HEALTH TIPS

FIFA 2026 | ನೆದರ್‌ಲ್ಯಾಂಡ್ಸ್, ಜಪಾನ್, ಸ್ವೀಡನ್,ಆಸ್ಟ್ರೇಲಿಯ, ಐವರಿ ಕೋಸ್ಟ್ ನಾಕೌಟ್ ಸುತ್ತಿಗೆ ತೇರ್ಗಡೆ

ಕಾನ್ಸಾಸ್ ಸಿಟಿ: ನೆದರ್‌ಲ್ಯಾಂಡ್ಸ್, ಜಪಾನ್, ಸ್ವೀಡನ್, ಆಸ್ಟ್ರೇಲಿಯ ಹಾಗೂ ಐವರಿ ಕೋಸ್ಟ್ ತಂಡಗಳು ಈಗ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಅಂತಿಮ-32ರ ಸುತ್ತಿಗೆ ತೇರ್ಗಡೆಯಾಗಿವೆ.

ಶುಕ್ರವಾರ ಮುಂಜಾನೆ ನಡೆದ ಪಂದ್ಯದಲ್ಲಿ ಟುನೀಶಿಯ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿದ ನೆದರ್‌ಲ್ಯಾಂಡ್ಸ್ ತಂಡ 'ಎಫ್' ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು ಅಂತಿಮ-32ರ ಸುತ್ತಿಗೆ ಲಗ್ಗೆ ಇಟ್ಟಿದೆ.

ನಾಕೌಟ್ ಸುತ್ತಿನಲ್ಲಿ ಮೊರಾಕ್ಕೊ ತಂಡದ ಸವಾಲು ಎದುರಿಸಲಿದೆ.

ಡಚ್ಚರು ಜಪಾನ್ ತಂಡವನ್ನು ಹಿಂದಿಕ್ಕಿ 'ಎಫ್' ಗುಂಪಿನಲ್ಲಿ ಮೊದಲ ಸ್ಥಾನ ಪಡೆದರು. ಜಪಾನ್ ತಂಡವು ಸ್ವೀಡನ್ ವಿರುದ್ಧದ ಪಂದ್ಯವನ್ನು ಡ್ರಾಗೊಳಿಸಿದೆ. ಜಪಾನ್ ತಂಡ ನಾಕೌಟ್ ಹಂತದಲ್ಲಿ ಪಂದ್ಯಾವಳಿಯ ಫೇವರಿಟ್ ಬ್ರೆಝಿಲ್ ತಂಡವನ್ನು ಎದುರಿಸಲಿದೆ.

ಕಾನ್ಸಾಸ್ ಸಿಟಿ ಸ್ಟೇಡಿಯಂನ ಮಳೆಯ ವಾತಾವರಣದ ನಡುವೆ ನೆದರ್‌ಲ್ಯಾಂಡ್ಸ್ ತಂಡವು ಪರಿಪೂರ್ಣ ಆರಂಭ ಪಡೆಯಿತು. ಆಟ ಆರಂಭವಾದ ಮೂರೇ ನಿಮಿಷದಲ್ಲಿ ಮುನ್ನಡೆ ಪಡೆಯಿತು. ಟುನೀಶಿಯ ನಾಯಕ ಎಲ್ಲಿಸ್ ಸಿಖಿರಿ ಆಕಸ್ಮಿಕವಾಗಿ ಡೆಂಝಿಲ್ ನೀಡಿದ್ದ ಚೆಂಡನ್ನು ತನ್ನದೇ ತಂಡದ ನೆಟ್‌ಗೆ ತಲುಪಿಸಿದರು.

ಐದು ನಿಮಿಷದ ನಂತರ ಬ್ರಿಯಾನ್ ಬ್ರೋಬಿ ಡಚ್ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಬ್ರೋಬಿ ಪಂದ್ಯಾವಳಿಯಲ್ಲಿ ಮೂರನೇ ಗೋಲು ಗಳಿಸಿದರು.

ನೆದರ್‌ಲ್ಯಾಂಡ್ಸ್ ತಂಡವು ಇದೇ ಮೊದಲ ಬಾರಿ ವಿಶ್ವಕಪ್ ಪಂದ್ಯದ ಮೊದಲ ಏಳು ನಿಮಿಷದಲ್ಲಿ ಎರಡು ಗೋಲು ಗಳಿಸಿ ಇತಿಹಾಸ ನಿರ್ಮಿಸಿದೆ.

