ಟೆಲ್‍ಅವಿವ್: ಸೊಮಾಲಿಲ್ಯಾಂಡ್‍ನಲ್ಲಿ ಯಾವುದೇ ಇಸ್ರೇಲಿ ಮಿಲಿಟರಿ ಉಪಸ್ಥಿತಿಯಿಲ್ಲ ಮತ್ತು ಅಲ್ಲಿ ಇಸ್ರೇಲ್ ಮಿಲಿಟರಿ ನೆಲೆಯನ್ನು ತೆರೆಯುವ ಬಗ್ಗೆ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂದು ಸೊಮಾಲಿಲ್ಯಾಂಡ್‍ನ ರಕ್ಷಣಾ ಸಚಿವ ಮುಹಮ್ಮದ್ ಯೂಸುಫ್ ಅಲಿಯನ್ನು ಉಲ್ಲೇಖಿಸಿ ಬುಧವಾರ `ರಾಯ್ಟರ್ಸ್' ವರದಿ ಮಾಡಿದೆ.
ಇಸ್ರೇಲ್‍ನ ಟೆಲ್ ಅವಿವ್‍ನಲ್ಲಿ ನಡೆದ ವ್ಯಾಪಾರ ಸಮ್ಮೇಳನದ ಸಂದರ್ಭದಲ್ಲಿ ಮಾತನಾಡಿದ ಅವರು `ಇಸ್ರೇಲ್ ಸೊಮಾಲಿಲ್ಯಾಂಡ್‍ನ ಮಿಲಿಟರಿ ಮತ್ತು ಪೊಲೀಸರಿಗೆ ತರಬೇತಿ ನೀಡುತ್ತಿದೆ. ಆದರೆ ಆ ಪ್ರದೇಶದಲ್ಲಿ ಇಸ್ರೇಲ್ ಮಿಲಿಟರಿ ನೆಲೆಯನ್ನು ಸ್ಥಾಪಿಸಲು ಮಾತುಕತೆ ನಡೆಸುತ್ತಿದೆ ಎಂಬ ವರದಿಗಳಲ್ಲಿ ಹುರುಳಿಲ್ಲ' ಎಂದು ತಳ್ಳಿಹಾಕಿದರು.
ಸೊಮಾಲಿಯಾದಿಂದ ಬೇರ್ಪಟ್ಟ ಸೊಮಾಲಿಲ್ಯಾಂಡ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಅಧಿಕೃತವಾಗಿ ಅಂಗೀಕರಿಸಿದ ಮೊದಲ ದೇಶವಾಗಿ ಇಸ್ರೇಲ್ ಗುರುತಿಸಿಕೊಂಡಿದೆ. ಆದರೆ, ಈ ಕ್ರಮವನ್ನು ಸೊಮಾಲಿಯಾ ತಿರಸ್ಕರಿಸಿದೆ ಮತ್ತು ಇದನ್ನು ತನ್ನ ಸಾರ್ವಭೌಮತ್ವದ ಮೇಲಿನ ಉದ್ದೇಶಪೂರ್ವಕ ದಾಳಿ ಎಂದು ಕರೆದಿದೆ. ಇಸ್ರೇಲ್ ಸೊಮಾಲಿಲ್ಯಾಂಡ್‍ನಲ್ಲಿ ಗುಪ್ತಚರ ನೆಲೆಯನ್ನು ತೆರೆದಿದೆ ಮತ್ತು ಇಸ್ರೇಲ್ ಮಿಲಿಟರಿ ನೆಲೆಯನ್ನು ಸ್ಥಾಪಿಸುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು `ಸೊಮಾಲಿ ಗಾರ್ಡಿಯನ್' ರವಿವಾರ ವರದಿ ಮಾಡಿತ್ತು.

