ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 15 ವಿದ್ಯಾರ್ಥಿಗಳು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಮೃತರಲ್ಲಿ 12 ಪುರುಷರು ಮತ್ತು ಮೂವರು ಮಹಿಳೆಯರು ಸೇರಿದ್ದು, ಹೆಚ್ಚಿನವರು 20ರಿಂದ 24 ವರ್ಷ ವಯಸ್ಸಿನವರಾಗಿದ್ದಾರೆ.
ಪುರಾನಿಯಾ ಪ್ರದೇಶದ ಉಷಾ ಮೆಹ್ತಾ ಮಾರ್ಗದಲ್ಲಿರುವ ಕಟ್ಟಡದಲ್ಲಿ ಮಧ್ಯಾಹ್ನ ಸುಮಾರು 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿತು. ಕೆಲವೇ ನಿಮಿಷಗಳಲ್ಲಿ ದಟ್ಟ ಹೊಗೆ ಇಡೀ ಕಟ್ಟಡವನ್ನು ಆವರಿಸಿದ್ದು, ಒಳಗಿದ್ದವರು ಹೊರಬರಲು ಪರದಾಡಿದರು. ಹಲವರು ಮೇಲಿನ ಮಹಡಿಯಿಂದ ಜಿಗಿದು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದರು.
ಅಗ್ನಿಶಾಮಕ ದಳ, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಹಾಗೂ ನಾಗರಿಕ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಸಂಜೆ ವೇಳೆಯೂ ಕಾರ್ಯಾಚರಣೆ ಮುಂದುವರಿದಿತ್ತು.
ಅಧಿಕಾರಿಗಳ ಪ್ರಕಾರ, ಕಟ್ಟಡದ ನೆಲ ಮಹಡಿಯಲ್ಲಿ ಸಾಕುಪ್ರಾಣಿ ಅಂಗಡಿ ಹಾಗೂ ಪಶುವೈದ್ಯಕೀಯ ಚಿಕಿತ್ಸಾಲಯ ಕಾರ್ಯನಿರ್ವಹಿಸುತ್ತಿತ್ತು. ಮೇಲಿನ ಮಹಡಿಯಲ್ಲಿ ಗೇಮಿಂಗ್ ಮತ್ತು ಅನಿಮೇಷನ್ ಕ್ಷೇತ್ರಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್ ಅಭಿವೃದ್ಧಿ ತರಬೇತಿ ಕೇಂದ್ರವಿತ್ತು. ಆರಂಭದಲ್ಲಿ ಕೋಚಿಂಗ್ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಹರಡಿದ್ದರೂ, ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಕಟ್ಟಡದಲ್ಲಿ ಕೋಚಿಂಗ್ ಕೇಂದ್ರ ಅಥವಾ ಗ್ರಂಥಾಲಯ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಕಿಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಭಾವುಕರಾದರು.
'ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಇದು ಅನಿಮೇಷನ್ ತರಬೇತಿ ಕೇಂದ್ರವಾಗಿತ್ತು. ಬೆಂಕಿ ಹೊತ್ತಿಕೊಂಡಾಗ ಮಕ್ಕಳು ಹಿಂಭಾಗಕ್ಕೆ ಓಡಿದರು. ಆದರೆ ಅವರು ಬದುಕುಳಿಯಲಿಲ್ಲ' ಎಂದು ಹೇಳಿದರು.
'ನಾನು ಸ್ವತಃ 11-12 ಶವಗಳನ್ನು ನೋಡಿದ್ದೇನೆ' ಎಂದು ಹೇಳುವಾಗ ಅವರು ಭಾವುಕರಾದರು.
ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಟ್ರಾಮಾ ಸೆಂಟರ್ ವೈದ್ಯಕೀಯ ಅಧೀಕ್ಷಕಿ ಡಾ. ಅಮಿಯಾ ಅಗರ್ವಾಲ್ ಮಾತನಾಡಿ, '21ರಿಂದ 22 ಮಂದಿಯನ್ನು ಆಸ್ಪತ್ರೆಗೆ ತರಲಾಗಿದೆ. ಅವರಲ್ಲಿ ಐವರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡದಿಂದ ಜಿಗಿದ ಇಬ್ಬರಿಗೆ ಬೆನ್ನುಮೂಳೆಯ ಗಾಯಗಳಾಗಿವೆ. 15 ಮಂದಿಯನ್ನು ಮೃತಪಟ್ಟಿದ್ದಾರೆ' ಎಂದು ತಿಳಿಸಿದರು.
ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಕಟ್ಟಡವನ್ನು ಆವರಿಸಿತು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಹಗ್ಗಗಳ ನೆರವಿನಿಂದ ಸಿಕ್ಕಿಬಿದ್ದವರನ್ನು ಹೊರತೆಗೆದರು. ರಕ್ಷಣಾ ಸಿಬ್ಬಂದಿ ಪಕ್ಕದ ಕಟ್ಟಡದ ಮೇಲ್ಛಾವಣಿಯಿಂದ ಒಳನುಗ್ಗಿ ಕಾರ್ಯಾಚರಣೆ ನಡೆಸಿದರು.
