ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಗೆ ಮತ್ತೊಂದು ರಾಜಕೀಯ ಹಿನ್ನಡೆಯಾಗಿದ್ದು, ಪಕ್ಷದ ಆರು ಸಂಸದರು ಸೋಮವಾರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಔಪಚಾರಿಕವಾಗಿ ಸೇರ್ಪಡೆಗೊಂಡರು.
ದಕ್ಷಿಣ ಮುಂಬೈನ ವೈ.ಬಿ. ಚವಾಣ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಜಯ್ ದಿನಾ ಪಾಟೀಲ್, ಸಂಜಯ್ ಜಾಧವ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಶ್ತಿಕರ್, ಭೌಸಾಹೇಬ್ ವಕ್ಚುವಾರೆ ಹಾಗೂ ಓಂರಾಜೆ ನಿಂಬಾಳ್ಕರ್ ಅವರು ಶಿಂಧೆ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯನ್ನು ಘೋಷಿಸಿದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಎಲ್ಲ ಸಂಸದರೂ ಶಿಂಧೆ ಅವರೊಂದಿಗೆ ವೇದಿಕೆ ಹಂಚಿಕೊಂಡರು.
ಶಿವಸೇನೆ(UBT)ಯಿಂದ ಆಯ್ಕೆಯಾಗಿದ್ದ ಈ ಸಂಸದರ ನಿರ್ಧಾರವು ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ವಾರಗಳಿಂದ ಈ ಸಂಸದರು ಶಿಂಧೆ ಬಣದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಂಧೆ, 2022ರಲ್ಲಿ ನಡೆದ ಬಂಡಾಯದ ಬಳಿಕ ತಮ್ಮ ಬಣವು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತ ಮತ್ತು ಕಾರ್ಯಸೂಚಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಅದರಿಂದ ಪಕ್ಷವು ಗಮನಾರ್ಹವಾಗಿ ವಿಸ್ತರಿಸಿದೆ ಎಂದು ಹೇಳಿದರು.
'ಶಿವಸೇನೆ(UBT) ಮೂಲ ತತ್ವಗಳಿಂದ ದೂರ ಸರಿದಿರುವ ಕಾರಣ ಜನರಿಂದ ತಿರಸ್ಕೃತವಾಗಿದೆ. ಆರು ಸಂಸದರ ಸೇರ್ಪಡೆಯಿಂದ ಪಕ್ಷ ಇನ್ನಷ್ಟು ಬಲಗೊಳ್ಳಲಿದ್ದು, ಅದರ ಪ್ರಭಾವ ವಿಸ್ತರಿಸಲಿದೆ' ಎಂದು ಹೇಳಿದರು.
2022ರಲ್ಲಿ ತಮ್ಮೊಂದಿಗೆ 40 ಶಾಸಕರು ಬಂದಿದ್ದನ್ನು ಉಲ್ಲೇಖಿಸಿದ ಅವರು, ಸಂಸದರ ಈ ಸೇರ್ಪಡೆಯನ್ನು ಆ ರಾಜಕೀಯ ಚಳವಳಿಯ 'ಎರಡನೇ ಹಂತ' ಎಂದು ಬಣ್ಣಿಸಿದರು. 'ಇದು ನಮ್ಮ ಪಾಲಿಗೆ ಸಿಕ್ಸರ್ ಇದ್ದಂತೆ' ಎಂದೂ ಹೇಳಿದರು.
'ಬಾಳಾಸಾಹೇಬ್ ಠಾಕ್ರೆ ಅವರ ವಿಚಾರಧಾರೆಯನ್ನು ಉಳಿಸುವ ಹೋರಾಟದ ಭಾಗವಾಗಿಯೇ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಈ ಕಾರಣಕ್ಕಾಗಿಯೇ ಈ ಆರು ಸಂಸದರು ನಿಜವಾದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ' ಎಂದು ಶಿಂಧೆ ಪ್ರತಿಪಾದಿಸಿದರು.
ಪಕ್ಷಾಂತರದ ಕುರಿತ ಆರೋಪ-ಪ್ರತ್ಯಾರೋಪಗಳನ್ನು ತಳ್ಳಿಹಾಕಿದ ಅವರು, ತಮ್ಮೊಂದಿಗೆ ಸೇರಿರುವ ನಾಯಕರು ಪಕ್ಷದ ತತ್ವಗಳಿಗೆ ಬದ್ಧರಾಗಿರುವ ತಳಮಟ್ಟದಿಂದ ಬೆಳೆದು ಬಂದ ಕಾರ್ಯಕರ್ತರು ಎಂದು ಹೇಳಿದರು.
'ಆಪರೇಷನ್ ಟೈಗರ್'
2024ರ ವಿಧಾನಸಭಾ ಚುನಾವಣೆಯ ಬಳಿಕ ಶಿವಸೇನೆ (ಯುಬಿಟಿ)ಯ ಸಂಸದರನ್ನು ಮತ್ತು ನಾಯಕರನ್ನು ತಮ್ಮ ಬಣಕ್ಕೆ ಸೆಳೆಯಲು ಶಿಂಧೆ ನೇತೃತ್ವದ ಶಿವಸೇನೆ ಪ್ರಯತ್ನ ನಡೆಸುತ್ತಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಈ ಕಾರ್ಯತಂತ್ರವನ್ನು ರಾಜಕೀಯ ವಲಯದಲ್ಲಿ 'ಆಪರೇಷನ್ ಟೈಗರ್' ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಯತ್ನಗಳಿಗೆ ಮತ್ತಷ್ಟು ವೇಗ ಸಿಕ್ಕಿದೆ ಎನ್ನಲಾಗುತ್ತಿದೆ. ಇದರ ಪರಿಣಾಮವಾಗಿ ಶಿವಸೇನೆ (UBT) ಬಣದಲ್ಲಿ ಅಸಮಾಧಾನ ಮತ್ತು ಅನಿಶ್ಚಿತತೆ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.
ಗಮನಾರ್ಹ ಸಂಗತಿಯೆಂದರೆ, ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಅವಿಭಜಿತ ಶಿವಸೇನೆಯ ಪ್ರಮುಖ ಸಂಕೇತ ಹುಲಿಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಈ ರಾಜಕೀಯ ಕಾರ್ಯಾಚರಣೆಗೆ 'ಆಪರೇಷನ್ ಟೈಗರ್' ಎಂಬ ಹೆಸರು ಬಳಕೆಗೆ ಬಂದಿದೆ.
ಈ ಮಧ್ಯೆ, ಪಕ್ಷ ತೊರೆದ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಉದ್ಧವ್ ಠಾಕ್ರೆ, 'ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಜನರೇ ಇದಕ್ಕೆ ಉತ್ತರ ನೀಡಲಿದ್ದಾರೆ' ಎಂದು ರವಿವಾರ ಹೇಳಿದ್ದರು.

