HEALTH TIPS

West Bengal | ಸುಹ್ರಾವರ್ಡಿ ಅವೆನ್ಯೂ ರಸ್ತೆಯ ಮರುನಾಮಕರಣ ವಿವಾದ: ಬಿಜೆಪಿಯ ನಿರ್ಧಾರಕ್ಕೆ ಇತಿಹಾಸಕಾರರಿಂದ ಟೀಕೆ

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಕೋಲ್ಕತ್ತಾದ ಪಾರ್ಕ್ ಸರ್ಕಸ್ ಪ್ರದೇಶದಲ್ಲಿರುವ ಸುಹ್ರಾವರ್ಡಿ ಅವೆನ್ಯೂ ರಸ್ತೆಯನ್ನು 'ಗೋಪಾಲ್ ಮುಖರ್ಜಿ ರಸ್ತೆ' ಎಂದು ಮರುನಾಮಕರಣ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ರಸ್ತೆ ಮೂಲತಃ ಯಾರ ಹೆಸರನ್ನು ಹೊತ್ತಿತ್ತು ಎಂಬ ವಿಚಾರದಲ್ಲಿ ಸರ್ಕಾರವೇ ಇತಿಹಾಸದ ಗೊಂದಲಕ್ಕೆ ಒಳಗಾಗಿದೆ ಎಂದು ಇತಿಹಾಸಕಾರರು ಮತ್ತು ಸಂಶೋಧಕರು ಟೀಕಿಸಿದ್ದಾರೆ.

ಜೂನ್ 21ರಂದು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಸುಹ್ರಾವರ್ಡಿ ಅವೆನ್ಯೂವನ್ನು 'ಗೋಪಾಲ್ ಮುಖರ್ಜಿ ರಸ್ತೆ' ಎಂದು ಮರುನಾಮಕರಣ ಮಾಡಿತು. ಈ ಕ್ರಮವನ್ನು ಸ್ವಾಗತಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, 'ರಾಜಕೀಯ ಲಾಭಕ್ಕಾಗಿ ಹತ್ಯಾಕಾಂಡವನ್ನು ಆಯೋಜಿಸಿದ ವ್ಯಕ್ತಿಯ ಹೆಸರನ್ನು ತೆಗೆದು, ಸಾವಿರಾರು ಜನರ ಜೀವ ಉಳಿಸಿದ ಗೋಪಾಲ್ ಮುಖರ್ಜಿಯ ಹೆಸರನ್ನು ನೀಡುವ ಮೂಲಕ ಐತಿಹಾಸಿಕ ನ್ಯಾಯವನ್ನು ಪುನಃಸ್ಥಾಪಿಸಲಾಗಿದೆ' ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದಾರೆ.

ಅಧಿಕಾರಿಯವರು ಉಲ್ಲೇಖಿಸಿದ್ದು ಬಹುಶಃ ಮುಸ್ಲಿಂ ಲೀಗ್ ನಾಯಕ ಹಾಗೂ ನಂತರ ಪಾಕಿಸ್ತಾನದ ಪ್ರಧಾನಿಯಾಗಿದ್ದ ಹುಸೇನ್ ಶಹೀದ್ ಸುಹ್ರಾವರ್ಡಿ ಅವರನ್ನು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 1946ರ ಕಲ್ಕತ್ತಾ ಗಲಭೆಗಳಲ್ಲಿ ಅವರ ಪಾತ್ರದ ಕಾರಣ ಅವರಿಗೆ 'ಬಂಗಾಳದ ಕಟುಕ' ಎಂಬ ಟೀಕೆಯೂ ಕೇಳಿಬಂದಿತ್ತು.

ಆದರೆ ಕೋಲ್ಕತ್ತಾದ ಈ ರಸ್ತೆಗೆ ಹುಸೇನ್ ಶಹೀದ್ ಸುಹ್ರಾವರ್ಡಿ ಅವರ ಹೆಸರನ್ನು ಇಡಲಾಗಿರಲಿಲ್ಲ. ಬದಲಿಗೆ ಅವರ ಚಿಕ್ಕಪ್ಪ, ಖ್ಯಾತ ಶಸ್ತ್ರಚಿಕಿತ್ಸಕ, ಶಿಕ್ಷಣತಜ್ಞ ಹಾಗೂ ಕಲ್ಕತ್ತಾ ವಿಶ್ವವಿದ್ಯಾಲಯದ ಮಾಜಿ ಕುಲಪತಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಸರ್ ಹಸನ್ ಸುಹ್ರಾವರ್ಡಿ ಅವರ ಹೆಸರನ್ನು ನೀಡಲಾಗಿತ್ತು.

