ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಅಂತಿಮ ಹಂತದಲ್ಲಿದ್ದು, ಶೇಕಡ 1ರಷ್ಟು ಮಾತುಕತೆ ಮಾತ್ರ ಬಾಕಿ ಉಳಿದಿದೆ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಗಿಯೊ ಗೋರ್ ಹೇಳಿದ್ದಾರೆ.
ಅಮೆರಿಕ-ಭಾರತ ಕಾರ್ಯತಂತ್ರ ಪಾಲುದಾರಿಕೆ ವೇದಿಕೆಯ (ಯುಎಸ್‌ಐಪಿಎಫ್) ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿದ್ದು, '18 ತಿಂಗಳ ಸುದೀರ್ಘ ಮಾತುಕತೆಯ ನಂತರ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದವು ಶೀಘ್ರದಲ್ಲೇ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವ್ಯಾಪಾರ ಒಪ್ಪಂದದಿಂದ ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗುವುದರಿಂದ ಆದಷ್ಟು ಬೇಗ ಇದನ್ನು ಪೂರ್ಣಗೊಳಿಸುವ ದೃಢಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದ್ದಾರೆ.
'ನಾವು (ಭಾರತ-ಅಮೆರಿಕ) ವ್ಯಾಪಾರ ಒಪ್ಪಂದದ ಅಂತಿಮ ಹಂತದಲ್ಲಿದ್ದೇವೆ. ಈ ಒಪ್ಪಂದದ ಬಹುತೇಕ ಭಾಗ ಪೂರ್ಣಗೊಂಡಿದೆ. ಎರಡೂ ಕಡೆಯಿಂದ ಕೆಲವು ವಿಷಯಗಳು ಮಾತ್ರ ಬಾಕಿ ಉಳಿದಿವೆ. ಇದು ಒಪ್ಪಂದದ ಕೊನೆಯ ಶೇಕಡ 1ರಷ್ಟು ಭಾಗವಾಗಿದೆ' ಎಂದಿದ್ದಾರೆ.
ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗೋರ್, 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ವೈಯಕ್ತಿಕ ಬಾಂಧವ್ಯವೇ ಈ ಸಂಬಂಧವನ್ನು ಮುನ್ನಡೆಸುತ್ತಿದೆ' ಎಂದು ತಿಳಿಸಿದ್ದಾರೆ.
'ವ್ಯಾಪಾರ ಒಪ್ಪಂದ ಯಾಕೆ ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿದೆ ಎಂದು ಅನೇಕರು ಕೇಳುತ್ತಾರೆ. ನಾವು ಒಂದೂವರೆ ವರ್ಷದಿಂದ ಮಾತುಕತೆಯಲ್ಲಿ ತೊಡಗಿದ್ದೇವೆ. ಇದನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡುವುದಾದರೆ, ನಾವು ಕಳೆದ 20 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಹಾಗಾಗಿ ಯಾವುದೇ ಆದರೂ, ನಾವು ಯುರೋಪಿಯನ್ ಒಪ್ಪಂದವನ್ನು ಮೀರಿ ಉತ್ತಮ ಸ್ಥಿತಿಗೆ ತಲುಪುತ್ತೇವೆ ಎಂದು ಭಾವಿಸುತ್ತೇನೆ' ಎಂದಿದ್ದಾರೆ.
ಟ್ರಂಪ್ ಅವರು ಭಾರತ ಭೇಟಿಯ ಬಗ್ಗೆ ಅತ್ಯಂತ ಆಪ್ತವಾದ ನೆನಪುಗಳನ್ನು ಹೊಂದಿದ್ದಾರೆ ಮತ್ತು ಈಗಲೂ ಅದರ ಬಗ್ಗೆ ಮಾತನಾಡುತ್ತಿರುತ್ತಾರೆ ಎಂದು ಗೋರ್ ಸ್ಮರಿಸಿದ್ದಾರೆ.
'ಟ್ರಂಪ್ ಅವರ ಕಳೆದ ಬಾರಿಯ ಭಾರತ ಪ್ರವಾಸವು ಅತ್ಯಂತ ಗಮನಾರ್ಹ ಭೇಟಿಗಳಲ್ಲಿ ಒಂದಾಗಿತ್ತು. ಅವರು ಇಂದಿಗೂ ಅದರ ಬಗ್ಗೆ ಮಾತನಾಡುತ್ತಾರೆ. ಅಧ್ಯಕ್ಷರ ಹೃದಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ಇದು ಅದ್ಭುತವಾದ ವಿಷಯ. ಹಾಗಾಗಿ ಅವರು ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡುವುದನ್ನು ನಾನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

