ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಃಇಜ ಪ್ರವೇಶ ಪರೀಕ್ಷಾ ಕೇಂದ್ರದ ಬಳಿ ಶಿಥಿಲಗೊಂಡ ಹಳೆಯ ಕಾಂಕ್ರೀಟ್ ಸ್ಲ್ಯಾಬ್ ಕುಸಿದ ಪರಿಣಾಮ ಪರೀಕ್ಷೆಗೆ ಹಾಜರಾಗಿದ್ದ 20ಕ್ಕೂ ಅಧಿಕ ಅಭ್ಯರ್ಥಿಗಳು ಒಳಚರಂಡಿಗೆ ಬಿದ್ದ ಘಟನೆ ನಡೆದಿದೆ.
ಎಚ್.ಎನ್. ಮಿಶ್ರಾ ಪಿಜಿ ಕಾಲೇಜಿನ ಬಳಿ ಈ ಘಟನೆ ಸಂಭವಿಸಿದೆ.
ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ಅಗತ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆಯಲು ಅಭ್ಯರ್ಥಿಗಳು ಪಕ್ಕದ ಝೆರಾಕ್ಸ್ ಅಂಗಡಿಯಲ್ಲಿ ಜಮಾಯಿಸಿದ್ದರು. ಈ ವೇಳೆ ಘಟನೆ ಸಂಭವಿಸಿದೆ.
ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಹಲವಾರು ಅಭ್ಯರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು ಪರೀಕ್ಷೆಗೆ ಮುಂಚಿತವಾಗಿ ತಮ್ಮ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ಪಡೆಯಲು ಅಂಗಡಿಯೊಂದರ ಹೊರಗಿನ ಹಳೆಯ ಕಾಂಕ್ರೀಟ್ ಸ್ಲ್ಯಾಬ್ ಮೇಲೆ ಜಮಾಯಿಸಿದ್ದರು. ಹೆಚ್ಚು ಜನರು ಸ್ಲ್ಯಾಬ್ ಮೇಲೆ ನಿಂತುಕೊಂಡ ಕಾರಣ ಹಳೆ ಸ್ಲ್ಯಾಬ್ ಕುಸಿದು ಬಿದ್ದು ಸುಮಾರು 20 ರಿಂದ 25 ಅಭ್ಯರ್ಥಿಗಳು ಚರಂಡಿಗೆ ಬಿದ್ದಿದ್ದಾರೆ.
ಈ ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಚರಂಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಕೆಲ ಅಭ್ಯರ್ಥಿಗಳಿಗೆ ಗಾಯಗಳಾಗಿವೆ. ಕೆಲ ಅಭ್ಯರ್ಥಿಗಳ ಬಟ್ಟೆ, ಪುಸ್ತಕ, ಪ್ರವೇಶ ಪತ್ರಗಳು ಮತ್ತು ಇತರ ದಾಖಲೆಗಳು ಹಾನಿಗೊಳಗಾಗಿವೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶಿಥಿಲಗೊಂಡ ಸ್ಲ್ಯಾಬ್ ಮೇಲೆ ಹಲವಾರು ಜನರು ನಿಂತಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಕರ್ನಲ್ಗಂಜ್ ಎಸಿಪಿ ಚಿತ್ರಾಂಶು ಗೌತಮ್ ಹೇಳಿದ್ದಾರೆ.

