ಭುವನೇಶ್ವರ: ಮಾರ್ಚ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಮತ್ತು ಅಡ್ಡ ಮತದಾನದ ಆರೋಪದ ಮೇಲೆ ತಮ್ಮ 11 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಬಿಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಲ್ಲಿಸಿದ್ದ ಅರ್ಜಿಗಳನ್ನು ಒಡಿಶಾ ವಿಧಾನಸಭೆ ಸ್ಪೀಕರ್ ಸುರ್ಮಾ ಪಾಧಿ ವಜಾಗೊಳಿಸಿದ್ದಾರೆ.
ಬಿಜೆಡಿ ನಾಯಕಿ ಹಾಗೂ ಮುಖ್ಯ ಸಚೇತಕಿ ಪ್ರಮೀಳಾ ಮಲ್ಲಿಕ್ ಅವರು ತಮ್ಮ ಪಕ್ಷದ ಎಂಟು ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ರಾಮಚಂದ್ರ ಕದಮ್ ಅವರು ತಮ್ಮ ಪಕ್ಷದ ಮೂವರು ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದರು.
ಬಿಜೆಡಿ ಸಲ್ಲಿಸಿರುವ ಅರ್ಜಿಗಳನ್ನು ಉಲ್ಲೇಖಿಸಿ ಒಡಿಶಾ ವಿಧಾನಸಭೆಯ ಕಾರ್ಯದರ್ಶಿ ಜೂನ್ 19ರಂದು ಹೊರಡಿಸಿದ ಅಧಿಸೂಚನೆಯಲ್ಲಿ, 'ಅರ್ಜಿಯು ಅಸ್ಪಷ್ಟ, ಆಧಾರರಹಿತವಾಗಿದೆ ಮತ್ತು ವಿಚಾರಣೆಗೆ ಅಗತ್ಯವಿರುವ ಶಾಸನಬದ್ಧ ಅವಶ್ಯಕತೆಗಳನ್ನು ಪೂರೈಸುವುದಿಲ್ಲ' ಎಂದು ಹೇಳಿದ್ದಾರೆ.
'ಈ ಅರ್ಜಿಗಳು ಒಡಿಶಾ ವಿಧಾನಸಭೆಯ ಸದಸ್ಯರ (ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ) ನಿಯಮಗಳು, 1987ರ ಅಡಿಯಲ್ಲಿ ಕಡ್ಡಾಯ ಅವಶ್ಯಕತೆಗಳನ್ನು ಪಾಲಿಸಲು ವಿಫಲವಾಗಿವೆ' ಎಂದು ಉಲ್ಲೇಖಿಸಲಾಗಿದೆ.
ಒಡಿಶಾದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಾರ್ಚ್ 16ರಂದು ನಡೆದಿದ್ದ ಚುನಾವಣೆ ವೇಳೆ ಅಡ್ಡ ಮತದಾನ ನಡೆದಿತ್ತು. ಬಿಜೆಡಿ ಮತ್ತು ಕಾಂಗ್ರೆಸ್ ಕಣಕ್ಕಿಳಿಸಿದ್ದ ಅಭ್ಯರ್ಥಿ ದತ್ತೇಶ್ವರ್ ಹೋಟಾ ಅವರು ಗೆಲುವಿಗೆ ಅಗತ್ಯವಿರುವ ಮತಗಳನ್ನು ಹೊಂದಿದ್ದರೂ, ಸೋತಿದ್ದರು.

