HEALTH TIPS

ಹಿಡಿತ ಸಾಧಿಸಲು ಮುಂದಾದ TMC ಬಂಡಾಯ ಬಣ: ಅರೂಪ್ ರಾಯ್ ನೂತನ ಅಧ್ಯಕ್ಷರಾಗಿ ನೇಮಕ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ವಿರೋಧ ಪಕ್ಷದ ನಾಯಕ ರುತಬ್ರತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಬಂಡಾಯ ಬಣವು ಸೋಮವಾರ ವಿಶೇಷ ಸಭೆ ನಡೆಸಿದ್ದು, ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ತೃಣಮೂಲ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ಹೆಸರಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋತ ನಂತರ ಪಕ್ಷದ ಶಾಸಕಾಂಗ ಮತ್ತು ಸಂಸದೀಯ ವಿಭಾಗಗಳಲ್ಲಿ ಬಂಡಾಯ ಸೃಷ್ಟಿಯಾಗಿತ್ತು. ಇದೀಗ ಟಿಎಂಸಿಯ ಬಂಡಾಯ ಬಣವು ಅರೂಪ್ ರಾಯ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಮಮತಾ ಬ್ಯಾನರ್ಜಿ ಅವರ ನಾಯಕತ್ವಕ್ಕೆ ಎದುರಾದ ನೇರಾನೇರ ಸವಾಲಾಗಿದೆ.

ಕೋಲ್ಕತ್ತದ ನ್ಯೂ ಟೌನ್‌ನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಈ ವಿಶೇಷ ಸಭೆಯಲ್ಲಿ ವಿವಿಧ ಜಿಲ್ಲೆಗಳ ಬಂಡಾಯ ಶಾಸಕರು, ಕೌನ್ಸಿಲರ್‌ಗಳು ಮತ್ತು ಮಾಜಿ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸಭೆಯ ವೇದಿಕೆಯ ಮೇಲೆ ಟಿಎಂಸಿ ಪಕ್ಷದ ಚಿಹ್ನೆಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗಿದ್ದರೂ, ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳು ವೇದಿಕೆಯನ್ನು ಅಲಂಕರಿಸಿದ್ದವು. ಆದರೆ, ದೀರ್ಘಕಾಲದಿಂದ ಪಕ್ಷದ ಪ್ರಮುಖ ಮುಖಗಳಾಗಿದ್ದ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಚಿತ್ರಗಳು ಅಲ್ಲಿ ಕಾಣಿಸಲಿಲ್ಲ.

ಪಕ್ಷದೊಳಗಿನ ಸಾಂವಿಧಾನಿಕ ಬಿಕ್ಕಟ್ಟನ್ನು ಬಗೆಹರಿಸಲು ಸಭೆ ಕರೆಯಲಾಗಿದೆ ಎಂದು ಬಂಡಾಯ ಬಣ ಪ್ರತಿಪಾದಿಸಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ರುತಬ್ರತಾ ಬ್ಯಾನರ್ಜಿ, 'ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸುವುದು ಕಡ್ಡಾಯ ಮತ್ತು ಕೊನೆಯ ಬಾರಿಗೆ ಇಂತಹ ಸಮಿತಿಯನ್ನು 2022ರ ಫೆಬ್ರುವರಿಯಲ್ಲಿ ರಚಿಸಲಾಗಿತ್ತು' ಎಂದು ಹೇಳಿದ್ದಾರೆ.

'ಅಧಿಕಾರಾವಧಿ ಮುಗಿದ ನಂತರ ಸಾಂಸ್ಥಿಕ ರಚನೆಯನ್ನು ನವೀಕರಿಸಲಾಗಿಲ್ಲ. ಆದ್ದರಿಂದ, ಪಕ್ಷದ ರಾಷ್ಟ್ರೀಯ ನಾಯಕತ್ವವನ್ನು ಮರು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಅನಿವಾರ್ಯವಾಯಿತು' ಎಂದಿದ್ದಾರೆ.

