ಕರಾಕಸ್: ದೇಶದಲ್ಲಿ ವಿನಾಶಕಾರಿ ಅವಳಿ ಭೂಕಂಪ ಸಂಭವಿಸಿದ ನಂತರ ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ಕೂಡಲೇ ತೆರವುಗೊಳಿಸುವಂತೆ ವೆನೆಜುವೆಲಾಕ್ಕೆ ವಿಶ್ವಸಂಸ್ಥೆ ತಾಕೀತು ಮಾಡಿದೆ.
'ತೀವ್ರ ವಿಪತ್ತಿನ ಸಮಯದಲ್ಲಿ ಯಾವುದೇ ನೆಪಗಳನ್ನು ಹೇಳದೆ ಕೂಡಲೇ ನಿರ್ಬಂಧವನ್ನು ತೆರವುಗೊಳಿಸಬೇಕು' ಎಂದು ವಿಶ್ವಸಂಸ್ಥೆ ಒತ್ತಾಯಿಸಿದೆ.
ವೆನೆಜುವೆಲಾದಲ್ಲಿ ಬುಧವಾರ ಸಂಜೆ ಸಂಭವಿಸಿದ ದುರಂತದಲ್ಲಿ 164 ಮಂದಿ ಸಾವಿಗೀಡಾಗಿದ್ದು, 971 ಜನರು ಗಾಯಗೊಂಡಿದ್ದಾರೆ ಎಂದು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯ ಕಟ್ಟಡಗಳು ಧ್ವಂಸಗೊಂಡಿರುವುದರಿಂದ ಮತ್ತು ಹಾನಿಗೊಳಗಾಗಿರುವುದರಿಂದ ಸಾವು-ನೋವಿನ ಬಗ್ಗೆ ನಿಖರವಾಗಿ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.
1900ರ ನಂತರ ವೆನೆಜುವೆಲಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ. ಅವಶೇಷಗಳ ಅಡಿ ಸಿಲುಕಿರುವವರ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
'ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೆ' (ಯುಎಸ್‌ಜಿಎಸ್) ಪ್ರಕಾರ 7.2ರ ತೀವ್ರತೆಯ ಮೊದಲ ಭೂಕಂಪದ ಕೇಂದ್ರ ಬಿಂದುವು ಕೆರೀಬಿಯನ್‌ನ ಕರಾವಳಿಯಲ್ಲಿ ಮೊರೊನ್‌ನ ಪಶ್ಚಿಮಕ್ಕೆ ಕರಾಕಸ್‌ನಿಂದ ಸುಮಾರು 168 ಕಿ.ಮೀ. ದೂರದಲ್ಲಿ ಮತ್ತು 22 ಕಿ.ಮೀ. ಆಳದಲ್ಲಿ ಸಂಭವಿಸಿದೆ. ಅದರ ಬೆನ್ನಲ್ಲೆ ಸಂಭವಿಸಿದ 7.5ರ ತೀವ್ರತೆಯ ಭೂಕಂಪದ ಕೇಂದ್ರ ಬಿಂದುವು ಮೊರಾನ್‌ನ ನೈರುತ್ಯಕ್ಕೆ 16 ಕಿ.ಮೀ ದೂರದಲ್ಲಿ, 10 ಕಿ.ಮೀ. ಆಳದಲ್ಲಿ ಸಂಭವಿಸಿದೆ.

