ಕೋಲ್ಕತ್ತ: ಹಿಂದಿನ ಟಿಎಂಸಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ 'ಲಕ್ಷ್ಮಿರ್ ಭಂಡಾರ್' ಯೋಜನೆಯಲ್ಲಿ ಹಲವು ನಕಲಿ ಖಾತೆಗಳು ಪತ್ತೆಯಾಗಿದ್ದು, ಪುರುಷರ ಖಾತೆಗಳಿಗೆ ಕೂಡ ಹಣ ಜಮೆಯಾಗಿದೆ. ಅದರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸುವಂತೆ ಡಿಜಿಪಿ ಅವರಿಗೆ ಸೂಚಿಸಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.
ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಟಿಎಂಸಿ ಸರ್ಕಾರವು 'ಲಕ್ಷ್ಮಿರ್ ಭಂಡಾರ್' ಯೋಜನೆಯನ್ನು ಆರಂಭಿಸಲಾಗಿತ್ತು.
'ಲಕ್ಷ್ಮಿರ್ ಭಂಡಾರ್' ಯೋಜನೆಯ ಸುಮಾರು 30 ಲಕ್ಷ ಖಾತೆಗಳು ನಕಲಿಯಾಗಿವೆ. ಈ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯಾಗಿರುವುದರಿಂದ, ಅದರ ಕುರಿತು ಕೂಡ ತನಿಖೆಗೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಕೆಲವು ಪುರುಷರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಅನ್ನಪೂರ್ಣ ಭಂಡಾರ್ ಯೋಜನೆಯನ್ನು ಆರಂಭಿಸುವುದಾಗಿ ತಿಳಿಸಿತ್ತು. ಇದರ ಅಡಿಯಲ್ಲಿ ರಾಜ್ಯದಲ್ಲಿರುವ ಮಹಿಳೆಯರ ಖಾತೆಗಳಿಗೆ ಪ್ರತಿ ತಿಂಗಳು ತಲಾ ₹3 ಸಾವಿರ ಜಮೆ ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಈ ಯೋಜನೆಯ ಮೊದಲ ಕಂತನ್ನು ಜೂನ್ 3ರಂದು ಹಾಕಲಾಗುತ್ತದೆ ಎಂದು ಹೇಳಿದ್ದಾರೆ.