ಮೊದಲ ಹಂತದಲ್ಲಿ ಅರೂಪ್ ರಾಯ್, ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ಬಿಪ್ಲಬ್ ಮಿತ್ರ, ಅಖ್ರುಜ್ಜಮಾನ್ ಅನ್ಸಾರಿ, ಸಬೀನಾ ಯಾಸ್ಮಿನ್, ಸಂದೀಪನ್ ಸಹಾ, ರಥಿನ್ ಘೋಷ್, ಜಾವೇದ್ ಖಾನ್ ಮತ್ತು ರಿತಬ್ರತಾ ಬ್ಯಾನರ್ಜಿ ಅವರನ್ನೊಳಗೊಂಡ ನೂತನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ನಂತರ ಈ ಸಮಿತಿಯನ್ನು 30 ಸದಸ್ಯರಿಗೆ ವಿಸ್ತರಿಸಲಾಯಿತು. ಇದರ ಬೆನ್ನಲ್ಲೇ, ಹೌರಾದ ಪ್ರಭಾವಿ ನಾಯಕ ಅರೂಪ್ ರಾಯ್ ಅವರನ್ನು ಧ್ವನಿ ಮತದ ಮೂಲಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ರಥಿನ್ ಘೋಷ್ ಮತ್ತು ಸಬೀನಾ ಯಾಸ್ಮಿನ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದರೆ, ರುತಬ್ರತಾ ಬ್ಯಾನರ್ಜಿ, ಜಾವೇದ್ ಖಾನ್ ಮತ್ತು ಸಂದೀಪನ್ ಸಹಾ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಯಿತು.

ಅಖ್ರುಜ್ಜಮಾನ್ ಅನ್ಸಾರಿ ಅವರನ್ನು ಖಜಾಂಚಿ ಎಂದು ಘೋಷಿಸಲಾಯಿತು. ಪಕ್ಷದ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲು ಆಡಿಟರ್ ಒಬ್ಬರನ್ನು ನೇಮಿಸಲು ಸಹ ಈ ಬಣ ನಿರ್ಧರಿಸಿದೆ.

ಬಂಡಾಯ ಬಣದ ಪ್ರಮುಖ ನಾಯಕರಾದ ಹಕೀಮ್, ಬಿಸ್ವಾಸ್ ಮತ್ತು ಬಿರ್ಭೂಮ್ ಸೇರಿದಂತೆ ವಿವಿಧ ಜಿಲ್ಲೆಗಳ 60 ಶಾಸಕರು ಸೇರಿದಂತೆ ಕೋಲ್ಕತ್ತ ಮಹಾನಗರ ಪಾಲಿಕೆಯ ಹಲವು ಕೌನ್ಸಿಲರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ನಂತರ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಟಿಎಂಸಿಯಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ.

ಕೆಲವೇ ದಿನಗಳ ಹಿಂದೆ ಟಿಎಂಸಿ ಪಕ್ಷದ 80 ಶಾಸಕರ ಪೈಕಿ 58 ಶಾಸಕರು ಮಮತಾ ಬ್ಯಾನರ್ಜಿ ನೇತೃತ್ವದ ನಾಯಕತ್ವದ ನಿರ್ಧಾರವನ್ನು ತಿರಸ್ಕರಿಸಿ, ರುತಬ್ರತಾ ಬ್ಯಾನರ್ಜಿ ಅವರ ವಿರೋಧ ಪಕ್ಷದ ನಾಯಕನ ಸ್ಥಾನದ ಹಕ್ಕನ್ನು ಬೆಂಬಲಿಸಿದ್ದರು. ಅಂದಿನಿಂದ ವಿಧಾನಸಭೆಯಲ್ಲಿ ತಮ್ಮ ಬಲ ಸುಮಾರು 65 ಶಾಸಕರಿಗೆ ಏರಿಕೆಯಾಗಿದೆ ಎಂದು ಬಂಡಾಯ ಬಣ ಪ್ರತಿಪಾದಿಸುತ್ತಿದೆ.

ಈ ರಾಜಕೀಯ ಬಿಕ್ಕಟ್ಟು ಕೇವಲ ವಿಧಾನಸಭೆಗೆ ಮಾತ್ರ ಸೀಮಿತವಾಗಿಲ್ಲ. ಲೋಕಸಭೆಯಲ್ಲಿಯೂ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, 28 ಸಂಸದರಲ್ಲಿ 20 ಸಂಸದರು ಟಿಎಂಸಿ ಸಂಸದೀಯ ಪಕ್ಷದಿಂದ ಹೊರಬಂದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಜೊತೆ ವಿಲೀನಗೊಂಡಿದ್ದಾರೆ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ಘೋಷಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries