ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದಾಗಿನಿಂದ ಈವರೆಗೆ 10 ಮಂದಿ ನಾವಿಕರು ಸೇರಿದಂತೆ ಒಟ್ಟು 16 ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ರಾಜ್ಯಸಭೆಯಲ್ಲಿ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.
2026ರ ಫೆಬ್ರುವರಿಯಲ್ಲಿ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ, 10 ನಾವಿಕರು ಸೇರಿದಂತೆ 16 ಭಾರತೀಯ ನಾಗರಿಕರು ಸಾವಿಗೀಡಾಗಿದ್ದಾರೆ. ಆ ಪೈಕಿ ಒಮಾನ್‌ನಲ್ಲಿ 8, ಯುಎಇಯಲ್ಲಿ ನಾಲ್ವರು, ಕುವೈತ್‌ನಲ್ಲಿ ಇಬ್ಬರು, ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ದಾಳಿಯಲ್ಲಿ ಒಟ್ಟು 75 ಭಾರತೀಯರು ಗಾಯಗೊಂಡಿದ್ದು, ಅವರಲ್ಲಿ ಯುಎಇಯಲ್ಲಿ 32, ಒಮಾನ್‌ನಲ್ಲಿ 24, ಕತಾರ್‌ನಲ್ಲಿ ನಾಲ್ವರು, ಕುವೈತ್‌ನಲ್ಲಿ 13, ಸೌದಿ ಅರೇಬಿಯಾ ಮತ್ತು ಇಸ್ರೇಲ್‌ನಲ್ಲಿ ತಲಾ ಒಬ್ಬರು ಸೇರಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಇನ್ನು ಪ್ರತ್ಯೇಕ ಅವಘಡದಲ್ಲಿ (ಕತಾರ್‌ನ ರಾಸ್ ಲಫಾನ್ ಅನಿಲ ಘಟಕದಲ್ಲಿ ದುರಂತ) 12 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದೂ ಸಚಿವರು ತಿಳಿಸಿದ್ದಾರೆ.
ಸರ್ಕಾರದ ನೆರವು
ಮೃತಪಟ್ಟ ಭಾರತೀಯರ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ತರಲು ಸರ್ಕಾರ ಆಯಾ ದೇಶಗಳೊಂದಿಗೆ ಸೇರಿ ಅಗತ್ಯ ಕ್ರಮಕೈಗೊಂಡಿದೆ.
ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ನಾವಿಕರ ಕುಟುಂಬಗಳಿಗೆ 'ಡಿಜಿಎಂಎ' ಕ್ಷೇಮಾಭಿವೃದ್ಧಿ ಯೋಜನೆಯಡಿ ತಲಾ ₹10 ಲಕ್ಷ ಪರಿಹಾರ ನೀಡಲಾಗುತ್ತಿದೆ.
ಹೆಚ್ಚುವರಿ ನೆರವು
ನೌಕರರ ಸಂಘಟನೆಗಳ ಒಪ್ಪಂದದ ಪ್ರಕಾರ, ಅಧಿಕಾರಿಗಳ ಕುಟುಂಬಕ್ಕೆ ₹12 ಲಕ್ಷ ಹಾಗೂ ಸಾಮಾನ್ಯ ಸಿಬ್ಬಂದಿಗೆ ₹10 ಲಕ್ಷ ಹೆಚ್ಚುವರಿ ಯುದ್ಧ-ಪರಿಹಾರವೂ ಸಿಗಲಿದೆ.
ಭಾರತೀಯರ ಸ್ಥಳಾಂತರ
ಇರಾನ್‌ನಲ್ಲಿ ಪ್ರಸ್ತುತ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ನಾವಿಕರು ಸೇರಿದಂತೆ ಸುಮಾರು 7,000 ಭಾರತೀಯರಿದ್ದಾರೆ. ಯುದ್ಧ ಆರಂಭವಾದಾಗಿನಿಂದ ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 2,557 ಭಾರತೀಯರನ್ನು ಅರ್ಮೇನಿಯಾ ಮತ್ತು ಅಜರ್‌ಬೈಜಾನ್ ಮಾರ್ಗವಾಗಿ ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿಕೊಟ್ಟಿದೆ.
ಅಮೆರಿಕದಲ್ಲಿ 30 ಭಾರತೀಯರ ಬಂಧನ
ಅಮೆರಿಕದ ಅರಿಝೋನಾ ರಾಜ್ಯದಲ್ಲಿ 'ಆಪರೇಷನ್ ಚೆಕ್‌ಮೇಟ್' ಕಾರ್ಯಾಚರಣೆ ವೇಳೆ ಅಕ್ರಮವಾಗಿ ನೆಲೆಸಿದ್ದ 30 ಭಾರತೀಯರನ್ನು ಯುಎಸ್ ಬಾರ್ಡರ್ ಪೆಟ್ರೋಲ್ ಬಂಧಿಸಿದೆ. ಈ ಕಾರ್ಯಾಚರಣೆಯ ಬಗ್ಗೆ ಭಾರತಕ್ಕೆ ಮುಂಚಿತವಾಗಿ ಮಾಹಿತಿ ಇರಲಿಲ್ಲ. ಆದರೆ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಂಪೂರ್ಣ ವಿವರಗಳನ್ನು ಕೋರಿದ್ದು, ಮುಂದಿನ ಮಾಹಿತಿಗಾಗಿ ಕಾಯುತ್ತಿದೆ. ಬಂಧಿತರನ್ನು ಭಾರತಕ್ಕೆ ಗಡಿಪಾರು ಮಾಡಲಾಗುವುದು ಎಂದು ಅಮೆರಿಕ ತಿಳಿಸಿದೆ.