ಕೋಲ್ಕತ್ತಾ ಇತಿಹಾಸಕಾರ ಪಿ.ಟಿ. ನಾಯರ್ ಅವರ ಎ ಹಿಸ್ಟರಿ ಆಫ್ ಕಲ್ಕತ್ತಾಸ್ ಸ್ಟ್ರೀಟ್ಸ್ ಕೃತಿಯ ಪ್ರಕಾರ, 1933ರ ಮಾರ್ಚ್ 8ರಂದು ನಡೆದ ಸಭೆಯಲ್ಲಿ ಪಾರ್ಕ್ ಸರ್ಕಸ್ ಪ್ರದೇಶದ ಹೊಸ ರಸ್ತೆಗೆ 'ಸುಹ್ರಾವರ್ಡಿ ಅವೆನ್ಯೂ' ಎಂದು ಹೆಸರಿಡಲು ನಿರ್ಧರಿಸಲಾಗಿತ್ತು. ಆ ರಸ್ತೆಯಲ್ಲೇ ಆಗಿನ ಕಲ್ಕತ್ತಾ ವಿಶ್ವವಿದ್ಯಾಲಯದ ಕುಲಪತಿ ಸರ್ ಹಸನ್ ಸುಹ್ರಾವರ್ಡಿ ಅವರ ನಿವಾಸವಿದ್ದ ಕಾರಣ ಈ ಹೆಸರು ನೀಡಲಾಗಿತ್ತು. ನಾಯರ್ ಅವರು ಹಸನ್ ಸುಹ್ರಾವರ್ಡಿ ಅವರನ್ನು ಶೈಕ್ಷಣಿಕ ಸಾಧನೆ, ಆಡಳಿತಾತ್ಮಕ ಅನುಭವ ಹಾಗೂ ಸಾರ್ವಜನಿಕ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿದ ಪ್ರಮುಖ ಮುಸ್ಲಿಂ ವೈದ್ಯ ಎಂದು ವರ್ಣಿಸಿದ್ದಾರೆ.

ರಸ್ತೆಗೆ ಹೆಸರಿಡಲಾಗಿರುವ ಗೋಪಾಲ್ ಮುಖರ್ಜಿ 'ಗೋಪಾಲ್ ಪಾಠಾ' ಎಂದೇ ಹೆಚ್ಚು ಪರಿಚಿತರಾಗಿದ್ದರು. 1946ರ 'ಡೈರೆಕ್ಟ್ ಆಯಕ್ಷನ್ ಡೇ' ನಂತರ ಕೋಲ್ಕತ್ತಾದಲ್ಲಿ ನಡೆದ ಕೋಮು ಗಲಭೆಗಳ ಸಂದರ್ಭದಲ್ಲಿ ಹಿಂದೂಗಳ ರಕ್ಷಣೆಗೆ ಅವರು ಪ್ರತಿರೋಧ ಸಂಘಟನೆಯೊಂದನ್ನು ರೂಪಿಸಿದ್ದರು.

ಸುರಂಜನ್ ದಾಸ್ ಮತ್ತು ಜಯಂತ ಕುಮಾರ್ ರೇ ರಚಿಸಿರುವ ದಿ ಗೂಂಡಾಸ್: ಟುವರ್ಡ್ಸ್ ಎ ರೀಕನ್‌ಸ್ಟ್ರಕ್ಷನ್ ಆಫ್ ದಿ ಕಲ್ಕತ್ತಾ ಅಂಡರ್‌ವರ್ಲ್ಡ್ ಕೃತಿಯ ಪ್ರಕಾರ, ಗೋಪಾಲ್ ಮುಖರ್ಜಿ ನೇತೃತ್ವದ 'ಭಾರತ್ ಜಾತಿಯಾ ಬಹಾನಿ' ಸಂಘಟನೆ ಗಲಭೆಗಳ ಸಮಯದಲ್ಲಿ ಹಿಂದೂಗಳ ರಕ್ಷಣೆಗೆ ಕಾರ್ಯನಿರ್ವಹಿಸಿತ್ತು. ಒಂದು ಹಂತದಲ್ಲಿ ಈ ಸಂಘಟನೆಯಲ್ಲಿ 400ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.

ಆದರೆ ಗಲಭೆಗಳ ನಂತರ ಪರಿಸ್ಥಿತಿ ಬದಲಾಗಿತ್ತು. 1950ರ ದಶಕದಲ್ಲಿ ಮುಖರ್ಜಿ ಹಾಗೂ ಅವರ ಸಹಚರರು ಸಶಸ್ತ್ರ ದರೋಡೆ, ಮನೆ ದರೋಡೆ, ಕಳ್ಳತನ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಪೊಲೀಸ್ ದಾಖಲೆಗಳನ್ನು ಉಲ್ಲೇಖಿಸಿ ಪುಸ್ತಕದಲ್ಲಿ ಹೇಳಲಾಗಿದೆ. ಮುಖರ್ಜಿಯವರ ಅನೇಕ ಅನುಯಾಯಿಗಳು ಮುಸ್ಲಿಮರ ವಿರುದ್ಧ ತೀವ್ರ ದ್ವೇಷವನ್ನು ಮುಂದುವರಿಸಿಕೊಂಡಿದ್ದು, 1950ರ ಕೋಲ್ಕತ್ತಾ ಕೋಮು ಘರ್ಷಣೆಗಳಲ್ಲಿಯೂ ಭಾಗವಹಿಸಿದ್ದರು ಎಂದು ಲೇಖಕರು ಉಲ್ಲೇಖಿಸಿದ್ದಾರೆ.

