ರಾಂಚಿ: ಆರೆಸ್ಸೆಸ್ ಕಚೇರಿಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಬುಧವಾರ ಮುಂಜಾನೆ ರಾಂಚಿಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಇಬ್ಬರು ಆರೆಸ್ಸೆಸ್ ಕಚೇರಿ ಆವರಣದ ಮೇಲೆ ಪೆಟ್ರೋಲ್ ಬಾಂಬ್ ತುಂಬಿದ್ದ ಸಾಸ್ ಬಾಟಲಿಗಳನ್ನು ಎಸೆಯಲು ಪ್ರಯತ್ನಿಸಿದ್ದಾರೆ.
ಆದರೆ, ಆ ಪೆಟ್ರೋಲ್ ಬಾಂಬ್ ಗಳು ಕಚೇರಿಯ ತಡೆಗೋಡೆಗೆ ತಾಕಿದ್ದು, ಈ ಘಟನೆಯಲ್ಲಿ ಆರೆಸ್ಸೆಸ್ ಕಚೇರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ರಾಂಚಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಂಚಿ ನಗರ ಪೊಲೀಸ್ ವರಿಷ್ಠಾಧಿಕಾರಿ ಪಾರಸ್ ರಾಣಾ, "ಈ ಘಟನೆಯ ಸಂಬಂಧ ತನಿಖೆ ಆರಂಭಿಸಲಾಗಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
"ಈ ಘಟನೆಯಲ್ಲಿ ಇಬ್ಬರು ಯುವಕರು ಭಾಗಿಯಾಗಿದ್ದಾರೆ ಎಂಬ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಈ ಘಟನೆಯ ಕುರಿತು ತನಿಖೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯ ಸೇರಿದಂತೆ ಹಲವು ತಂಡಗಳನ್ನು ನಿಯೋಜಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಆ ಯುವಕರು ಆರೆಸ್ಸೆಸ್ ಕಚೇರಿಯ ಮೇಲೆ ಬಾಂಬ್ ಎಸೆಯುಲು ಯತ್ನಿಸುತ್ತಿರುವ ಸಿಸಿಟಿವಿ ದೃಶ್ಯಾಸವಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಮೊದಲ ಬಾಟಲಿಯನ್ನು ಎಸೆದಾಗ, ಉರಿಯುತ್ತಿದ್ದ ಫ್ಯೂಸ್ ನೆಲಕ್ಕೆ ಬಿದ್ದು, ಬಾಂಬ್ ನಿಷ್ಕ್ರಿಯಗೊಂಡಿತು. ಬಳಿಕ, ಎರಡನೆ ಪೆಟ್ರೋಲ್ ಬಾಂಬ್ ಅನ್ನು ಆರೆಸ್ಸೆಸ್ ಕಚೇರಿಯತ್ತ ತೂರಲಾಗಿದ್ದು, ಅದು ಕಚೇರಿಯ ಕಟ್ಟಡವನ್ನು ತಲುಪುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಪೆಟ್ರೋಲ್ ಬಾಂಬ್ ಗಳ ಸುಧಾರಿತ ಪಾತ್ರೆಯನ್ನಾಗಿ ಚಿಲ್ಲಿ ಸಾಸ್ ಬಾಟಲಿಗಳನ್ನು ಬಳಸಲಾಗಿದೆ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

