ಬಂಧಿತರನ್ನು ಎನ್ಎಚ್ಎಐ ಯೋಜನಾ ನಿರ್ದೇಶಕ ಆನಂದ್ ಸಿಂಗ್ ಚೌಹಾಣ್ ಮತ್ತು ಖಾಸಗಿ ವ್ಯಕ್ತಿಗಳಾದ ಪುನೀತ್ ಅಗರ್ವಾಲ್ ಹಾಗೂ ಮನೀಶ್ ಅಗರ್ವಾಲ್ ಎಂದು ಗುರುತಿಸಲಾಗಿದೆ.
ಗುತ್ತಿಗೆದಾರರೊಬ್ಬರ 13.38 ಕೋಟಿ ರೂ. ಮೊತ್ತದ ಬಾಕಿ ಬಿಲ್ ಪಾವತಿಸಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಕುರಿತು ಸಲ್ಲಿಕೆಯಾಗಿದ್ದ ದೂರಿನ ಆಧಾರದ ಮೇಲೆ ಜುಲೈ 1ರಂದು ಪ್ರಕರಣ ದಾಖಲಿಸಲಾಗಿತ್ತು ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕರಣದ ತನಿಖೆ ವೇಳೆ, ಒಟ್ಟು 12 ಲಕ್ಷ ರೂ. ಲಂಚದ ಮೊತ್ತದಲ್ಲಿ ಮುಂಗಡವಾಗಿ 4 ಲಕ್ಷ ರೂ. ಪಾವತಿಸುವಂತೆ ಹಾಗೂ ಉಳಿದ ಮೊತ್ತವನ್ನು ಗುವಾಹಟಿಯಲ್ಲಿರುವ ಖಾಸಗಿ ವ್ಯಕ್ತಿಗಳಿಗೆ ನೀಡುವಂತೆ ಆನಂದ್ ಸಿಂಗ್ ಚೌಹಾಣ್ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರೆಂಬುದು ಬೆಳಕಿಗೆ ಬಂದಿದೆ ಎಂದು ಸಿಬಿಐ ಹೇಳಿದೆ.
ಅಲ್ಲದೆ, ಆನಂದ್ ಸಿಂಗ್ ಚೌಹಾಣ್ ಸೂಚಿಸಿದ್ದ ಖಾಸಗಿ ವ್ಯಕ್ತಿಯೊಬ್ಬರು, ಬಾಕಿ ಮೊತ್ತವನ್ನು ಮತ್ತೊಬ್ಬ ಖಾಸಗಿ ವ್ಯಕ್ತಿಗೆ ಹಸ್ತಾಂತರಿಸುವಂತೆ ದೂರುದಾರರಿಗೆ ತಿಳಿಸಿದ್ದ ಸಂಗತಿಯೂ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಸಿಬಿಐ ತಿಳಿಸಿದೆ.
ದೂರಿನ ಆಧಾರದ ಮೇಲೆ ಬಲೆ ಬೀಸಿದ ಸಿಬಿಐ ಅಧಿಕಾರಿಗಳು, ದೂರುದಾರರಿಂದ 4 ಲಕ್ಷ ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಖಾಸಗಿ ವ್ಯಕ್ತಿಯೊಬ್ಬರನ್ನು ರೆಡ್ಹ್ಯಾಂಡಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯ ನಂತರ ಆನಂದ್ ಸಿಂಗ್ ಚೌಹಾಣ್, ಪುನೀತ್ ಅಗರ್ವಾಲ್ ಮತ್ತು ಮನೀಶ್ ಅಗರ್ವಾಲ್ ಅವರನ್ನು ಬಂಧಿಸಲಾಗಿದೆ. ಬಳಿಕ ಆರೋಪಿಗಳ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ ಎಂದು ಸಿಬಿಐ ತಿಳಿಸಿದೆ.

