ನವದೆಹಲಿ: ಕೇಂದ್ರದ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ಫಲಿತಾಂಶದಲ್ಲಿ ತನ್ನ ಕಡೆಯಿಂದಲೇ ಲೋಪ ಎಸಗಿರುವ ಸಿಬಿಎಸ್‌ಇಯು ಮರುಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳಿಂದ ವಿವಿಧ ಶುಲ್ಕಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸ್ಕ್ಯಾನ್ ಮಾಡಿದ ಪ್ರತಿಗಳು, ಅಂಕಗಳ ಮರು ಎಣಿಕೆ ಮತ್ತು ಮರು-ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಅಧಿಕ ಶುಲ್ಕ ವಿಧಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯವಸ್ಥೆಯ ವೈಫಲ್ಯಕ್ಕೆ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಡಿಜಿಟಲ್ ಸ್ಕ್ಯಾನಿಂಗ್ ಪ್ರಕ್ರಿಯೆಯಲ್ಲಿನ ದೋಷಗಳಿಂದ ಉಂಟಾದ ತಿದ್ದುಪಡಿಗಳಿಗಾಗಿ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುತ್ತಿರುವುದನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಪಿಕ್‌ಪಾಕೆಟ್ ಬಗ್ಗೆ ಎಚ್ಚರವಾಗಿರಿ. ಅವರು ಸಿಬಿಎಸ್‌ಇ ಕಚೇರಿಯ ಒಳಗೆ ಕುಳಿತಿದ್ದಾರೆ. ಸಿಬಿಎಸ್‌ಇ ತಪ್ಪಿನಿಂದ ಅಂಕಗಳು ತಪ್ಪಾಗಿ ಬಂದರೆ ನಿಮಗೆ ಬಿಲ್ ಬರುತ್ತದೆ. ಡಿಜಿಟಲ್ ಸ್ಕ್ಯಾನ್ ಕಾಪಿಗಳಿಗಾಗಿ ಪ್ರತಿ ವಿಷಯಕ್ಕೆ ₹100,ಮರು ಎಣಿಕೆಗೆ ಪ್ರತಿ ವಿಷಯಕ್ಕೆ ₹100 ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ ₹100 ವಿಧಿಸಲಾಗುತ್ತಿದೆ. ಒಂದು ಮಗು ತನ್ನ ಉತ್ತರ ಪತ್ರಿಕೆಯನ್ನು ಪರಿಶೀಲಿಸಲು ₹2000ವರೆಗೆ ಖರ್ಚು ಮಾಡಬೇಕಾಗಿದೆ. ಯೋಚಿಸಿ: 4 ಲಕ್ಷ ಮಕ್ಕಳು ಅಂತಹ ಅರ್ಜಿ ಸಲ್ಲಿಸಿದಾಗ ಸಿಬಿಎಸ್‌ಇ ಎಷ್ಟು ಹಣ ಸಂಗ್ರಹಿಸುತ್ತಿದೆ ಎಂದಿದ್ದಾರೆ,
ಸಿಬಿಎಸ್‌ಇ ಮಾಡುವ ಅಂಕ ದೋಷಗಳಿಂದಾಗಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳನ್ನು ದಂಡಿಸಲಾತ್ತದೆ. ಸರ್ಕಾರವು ಅದರಿಂದ ಲಾಭ ಪಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
'ತಪ್ಪು ಸಿಬಿಎಸ್‌ಇಯದ್ದು. ಶಿಕ್ಷೆ ಮಗುವಿನದ್ದು. ಗಳಿಕೆ ಸರ್ಕಾರದ್ದಾಗಿರುತ್ತದೆ' ಎಂದು ರಾಹುಲ್ ಕುಟುಕಿದ್ದಾರೆ.

