ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಉದ್ಭವವಾಗಿದ್ದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಮಸ್ಯೆಯ ಬಳಿಕ ಭಾರತ ತೈಲ ಖರೀದಿ ಮೂಲಗಳನ್ನು ವೈವಿಧ್ಯಗೊಳಿಸಿದೆ. ಗಲ್ಫ್ ಪ್ರದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅಮೆರಿಕ, ಇರಾನ್ ಮತ್ತು ಇತರ ದೇಶಗಳಿಂದ ಆಮದನ್ನು ಹೆಚ್ಚಿಸಿದೆ.
ಇದೇ ವೇಳೆ, ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ಮಾರಾಟಗಾರರು ಅಂತರರಾಷ್ಟ್ರೀಯ ಬೆಲೆಗಳ ಏರಿಕೆಯ ಬಹುಪಾಲು ಹೊರೆಯನ್ನು ತಾವೇ ಭರಿಸಿದ್ದಾರೆ.
ಸಂಘರ್ಷಕ್ಕೆ ಮುನ್ನ, ಭಾರತದ ಎಲ್‌ಪಿಜಿ ಆಮದಿನ ಸರಿಸುಮಾರು ಶೇ 90 ರಷ್ಟು ಪಶ್ಚಿಮ ಏಷ್ಯಾದ ಪೂರೈಕೆದಾರರಿಂದಲೇ ಬರುತ್ತಿತ್ತು. ಇತ್ತೀಚಿನ ಸಂಘರ್ಷದಿಂದಾಗಿ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿ, ದೇಶದಲ್ಲಿ ಎಲ್‌ಪಿಸಿ ಸಮಸ್ಯೆ ತೀವ್ರವಾಗಿತ್ತು.
ಫೆಬ್ರುವರಿಯಲ್ಲಿ ಭಾರತದ ಒಟ್ಟು ಆಮದಿನ ಶೇ 8ರಷ್ಟು ಅಮೆರಿಕದಿಂದ ಬರುತ್ತಿತ್ತು. ಆದರೆ ಏಪ್ರಿಲ್ 2026 ರ ವೇಳೆಗೆ ಭಾರತದ ಒಟ್ಟು ಎಲ್‌ಪಿಜಿ ಆಮದಿನಲ್ಲಿ ಸುಮಾರು ಮೂರನೇ ಒಂದರಷ್ಟು ಅಮೆರಿಕದಂದಲೇ ಬರುತ್ತಿದೆ ಎಂದು ಕ್ರಿಸಿಲ್ ಹೇಳಿದೆ.
ವಾರ್ಷಿಕ 22 ಲಕ್ಷ ಟನ್ ಎಲ್‌ಪಿಜಿ ಪೂರೈಕೆಗೆ 2025ರ ಕೊನೆಯಲ್ಲಿ ಅಮೆರಿಕದೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಇದು ಭಾರತದ ವಾರ್ಷಿಕ ಆಮದು ಅಗತ್ಯತೆಯ ಸುಮಾರು ಶೇ 10 ಕ್ಕೆ ಸಮ.
ಇರಾನ್‌ನಿಂದಲೂ ಭಾರತ ಆಮದು ಮಾಡಿಕೊಂಡಿದ್ದು, ಏಪ್ರಿಲ್‌ನಲ್ಲಿ ಖರೀದಿ ಮಾಡಲಾದ ಎಲ್‌ಪಿಜಿಯ ಶೇ 6ಷ್ಟು ಇರಾನ್‌ನಿಂದ ಬಂದಿದೆ. ಅರ್ಜೆಂಟೀನಾ, ಚಿಲಿ, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ಸ್‌ನಂತಹ ದೇಶಗಳಿಂದಲೂ ಎಲ್‌ಪಿಜಿ ಆಮದು ಮಾಡಿಕೊಳ್ಳಲಾಗಿದೆ.
ಸಂಘರ್ಷದ ಅವಧಿಯಲ್ಲಿ ಬೇರೆ ಬೇರೆ ದೇಶಗಳಿಂದ ಎಲ್‌ಪಿಜಿ ಖರೀದಿ ಮಾಡಲಾಯಿತಾದರೂ, ಸುದೀರ್ಘ ಸಾಗಣಿಕೆ ಸಮಯ ಹಾಗೂ ಹೆಚ್ಚಿನ ವೆಚ್ಚ ಭರಿಸಬೇಕಾಯಿತು.
ಆ ಸಮಯದಲ್ಲಿ ಉಂಟಾದ ಸಂಘರ್ಷ, ಬೇಡಿಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಲಭ್ಯತೆಯ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಬಳಕೆ ಇಳಿಕೆಯಾಗಿದೆ. ಫೆಬ್ರುವರಿಯಲ್ಲಿ 32 ಲಕ್ಷ ಟನ್ ಎಲ್‌ಪಿಜಿ ಬಳಕೆಯಾದರೆ, ಏಪ್ರಿಲ್‌ನಲ್ಲಿ ಅದು 24.7 ಲಕ್ಷ ಟನ್‌ಗಳಿಗೆ ಕುಸಿದಿದೆ.

