HEALTH TIPS

ಟ್ವಿಶಾ: 'ಮಾಧ್ಯಮ ನ್ಯಾಯ'ದ ಯಶಸ್ಸು

 ನವದೆಹಲಿ: ಟ್ವಿಶಾ ಸಾವಿನ ಪ್ರಕರಣವನ್ನು ಮಧ್ಯಪ್ರದೇಶ ಸರ್ಕಾರ, ಭೋಪಾಲ್ ಪೊಲೀಸರು ನಿರ್ವಹಣೆ ಮಾಡಿದ ಬಗೆ ಹಾಗೂ ಆ ರಾಜ್ಯದ ನ್ಯಾಯಾಂಗದ ಅಧಿಕಾರಿಗಳ ವರ್ತನೆಯು ಅಲ್ಲಿ ಪ್ರಭುತ್ವದ ಎಲ್ಲ ಅಂಗಗಳು- ಅಂದರೆ ಚುನಾಯಿತ ಸರ್ಕಾರ, ಪೊಲೀಸರು ಮತ್ತು ಕೆಳಹಂತದ ನ್ಯಾಯಾಂಗ ವ್ಯವಸ್ಥೆ- ಸಂಪೂರ್ಣವಾಗಿ ಕುಸಿದುಬಿದ್ದಿರುವುದನ್ನು ಸೂಚಿಸುತ್ತಿವೆ.


ಮಾಧ್ಯಮಗಳು ಇಲ್ಲದೇ ಹೋಗಿದ್ದರೆ, ಈ ಎಲ್ಲ ಅಂಗಗಳ ನಡುವಿನ ಒಳಮೈತ್ರಿಯು ನ್ಯಾಯದಾನ ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇರಿಸಿರುವ ನಂಬಿಕೆಯನ್ನು ನಾಶ ಮಾಡಿಬಿಡುತ್ತಿತ್ತು.

ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಕಳೆದ ನಂತರದಲ್ಲಿಯೂ ವ್ಯವಸ್ಥೆಯು ಕುಸಿದುಬಿದ್ದಿರುವುದನ್ನು ನೋಡಬೇಕಾದ ಸ್ಥಿತಿ ಇರುವುದು ನಿಜಕ್ಕೂ ನಾಚಿಕೆ ಮೂಡಿಸುವಂತಹ ಸಂಗತಿ. ನಿವೃತ್ತ ನ್ಯಾಯಾಧೀಶೆಯ ಸೊಸೆ, ವಕೀಲರೊಬ್ಬರ ಪತ್ನಿ ಟ್ವಿಶಾ ಅವರು ಮೇ 12ರಂದು ಭೋಪಾಲ್‌ನಲ್ಲಿ ಅನುಮಾನಕ್ಕೆ ಆಸ್ಪದ ಮಾಡಿಕೊಡುವಂತಹ ಸನ್ನಿವೇಶದಲ್ಲಿ ಮೃತಪಟ್ಟರು. ಆದರೆ, ಮದುವೆಯಾದ ಏಳು ವರ್ಷಗಳ ಒಳಗೆ ಗಂಡನ ಮನೆಯಲ್ಲಿ ಕ್ರೌರ್ಯಕ್ಕೆ ಗುರಿಯಾಗಿ ಪತ್ನಿ ಈ ರೀತಿ ಮೃತಪಟ್ಟಾಗ, ಅಂತಹ ಪ್ರಕರಣಗಳನ್ನು ನಿಭಾಯಿಸಲು ಕಾನೂನಿನಲ್ಲಿ ಸ್ಪಷ್ಟವಾದ ಅವಕಾಶಗಳು ಇದ್ದರೂ, ಪೊಲೀಸರು ಮೇ 15ರವರೆಗೆ ಎಫ್‌ಐಆರ್‌ ದಾಖಲು ಮಾಡಲಿಲ್ಲ. ಈ ನಡುವೆ ನ್ಯಾಯಾಧೀಶರೊಬ್ಬರು ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು. ಅಪರಾಧ ನಡೆದ ಸ್ಥಳಕ್ಕೆ ತೆರಳಲು ಅವರಿಗೆ ಮುಕ್ತ ಅವಕಾಶ ದೊರೆಯಿತು.