ಆದರೂ, ಗೋಪಾಲ್ ಮುಖರ್ಜಿಯ ಪಾತ್ರದ ಬಗ್ಗೆ ಭಿನ್ನ ಅಭಿಪ್ರಾಯಗಳೂ ಇವೆ. ಅವರ ಮೊಮ್ಮಗ ಶಾಂತನು ಮುಖರ್ಜಿ, '1946ರ ಗಲಭೆಗಳ ಸಂದರ್ಭದಲ್ಲಿ ನನ್ನ ಅಜ್ಜ ದಾಳಿಕೋರರ ವಿರುದ್ಧ ಶಸ್ತ್ರ ಹಿಡಿದದ್ದು ನಿಜ. ಆದರೆ ಅವರು ಕೇವಲ ಹಿಂದೂಗಳನ್ನು ಮಾತ್ರವಲ್ಲ, ಮುಸ್ಲಿಮರನ್ನೂ ಒಳಗೊಂಡಂತೆ ಎಲ್ಲ ಧರ್ಮದ ಜನರನ್ನು ರಕ್ಷಿಸಿದ್ದರು' ಎಂದು ಈ ಹಿಂದೆ the wire ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅವರ ಭದ್ರತಾ ತಂಡದಲ್ಲಿಯೂ ಮುಸ್ಲಿಂ ಸದಸ್ಯರಿದ್ದರು ಎಂದು ಅವರು ತಿಳಿಸಿದ್ದರು.

1997ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗೋಪಾಲ್ ಮುಖರ್ಜಿ, ಬಂಗಾಳ ವಿಭಜನೆಗೆ ತಾವು ವಿರೋಧಿಯಾಗಿದ್ದುದಾಗಿ ಹೇಳಿದ್ದರು. ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರದಿದ್ದರೂ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ. ಬಿಧನ್ ಚಂದ್ರ ರಾಯ್ ಅವರೊಂದಿಗೆ ಆಪ್ತ ಸಂಬಂಧ ಹೊಂದಿದ್ದರು ಎಂದೂ ಉಲ್ಲೇಖಿಸಿದ್ದರು.

ಇದೇ ವೇಳೆ, ರಸ್ತೆ ಮರುನಾಮಕರಣದ ವೇಳೆ ನಿಯಮಾನುಸಾರ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. The telegraph ವರದಿ ಪ್ರಕಾರ, ಸಾಮಾನ್ಯವಾಗಿ ಇಂತಹ ಪ್ರಸ್ತಾವನೆಗಳನ್ನು ಸಾರ್ವಜನಿಕ ಆಕ್ಷೇಪಣೆಗಳಿಗೆ ಅವಕಾಶ ನೀಡಿದ ಬಳಿಕ ಕೆಎಂಸಿ ಕೌನ್ಸಿಲರ್‌ಗಳ ಸಭೆಯಲ್ಲಿ ಅನುಮೋದಿಸಬೇಕು. ನಂತರ ಅಧಿಕೃತ ಅಧಿಸೂಚನೆ ಪ್ರಕಟಿಸಬೇಕು.

ಆದರೆ ಪ್ರಸ್ತುತ ಕೆಎಂಸಿ ಆಡಳಿತಾತ್ಮಕ ಅಸ್ಥಿರತೆಯನ್ನು ಎದುರಿಸುತ್ತಿದೆ. ಎಪ್ರಿಲ್ 30ರಿಂದ ಕೌನ್ಸಿಲರ್‌ ಗಳ ನಿಯಮಿತ ಸಭೆಗಳು ನಡೆದಿಲ್ಲ. ಜೊತೆಗೆ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಸ್ಪಷ್ಟತೆಯ ಕೊರತೆಯೂ ಇದೆ.

ಈ ಹಿನ್ನೆಲೆಯಲ್ಲಿ ಸುಹ್ರಾವರ್ಡಿ ಅವೆನ್ಯೂ ಮರುನಾಮಕರಣವು ಕೇವಲ ರಾಜಕೀಯ ಚರ್ಚೆಯ ವಿಷಯವಾಗಿಯೇ ಉಳಿದಿಲ್ಲ. ಇತಿಹಾಸದ ನಿಖರತೆ, ಸಾರ್ವಜನಿಕ ಸ್ಮೃತಿ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ಕುರಿತ ಪ್ರಶ್ನೆಗಳನ್ನೂ ಅದು ಎಬ್ಬಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries