ಕಾಸರಗೋಡು: ಹೊಸ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದಂತೆ ಶಾಲಾ ವಠಾರದ ವ್ಯಾಪಾರಿ ಸಂಸ್ಥೆಗಳಲ್ಲಿ ನಿಷೇಧಿತ ತಂಬಾಕು ಉತ್ಪನ್ನ ಸೇರಿದಂತೆ ಮಾದಕ ವಸ್ತುಗಳ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಗುಪ್ತಚರ ವಿಭಾಗ ರಹಸ್ಯ ಕಾರ್ಯಾಚರಣೆ ಆರಂಭಿಸಿದೆ. 'ಅಪರೇಷನ್ ತಂಡರ್' ಯೋಜನೆಯನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಜಿಲ್ಲೆಯ ಎಲ್ಲಾ ಶಾಲಾ ಪರಿಸರದ ಅಂಗಡಿಗಳಿಗೆ ದಾಳಿ ಆಯೋಜಿಸಲಾಗುತ್ತಿದೆ. ಅಬಕಾರಿ ಗುಪ್ತಚರ ವಿಭಾಗದ ಇನ್ಸ್‍ಪೆಕ್ಟರ್ ಸುಬಿನ್‍ರಾಜ್ ನೇತೃತ್ವದ ಅಬಕಾರಿ ತಂಡ ಕಾರ್ಯಾಚರಣೆ ನಡೆಸುತ್ತಿದೆ. ನೀಲೇಶ್ವರ ಅಬಕಾರಿ ರೇಂಜ್ ಕಚೇರಿಯ ವ್ಯಾಪ್ತಿಯಲ್ಲೂ ತಪಾಸಣೆ ನಡೆಸಲಾಯಿತು.
ಇದರೊಂದಿಗೆ ಅಬಕಾರಿ ತಂಡ ಶಾಲೆಗಳನ್ನು ಸಂದರ್ಶಿಸಿ, ಅಮಲು ಪದಾರ್ಥ, ಮಾದಕ ದ್ರವ್ಯಬಳಕೆ ವಿರುದ್ಧ ಶಾಲೆಗಳಲ್ಲಿ ರಚಿಸಲಾಗಿರುವ ವಿಮುಕ್ತಿ ಸಮಿತಿಯ ಹೊಣೆಗಾರಿಕೆ ಹೊಂದಿರುವ ಅಧ್ಯಾಪಕರೊಂದಿಗೆ ಚರ್ಚೆಯನ್ನು ನಡೆಸಿ ಕೈಗೊಳ್ಳಬೇಕಾಗಿರುವ ಅಗತ್ಯದ ಮುಂಜಾಗ್ರತಾ ಕ್ರಮದ ಬಗ್ಗೆಯೂ ಮಾಹಿತಿ ನೀಡಲಾಯಿತು. ಗುಪ್ತಚರ ವಿಭಾಗದ ಅಸಿಸ್ಟೆಂಟ್ ಇನ್ಸ್‍ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ, ನೀಲೇಶ್ವರ ರೇಂಜ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‍ಪೆಕ್ಟರ್ (ಗ್ರೇಡ್) ರಾಜನ್ ಮತ್ತು ರಮ್ಮಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