ನಿವೃತ್ತ ನ್ಯಾಯಾಧೀಶೆಗೆ ಸಿಕ್ಕ ಸ್ವಾತಂತ್ರ್ಯ ಅದೆಷ್ಟಿತ್ತೆಂದರೆ, ಅವರು ತಮ್ಮ ಮನೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಏನೇನು ದಾಖಲಾಗಿದೆ ಎಂಬುದನ್ನು ಪರಿಶೀಲಿಸಲು ಹಾಗೂ ಅಪರಾಧ ನಡೆದ ಸ್ಥಳವನ್ನು ಪರಿಶೀಲಿಸಲು ಪರಿಣತರನ್ನು ಕರೆಸಿದರು, ಸಾವಿಗೂ ಕೆಲವು ತಾಸುಗಳ ಮೊದಲು ಟ್ವಿಶಾ ಅವರು ಭೇಟಿ ನೀಡಿದ್ದ ಬ್ಯೂಟಿ ಪಾರ್ಲರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ತರಲು ವಕೀಲರನ್ನು ಕಳುಹಿಸಿದರು. ಅಷ್ಟೇ ಅಲ್ಲ. ಅವರು ಪೊಲೀಸ್‌ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಲೋಕಾಯುಕ್ತ ಸಂಸ್ಥೆಯಲ್ಲಿನ ಮುಖ್ಯ ವ್ಯಕ್ತಿಗಳಿಗೆ, ಡಿಜಿ ಶ್ರೇಣಿಯ ಪೊಲೀಸ್ ಅಧಿಕಾರಿ ಹಾಗೂ ಜಿಲ್ಲಾ ನ್ಯಾಯಾಧೀಶರೊಬ್ಬರಿಗೆ ತಮ್ಮ ಫೋನ್‌ನಿಂದ 46 ಕರೆಗಳನ್ನು ಮಾಡಿದರು. ಆರೋಪಿ ಆಗಬಹುದಾದ ವ್ಯಕ್ತಿಯೊಬ್ಬರಿಗೆ ಸಾಕ್ಷ್ಯಗಳನ್ನು ತಿರುಚಲು ನ್ಯಾಯಾಧೀಶರೊಬ್ಬರು ಇಷ್ಟೊಂದು ಮುಕ್ತವಾದ ಸ್ವಾತಂತ್ರ್ಯ ನೀಡಿದ ಇನ್ನೊಂದು ನಿದರ್ಶನ ಕಾಣಲಿಕ್ಕಿಲ್ಲ. ಈ ನಡುವೆ, ಟ್ವಿಶಾ ಅವರ ಪತಿ (ಇವರೂ ವಕೀಲಿಕೆ ಮಾಡುತ್ತಿದ್ದಾರೆ) ಸಮರ್ಥ್ ಸಿಂಗ್ ಅವರು ನಾಪತ್ತೆಯಾಗಿ, ಹತ್ತು ದಿನ ಭೂಗತರಾದರು. ಸಮರ್ಥ್ ಎಲ್ಲಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಅವರ ತಾಯಿ (ನಿವೃತ್ತ ನ್ಯಾಯಾಧೀಶೆ) ಮಾಧ್ಯಮಗಳಿಗೆ ಮತ್ತೆ ಮತ್ತೆ ಹೇಳುತ್ತಿದ್ದರು.