ಮೊದಲೆರಡು ಪಂದ್ಯಗಳಲ್ಲಿ ಸೋತು ಈಗಾಗಲೇ ಪಂದ್ಯಾವಳಿಯಿಂದ ನಿರ್ಗಮಿಸಿರುವ ಟುನೀಶಿಯ ತಂಡವು ಟೂರ್ನಿಯ ಮಧ್ಯೆಯೇ ತನ್ನ ಕೋಚ್ ಅನ್ನು ಬದಲಾಯಿಸಿತ್ತು. ಆದರೆ ಪಂದ್ಯದಲ್ಲಿ ಪರದಾಟ ನಡೆಸಿತು.

54ನೇ ನಿಮಿಷದಲ್ಲಿ ಹಝೆಮ್ ಮಸ್ಟೌರಿ ಹೆಡರ್‌ನ ಮೂಲಕ ಗೋಲು ಗಳಿಸಿ ಆಫ್ರಿಕಾ ತಂಡದ ಹಿನ್ನಡೆಯನ್ನು ತಗ್ಗಿಸಿದರು. ಆದರೆ ಡಚ್ ತಂಡವು ತಕ್ಷಣವೇ ತಿರುಗೇಟು ನೀಡಿದ್ದು, ಡಿಫೆಂಡರ್ ಜಾನ್ ಪೌಲ್ ವಾನ್ 62ನೇ ನಿಮಿಷದಲ್ಲಿ ಗೋಲು ಗಳಿಸಿ ನೆದರ್‌ಲ್ಯಾಂಡ್ಸ್‌ಗೆ 3-1 ಮುನ್ನಡೆ ಒದಗಿಸಿಕೊಟ್ಟರು. ಜಾನ್ ಪೌಲ್ ತನ್ನ ಮೊದಲ ಅಂತರ್‌ರಾಷ್ಟ್ರೀಯ ಗೋಲು ಗಳಿಸಿದರು.

ಈ ಫಲಿತಾಂಶದಿಂದ ನೆದರ್‌ಲ್ಯಾಂಡ್ಸ್ ತಂಡವು ಗ್ರೂಪ್ ಹಂತದ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದೆ. ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ನಾಕೌಟ್ ಸುತ್ತಿಗೇರಿದೆ.

ಇದೀಗ ಸೋಮವಾರ ಮೊರಾಕ್ಕೊ ವಿರುದ್ಧ ನಡೆಯಲಿರುವ 32ನೇ ಸುತ್ತಿನ ಪಂದ್ಯದತ್ತ ತನ್ನ ಗಮನವನ್ನು ಹರಿಸಲಿದೆ. ಟುನೀಶಿಯ ತಂಡವು ಒಂದೂ ಅಂಕವನ್ನು ಗಳಿಸದೆ ಪಂದ್ಯಾವಳಿಯಿಂದ ಹೊರ ನಡೆದಿದೆ.

ಜಪಾನ್-ಸ್ವೀಡನ್ ಪಂದ್ಯ ಡ್ರಾ, ನಾಕೌಟ್‌ಗೆ ಪ್ರವೇಶ

ಜಪಾನ್ ಹಾಗೂ ಸ್ವೀಡನ್ ತಂಡಗಳು ಶುಕ್ರವಾರ ಬೆಳಗ್ಗೆ ನಡೆದ ವಿಶ್ವಕಪ್‌ನ 'ಎಫ್' ಗುಂಪಿನ ಪಂದ್ಯದಲ್ಲಿ 1-1ರಿಂದ ಡ್ರಾ ಸಾಧಿಸಿವೆೆ. ಮಾತ್ರವಲ್ಲ ಟೂರ್ನಿಯಲ್ಲಿ ನಾಕೌಟ್ ಹಂತದಲ್ಲಿ ಸ್ಥಾನ ಪಡೆದಿವೆ.

ಈ ಫಲಿತಾಂಶದಿಂದಾಗಿ ಜಪಾನ್ ತಂಡವು 'ಎಫ್' ಗುಂಪಿನಲ್ಲಿ ನೆದರ್‌ಲ್ಯಾಂಡ್ಸ್ ನಂತರ ಎರಡನೇ ಸ್ಥಾನ ಪಡೆದಿದೆ. ಮೂರನೇ ಸ್ಥಾನ ಪಡೆದಿರುವ ಸ್ವೀಡನ್ ಕೂಡ ಮುಂದಿನ ಸುತ್ತಿಗೇರಿದೆ.

ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು. ಜಪಾನ್ ತಂಡವು 56ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿದ್ದು, ಡೈಝೆನ್ ಮಾಯೆಡಾ ಗೋಲ್‌ಕೀಪರ್ ಜೇಕಬ್ ವೈಡೆಲ್‌ರನ್ನು ವಂಚಿಸಿ ಮೊದಲ ಗೋಲು ಗಳಿಸಿದರು.

ಜಪಾನ್ ತಂಡವು ಪಂದ್ಯಾವಳಿಯಲ್ಲಿ ಗಳಿಸಿದ ಏಳನೇ ಗೋಲು ಇದಾಗಿದೆ. ಒಂದೇ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಗೋಲು ಗಳಿಸಿದೆ. 2018ರ ವಿಶ್ವಕಪ್‌ನಲ್ಲಿನ ಆರು ಗೋಲುಗಳ ದಾಖಲೆಯನ್ನು ಮುರಿದಿದೆ.

ಜಪಾನ್ ಮುನ್ನಡೆ ಪಡೆದ ಆರು ನಿಮಿಷಗಳ ನಂತರ ಸ್ವೀಡನ್ ತಿರುಗೇಟು ನೀಡಿತು. ಅಂಥೋನಿ ಇಲಾಂಗಾ 62ನೇ ನಿಮಿಷದಲ್ಲಿ ಪೆನಾಲ್ಟಿ ಏರಿಯಾದ ಹೊರಗಿನಿಂದ ಜಪಾನ್ ಗೋಲ್‌ಕೀಪರ್ ಝಿಯೊನ್ ಸುಝುಕಿ ಅವರ ಕಣ್ತಪ್ಪಿಸಿ ಎಡಗಾಲಿನಿಂದ ಚೆಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸಿದರು. ಇದು ಟೂರ್ನಿಯಲ್ಲಿ ಎಲಾಂಗಾ ಗಳಿಸಿದ 2ನೇ ಗೋಲಾಗಿದೆ.

ಎರಡೂ ತಂಡಗಳಿಗೆ ಗೆಲ್ಲುವ ಅವಕಾಶವಿದ್ದವು. ಅಲೆಕ್ಸಾಂಡರ್ ಇಸಾಕ್ ಸ್ವೀಡನ್ ಪರ ಗೋಲು ಗಳಿಸುವ ಸನಿಹ ತಲುಪಿದ್ದರು. ಆದರೆ, ಸುಝುಕಿ ಅವರು ಗೋಲನ್ನು ತಡೆದರು. ಜಪಾನಿಗೆ ಹೋಲಿಸಿದರೆ ಸ್ವೀಡನ್ ತಂಡ ಎಂಟು ಕಾರ್ನರ್ ಕಿಕ್ಸ್ ಪಡೆದಿತ್ತು. ಆದರೆ ಜಪಾನಿನ ರಕ್ಷಣಾಕೋಟೆ ಭದ್ರವಾಗಿತ್ತು.

ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಜಪಾನ್ ತಂಡವು ಸತತ ಮೂರನೇ ಆವೃತ್ತಿಯ ವಿಶ್ವಕಪ್‌ನಲ್ಲಿ ನಾಕೌಟ್ ಹಂತಕ್ಕೇರಿದೆ. ಹಿಂದಿನ ಏಳು ಟೂರ್ನಿಗಳಲ್ಲಿ ಐದನೇ ಬಾರಿ ಈ ಸಾಧನೆ ಮಾಡಿದೆ. 2002ರಲ್ಲಿ ತಾಯ್ನಾಡಿನಲ್ಲಿ ಮೊದಲ ಬಾರಿ ಅಂತಿಮ 16ರ ಸುತ್ತು ತಲುಪಿತ್ತು.

ವಿಶ್ವಕಪ್ ದಾಖಲೆಯನ್ನು ಉತ್ತಮಪಡಿಸಿಕೊಂಡಿರುವ ಸ್ವೀಡನ್ ತಂಡವು ಸತತ ನಾಲ್ಕನೇಬಾರಿ ಗ್ರೂಪ್ ಹಂತವನ್ನು ದಾಟಿದೆ.

ಪರಾಗ್ವೆ ವಿರುದ್ಧ ಗೋಲುರಹಿತ ಡ್ರಾ, ಆಸ್ಟ್ರೇಲಿಯ ಮುಂದಿನ ಸುತ್ತಿಗೆ

ಸಾಂಟಾ ಕ್ಲಾರಾದ ಲೆವಿಸ್ ಸ್ಟೇಡಿಯಂನಲ್ಲಿ 'ಡಿ' ಗುಂಪಿನ ತನ್ನ ಅಂತಿಮ ಪಂದ್ಯದಲ್ಲಿ ಪರಾಗ್ವೆ ತಂಡದ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿರುವ ಆಸ್ಟ್ರೇಲಿಯ ತಂಡವು 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ-32ರ ಸುತ್ತಿಗೆ ಲಗ್ಗೆ ಇಟ್ಟಿದೆ.

ಪಂದ್ಯದಲ್ಲಿ ಗೋಲುಗಳ ಕೊರತೆ ಎದುರಾಗಿದ್ದು, ಉಭಯ ತಂಡಗಳು ಶಿಸ್ತುಬದ್ಧ ರಕ್ಷಣಾತ್ಮಕ ಆಟವಾಡಿದವು.

ಸಾಕಷ್ಟು ಭರವಸೆಯ ಅವಕಾಶಗಳನ್ನು ಸೃಷ್ಟಿಸಿದ್ದರೂ ಉಭಯ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಗೋಲ್‌ಕೀಪರ್‌ಗಳಾದ ಆಸ್ಟ್ರೇಲಿಯದ ಪ್ಯಾಟ್ರಿಕ್ ಬೀಚ್ ಹಾಗೂ ಪರಾಗ್ವೆಯ ಒರ್ಲ್ಯಾಂಡೊ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ನಿರ್ಣಾಯಕ ಗೋಲುಗಳನ್ನು ತಡೆದು ಪಂದ್ಯವು ಗೋಲುರಹಿತವಾಗಿ ಕೊನೆಗೊಳ್ಳುವಲ್ಲಿ ನೆರವಾದರು.

ಪಂದ್ಯ ಡ್ರಾಗೊಂಡ ಕಾರಣ ಆಸ್ಟ್ರೇಲಿಯ ತಂಡವು 'ಡಿ' ಗುಂಪಿನಲ್ಲಿ ನಾಲ್ಕು ಅಂಕ ಗಳಿಸಿ ಎರಡನೇ ಸ್ಥಾನ ಪಡೆದಿದೆ. ಅಮೆರಿಕವು ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯವು ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಬಾರಿ ನಾಕೌಟ್ ಹಂತಕ್ಕೇರಿದೆ. 2006 ಹಾಗೂ 2022ರಲ್ಲಿ ಅಂತಿಮ-16ರ ಸುತ್ತನ್ನು ತಲುಪಿತ್ತು.

ಇದೇ ವೇಳೆ ಪರಾಗ್ವೆ ತಂಡವು ನಾಲ್ಕಂಕವನ್ನು ಗಳಿಸಿ ಗ್ರೂಪ್ ಹಂತದಲ್ಲಿ ಮೂರನೇ ಸ್ಥಾನ ಪಡೆದಿದೆ. ಟೂರ್ನಿಯ ಶ್ರೇಷ್ಠ ಮೂರನೇ ಸ್ಥಾನ ಪಡೆದ ತಂಡಗಳ ಪೈಕಿ ಒಂದಾಗಲು ಇತರ ತಂಡಗಳ ಫಲಿತಾಂಶವನ್ನು ಕಾಯಬೇಕಾಗಿದೆ.

ಆಸ್ಟ್ರೇಲಿಯ ತಂಡವು ಜುಲೈ 3ರಂದು 32ರ ಸುತ್ತಿನ ಪಂದ್ಯವನ್ನು ಆಡಲಿದೆ. ಉಳಿದಿರುವ ಗ್ರೂಪ್ ಹಂತದ ಪಂದ್ಯಗಳು ಸಂಪೂರ್ಣಗೊಂಡ ನಂತರ ಎದುರಾಳಿ ದೃಢಪಡಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries