಣ ಒಮಾನ್ ಕೊಲ್ಲಿಯಲ್ಲಿ ಪಲಾವು ದೇಶದ ಧ್ವಜ ಹೊಂದಿದ್ದ, ವಾಣಿಜ್ಯ ಹಡಗು ಸೆಟ್ಬೆಲ್ಲೊ ಮೇಲೆ ದಾಳಿ ನಡೆಸಲಾಯಿತು ಎಂದು ಅಮೆರಿಕದ ಸೇನೆ ಸಮರ್ಥಿಸಿಕೊಂಡಿತ್ತು.
ದಾಳಿ ಬೆನ್ನಲ್ಲೇ ಹಡಗಿನಲ್ಲಿದ್ದ 24 ಭಾರತೀಯರ ಪೈಕಿ 21 ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿತ್ತು. ಆದರೆ ಆ ಮೂವರು ಭಾರತೀಯ ಸಿಬ್ಬಂದಿ ಮೃತಪಟ್ಟಿರುವುದು ಇಂದು ಖಚಿತವಾಗಿದೆ ಎಂದು ಸಚಿವ ಸರ್ಬಾನಂದ ತಿಳಿಸಿದ್ದಾರೆ.
ಪ್ರತಿಭಟನೆ ದಾಖಲಿಸಿದ ಭಾರತ
ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕದ ಸೇನೆ ನಡೆಸಿದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ಸಚಿವಾಲಯವು ಬುಧವಾರ ಭಾರತದಲ್ಲಿನ ಅಮೆರಿಕದ ರಾಜತಾಂತ್ರಿಕ ಅಧಿಕಾರಿಯನ್ನು ಕರೆಯಿಸಿ, ಬಲವಾದ ಪ್ರತಿಭಟನೆ ದಾಖಲಿಸಿದೆ.
ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಜಾಸನ್ ಮೀಕ್ಸ್ ಅವರಿಗೆ ಭಾರತವು ಪ್ರತಿಭಟನೆ ವ್ಯಕ್ತಪಡಿಸಿ, ಅಧಿಕೃತ ರಾಜತಾಂತ್ರಿಕ ಟಿಪ್ಪಣಿಯನ್ನು ಹಸ್ತಾಂತರಿಸಿದೆ ಎಂದು ಮೂಲಗಳು ಹೇಳಿವೆ.
'ಪಶ್ಚಿಮ ಏಷ್ಯಾ ವಲಯದಲ್ಲಿ ವಾಣಿಜ್ಯ ಹಡಗುಗಳು ಮತ್ತು ಮೂಲಸೌಕರ್ಯ ಗುರಿಯಾಗಿಸಿ ದಾಳಿ ನಡೆಸುವುದನ್ನು ಕೊನೆಗಾಣಿಸಬೇಕು. ಅಂತರರಾಷ್ಟ್ರೀಯ ಜಲಮಾರ್ಗಗಳ ಮೂಲಕ ಮುಕ್ತ ಮತ್ತು ಅಡೆತಡೆಯಿಲ್ಲದ ಸಂಚಾರವನ್ನು ಆದಷ್ಟು ಬೇಗ ಪುನಸ್ಥಾಪಿಸಬೇಕು' ಎಂದು ಭಾರತ ಒತ್ತಾಯಿಸಿದೆ.