ಒಳಗೆ ಸಿಲುಕಿದ್ದವರ ಬಳಿ ತಲುಪಲು ಬೆಂಕಿಯಿಂದ ಹಾನಿಗೊಳಗಾದ ಕಟ್ಟಡದ ಗೋಡೆಯಲ್ಲಿ ಎರಡು ದೊಡ್ಡ ರಂಧ್ರಗಳನ್ನು ಕೊರೆಯಲಾಯಿತು. ರಕ್ಷಣಾ ಕಾರ್ಯಾಚರಣೆಯ ವೇಳೆ 11 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಕೆಲವನ್ನು ಚೀಲಗಳಲ್ಲಿ ಹಾಗೂ ಇತರವನ್ನು ಕಂಬಳಿಗಳಲ್ಲಿ ಸುತ್ತಿ ಸಾಗಿಸಲಾಯಿತು.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಕಟ್ಟಡದ ಹೊರಗೆ ಜಮಾಯಿಸಿ ಮಾಹಿತಿ ನೀಡಲು ಅಧಿಕಾರಿಗಳನ್ನು ಆಗ್ರಹಿಸಿದರು.
ತನ್ನ ಸಹೋದರ ಒಳಗೆ ಸಿಲುಕಿಕೊಂಡಿದ್ದಾನೆ ಎಂದು ಹೇಳಿದ ಶಕೀಲ್, 'ಭಯ್ಯಾ, ಐದು-ಆರು ಜನರು ಸ್ನಾನಗೃಹದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವನು ಕರೆ ಮಾಡಿ ಹೇಳಿದ್ದ. ಅದರ ಬಳಿಕ ಯಾವುದೇ ಸಂಪರ್ಕ ಸಾಧ್ಯವಾಗಲಿಲ್ಲ' ಎಂದು ಹೇಳಿದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹೊಗೆ ವೇಗವಾಗಿ ಹರಡುತ್ತಿದ್ದಂತೆ ಏಳು-ಎಂಟು ವಿದ್ಯಾರ್ಥಿಗಳು ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡರು.
'ಸುಮಾರು 20ರಿಂದ 25 ವಿದ್ಯಾರ್ಥಿಗಳು ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ನಾಲ್ಕೈದು ವಿದ್ಯಾರ್ಥಿಗಳು ಸ್ವತಃ ಹೊರಬರುವಲ್ಲಿ ಯಶಸ್ವಿಯಾಗಿದ್ದರು' ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಕಟ್ಟಡದ ನೆಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಕುಪ್ರಾಣಿ ಅಂಗಡಿ ಹಾಗೂ ಚಿಕಿತ್ಸಾಲಯದಲ್ಲಿದ್ದ ಕೆಲವು ಪ್ರಾಣಿಗಳೂ ಬೆಂಕಿಗೆ ಬಲಿಯಾಗಿವೆ. ಸಂಜೆ 4.40ರ ಸುಮಾರಿಗೆ ಕಂಬಳಿಗಳಲ್ಲಿ ಸುತ್ತಿದ ಕನಿಷ್ಠ ಮೂರು ಪ್ರಾಣಿಗಳ ಮೃತದೇಹಗಳನ್ನು ಹೊರತೆಗೆಯಲಾಯಿತು.
ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಕಿರಣ್ ಶುಕ್ಲಾ, ಹಲವು ಪ್ರಾಣಿಗಳು ಒಳಗೆ ಸಿಲುಕಿರುವ ಆತಂಕ ವ್ಯಕ್ತಪಡಿಸಿದರು. ಕೇಂದ್ರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಚಾರು ಖರೆ, 'ಇದು ಕೇವಲ ಸಾಕುಪ್ರಾಣಿ ಉತ್ಪನ್ನಗಳ ಅಂಗಡಿಯಲ್ಲ. ಇಲ್ಲಿ ಪಶುವೈದ್ಯರೂ ಸೇವೆ ನೀಡುತ್ತಿದ್ದರು. ಕೆಲವು ಸಾಕುಪ್ರಾಣಿಗಳನ್ನು ಇಲ್ಲಿ ಇರಿಸಲಾಗುತ್ತಿತ್ತು' ಎಂದು ಹೇಳಿದರು.
ಮೋದಿ ಸಂತಾಪ; ಪರಿಹಾರ ಘೋಷಣೆ
ಅಗ್ನಿ ಅವಘಡದಲ್ಲಿ ಸಂಭವಿಸಿದ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
'ಲಕ್ನೋದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಜೀವಹಾನಿಯಾಗಿರುವುದು ದುಃಖಕರ. ಮೃತರ ಕುಟುಂಬಗಳಿಗೆ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ' ಎಂದು ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮ ಅಲಿಗಢ ಪ್ರವಾಸವನ್ನು ಮೊಟಕುಗೊಳಿಸಿ ಲಕ್ನೋಗೆ ಮರಳಿದರು.
'ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ಹೇಳಿದರು. ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಘಟನೆಯಲ್ಲಿ ಸಂಭವಿಸಿದ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್, ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ಹಾಗೂ ಲಕ್ನೋ ಪೊಲೀಸ್ ಆಯುಕ್ತ ಅಮರೇಂದ್ರ ಸೆಂಗರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