ಕಾನೂನು ಮತ್ತು ನ್ಯಾಯದ ಈ ಅಣಕವನ್ನು ಕಂಡು ನೊಂದ ಟ್ವಿಶಾ ಅವರ ಪಾಲಕರು, ಮಧ್ಯಪ್ರದೇಶದ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಮೇ 17ರಂದು ಪ್ರಯತ್ನಿಸಿದರು, ಅವರ ಮನೆಯ ಮುಂದೆ ಧರಣಿ ನಡೆಸಿದರು. ಆದರೆ ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಮುಂದಾಗಲಿಲ್ಲ. ಹಲವಾರು ಮಾಧ್ಯಮ ಸಂಸ್ಥೆಗಳು ಈ ಸಾವಿನ ವಿಚಾರವಾಗಿ ಗದ್ದಲ ಸೃಷ್ಟಿಸಿದಾಗ ಟ್ವಿಶಾ ಪಾಲಕರನ್ನು ಮುಖ್ಯಮಂತ್ರಿ ಮೇ 20ರಂದು ಭೇಟಿ ಮಾಡಿದರು. ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದ್ದುದು ಭೇಟಿಗೆ ಕಾರಣ ಎಂಬುದು ಸ್ಪಷ್ಟ. ನಂತರ ಅವರು ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಲು ಒಪ್ಪಿದರು. ಆದರೆ ವರ್ಗಾವಣೆ ಆಗಿದ್ದು ಮೇ 25ರಂದು. ಮೃತದೇಹವನ್ನು ಎರಡನೆಯ ಬಾರಿಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಕೂಡ ಸರ್ಕಾರ ಒಪ್ಪಿತು. ಅದು ನಡೆದಿದ್ದು ಮೇ 24ರಂದು, ಟ್ವಿಶಾ ಮೃತಪಟ್ಟ 12 ದಿನಗಳ ನಂತರ ಎನ್ನುವುದು ಗಮನಾರ್ಹ.

ಟ್ವಿಶಾ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದರು ಹಾಗೂ ಆಕೆಯ ಅತ್ತೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಯಿತು. ಮದುವೆ ಆಗಿ ಏಳು ವರ್ಷಗಳು ತುಂಬುವ ಮೊದಲು, ಪತಿಯ ಮನೆಯಲ್ಲಿ ಪತ್ನಿಯು ಹಿಂಸೆಗೆ ಗುರಿಯಾದರೆ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಒಳಗಾದರೆ ಅದಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 117ರಲ್ಲಿ (ಹಿಂದೆ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 113ಎ) ಏನು ಹೇಳಲಾಗಿದೆ ಎಂಬುದನ್ನು ತಿಳಿದ ಯಾವುದೇ ವ್ಯಕ್ತಿಯ ಆತ್ಮಸಾಕ್ಷಿಗೆ ಇದು ಆಘಾತ ಉಂಟುಮಾಡುವಂಥದ್ದು. ಸೆಕ್ಷನ್ 117 ಹೀಗೆ ಹೇಳುತ್ತದೆ: ವಿವಾಹಿತ ಮಹಿಳೆಯರ ಆತ್ಮಹತ್ಯೆಗೆ ಪ್ರಚೋದನೆ ವಿಚಾರದಲ್ಲಿ ಪೂರ್ವನಂಬಿಕೆ - ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆಕೆಯ ಪತಿ ಅಥವಾ ಪತಿಯ ಯಾವುದೇ ಸಂಬಂಧಿ ಪ್ರಚೋದನೆ ನೀಡಿದ್ದರೇ ಎಂಬ ಪ್ರಶ್ನೆ ಇದ್ದಾಗ, ಮದುವೆ ಆದ ದಿನಾಂಕದಿಂದ ಏಳು ವರ್ಷಗಳ ಒಳಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ತೋರಿಸಿದಲ್ಲಿ, ಆಕೆಯ ಪತಿ ಅಥವಾ ಪತಿಯ ಸಂಬಂಧಿಕರು ಆಕೆಯನ್ನು ಕ್ರೂರವಾಗಿ ನಡೆಸಿಕೊಂಡಿದ್ದರೆ, ಪ್ರಕರಣದ ಇತರ ಎಲ್ಲ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಆತ್ಮಹತ್ಯೆಗೆ ಆಕೆಯ ಪತಿ ಅಥವಾ ಪತಿಯ ಸಂಬಂಧಿಕರು ಪ್ರಚೋದನೆ ನೀಡಿದ್ದರು ಎಂದು ನ್ಯಾಯಾಲಯವು ಪೂರ್ವನಂಬಿಕೆಯನ್ನು ಬೆಳೆಸಿಕೊಳ್ಳಬಹುದು.

ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್‌ 118 ಇನ್ನೂ ಹೆಚ್ಚು ಸ್ಪಷ್ಟವಾಗಿದೆ: ವ್ಯಕ್ತಿಯೊಬ್ಬರು ವರದಕ್ಷಿಣೆಯ ಕಾರಣಕ್ಕೆ ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆಯೇ ಎಂಬ ಪ್ರಶ್ನೆ ಇದ್ದಾಗ, ಸಾವಿಗೆ ಮೊದಲು ಆ ಮಹಿಳೆಯು ಆ ವ್ಯಕ್ತಿಯಿಂದ ವರದಕ್ಷಿಣೆಗಾಗಿ ಅಥವಾ ವರದಕ್ಷಿಣೆಗೆ ಸಂಬಂಧಿಸಿದ ಕ್ರೌರ್ಯಕ್ಕೆ ಅಥವಾ ಕಿರುಕುಳಕ್ಕೆ ಗುರಿಯಾಗಿದ್ದಲ್ಲಿ, ಆ ವ್ಯಕ್ತಿಯು ವರದಕ್ಷಿಣೆಗೆ ಸಂಬಂಧಿಸಿದ ಸಾವಿಗೆ ಕಾರಣರಾಗಿದ್ದಾರೆ ಎಂದು ನ್ಯಾಯಾಲಯವು ಪೂರ್ವನಂಬಿಕೆ ಹೊಂದಬಹುದು ಎಂದು ಈ ಸೆಕ್ಷನ್ ಹೇಳುತ್ತದೆ.

ವರದಕ್ಷಿಣೆ ಕಿರುಕುಳದಿಂದಾಗಿ ಆಗುವ ಸಾವುಗಳಿಗೆ ಸಂಬಂಧಿಸಿದ ಕಾನೂನನ್ನು 1980ರ ದಶಕದಲ್ಲಿ ಇನ್ನಷ್ಟು ಬಿಗಿಗೊಳಿಸಲಾಯಿತು. ಇದನ್ನು ಭಾರತೀಯ ನ್ಯಾಯ ಸಂಹಿತೆಯೂ (ಬಿಎನ್‌ಎಸ್‌) ಒಳಗೊಂಡಿದೆ. ಮಹಿಳೆಯನ್ನು ಗುರಿಯಾಗಿಸಿ ಕ್ರೌರ್ಯ ಎಸಗುವ ಪತಿಗೆ ಅಥವಾ ಪತಿಯ ಸಂಬಂಧಿಕರಿಗೆ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದು ಎಂದು ಬಿಎನ್‌ಎಸ್‌ನ ಸೆಕ್ಷನ್‌ 85ರಲ್ಲಿ ಹೇಳಲಾಗಿದೆ.

ಸೆಕ್ಷನ್‌ 86 'ಕ್ರೌರ್ಯ'ವನ್ನು ವ್ಯಾಖ್ಯಾನಿಸಿದೆ. ಮಹಿಳೆಯು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಸುವ ಉದ್ದೇಶಪೂರ್ವಕ ನಡೆ, ಗಂಭೀರವಾದ ಗಾಯ ಆಗುವಂತೆ ಮಾಡುವುದು, ಆರೋಗ್ಯಕ್ಕೆ (ಮಾನಸಿಕ ಅಥವಾ ದೈಹಿಕ) ಅಪಾಯ ಉಂಟುಮಾಡುವುದು ಅಥವಾ ವರದಕ್ಷಿಣೆ ಕೊಡಬೇಕು ಎಂದು ಕಿರುಕುಳ ನೀಡುವುದು ಕ್ರೌರ್ಯ ಎಂದು ಅದರಲ್ಲಿ ಹೇಳಲಾಗಿದೆ. ಇಂತಹ ಪರಿಸ್ಥಿತಿಗಳಲ್ಲಿ ಶಿಕ್ಷೆಯು ಏಳು ವರ್ಷಗಳಿಗಿಂತ ಕಡಿಮೆ ಇಲ್ಲದ ಜೈಲುವಾಸ ಎಂದು ಬಿಎನ್‌ಎಸ್‌ನ ಸೆಕ್ಷನ್‌ 80(1)ರಲ್ಲಿ ಹೇಳಲಾಗಿದೆ. ಜೀವಾವಧಿ ಜೈಲುಶಿಕ್ಷೆಯನ್ನೂ ವಿಧಿಸಲು ಅವಕಾಶವಿದೆ.

ಈ ಪ್ರಕರಣದಲ್ಲಿ ಅತ್ತೆಯು ಮಾಧ್ಯಮಗಳಿಗೆ ಸಂದರ್ಶನ ನೀಡುವ ಮೂಲಕ, ಟ್ವಿಶಾ ಅವರು ಹಲವು ಮಂದಿಯ ಜೊತೆ ಸಂಬಂಧ ಹೊಂದಿದ್ದರು ಎನ್ನುವ ಮೂಲಕ, ಮರಿಜುವಾನಾ ಮತ್ತು ಅಂತಹ ಇತರ ಮಾದಕವಸ್ತುಗಳನ್ನು ಸೇವಿಸುತ್ತಿದ್ದರು ಎನ್ನುವ ಮೂಲಕ, ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನುವ ಮೂಲಕ, ಕುಟುಂಬದಲ್ಲಿ ಸರಿಯಾಗಿ ಹೊಂದಿಕೊಳ್ಳುತ್ತಿರಲಿಲ್ಲ ಎನ್ನುವ ಮೂಲಕ ತಮ್ಮ ತಪ್ಪನ್ನು ತಾವೇ ಮತ್ತೆ ಮತ್ತೆ ತೋರಿಸಿಕೊಂಡಿದ್ದಾರೆ. ಗಿರಿಬಾಲಾ ಸಿಂಗ್ ಅವರಿಗೆ ತಕ್ಷಣವೇ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರಿಗೆ ಹಾಗೂ ಭೋಪಾಲ್‌ ಪೊಲೀಸರಿಗೆ ಕ್ರೌರ್ಯ ತಡೆಯುವ ಮತ್ತು ವರದಕ್ಷಿಣೆ ಕಿರುಕುಳವನ್ನು ತಡೆಯುವ ಉದ್ದೇಶದ ಕಾನೂನುಗಳ ಬಗ್ಗೆ ಅರಿವು ಇರಲಿಲ್ಲವೇ?

ಒಂದು ಸಂಕಥನವನ್ನು ಸೃಷ್ಟಿಸಬೇಡಿ ಎಂದು, ತಾವೇ ವಿಚಾರಣೆ ನಡೆಸಬಾರದು ಎಂದು ಮಾಧ್ಯಮಗಳನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್ ಆಡಿದ ಮಾತುಗಳು ಕೂಡ ನಿರಾಸೆ ಮೂಡಿಸುವಂತೆ ಇದ್ದವು. ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಬಗ್ಗೆ, ಭೋಪಾಲ್ ಪೊಲೀಸರ ಬಗ್ಗೆ ಅಥವಾ ಹತ್ತು ದಿನಗಳ ಕಾಲ ತಲೆಮರೆಸಿಕೊಂಡಿದ್ದ ವಕೀಲನ (ಟ್ವಿಶಾ ಪತಿ) ಬಗ್ಗೆ ಯಾವುದೇ ಮಾತನ್ನು ಅದು ಆಡಿಲ್ಲ.

ಈ ಪ್ರಕರಣ ಹಾಗೂ ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವ್ಯವಸ್ಥೆಯ ಈ ಸೋಲು 'ಮಾಧ್ಯಮ ವಿಚಾರಣೆ' ಬಗ್ಗೆ ಮಾತನಾಡುವವರ ಬಾಯಿ ಮುಚ್ಚಿಸಬೇಕು. ಈ ಪ್ರಕರಣವನ್ನು ಮಾಧ್ಯಮಗಳು ಕೈಗೆತ್ತಿಕೊಳ್ಳದೆ ಇರುತ್ತಿದ್ದರೆ ನಾವು ಎಲ್ಲಿರುತ್ತಿದ್ದೆವು? ಮಾಧ್ಯಮಗಳು ಮುಂದಡಿ ಇರಿಸದೆ ಇದ್ದಿದ್ದರೆ ಪ್ರಕರಣವನ್ನು ನಾಚಿಕೆಬಿಟ್ಟು ಮುಚ್ಚಿಹಾಕಲು ಯತ್ನಿಸಿದ್ದರ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಗೊತ್ತಾಗುತ್ತಿತ್ತೇ? ಹೀಗಾಗಿ, ಕನಿಷ್ಠಪಕ್ಷ ಈ ಪ್ರಕರಣದಲ್ಲಿಯಾದರೂ ನಾವು 'ಮಾಧ್ಯಮಗಳೇ ನಡೆಸುವ ವಿಚಾರಣೆಗೆ ಜಯವಾಗಲಿ' ಎಂದು ಹೇಳಬೇಕು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries