ನವದೆಹಲಿ: 'ನೀಟ್' ನಂತಹ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಗೆ ಕಠಿಣ ಜೈಲು ಶಿಕ್ಷೆ ಮತ್ತು ಭಾರಿ ದಂಡ ಪರಿಹಾರವೇ? ಪ್ರಶ್ನೆಪತ್ರಿಕೆ ಸೋರಿಕೆ ತಡೆ ವಿಧೇಯಕ ನಿಜಕ್ಕೂ ತನ್ನ ಉದ್ದೇಶವನ್ನು ಈಡೇರಿಸಬಲ್ಲದೇ?
- ಈ ಬಗ್ಗೆ ಶಿಕ್ಷಣ ತಜ್ಞರು ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಕಠಿಣ ಶಿಕ್ಷೆಯಿಂದ ನೀಟ್ ಅಕ್ರಮ ತಡೆಯಲು ಸಾಧ್ಯವೇ? ಇದು ತೇಪೆ ಹಚ್ಚುವ ಕೆಲಸವೇ?
ಒಂದು ಸಾಲಿನಲ್ಲಿನೀಟ್ ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಠಿಣ ಶಿಕ್ಷೆಯ ಕಾನೂನು ಜಾರಿಯಾದರು, ಇದು ಸೋರಿಕೆಯನ್ನು ಮೂಲದಲ್ಲೇ ನಿಯಂತ್ರಿಸುವ ಬದಲು ತೇಪೆ ಹಚ್ಚುವ ಪ್ರಯತ್ನವಾಗಿದೆ ಎಂದು ತಜ್ಞರು ಟೀಕಿಸಿದ್ದಾರೆ.
ಏನು? ಏಕೆ? ಹೇಗೆ?
ಕಠಿಣ ಶಿಕ್ಷೆಯ ವಿಧೇಯಕದ ಮುಖ್ಯ ಉದ್ದೇಶವೇನು?
ಈ ವಿಧೇಯಕವು ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ದಂಡ ಹಾಗೂ ಜೈಲು ಶಿಕ್ಷೆಯನ್ನು ಹೆಚ್ಚಿಸುವ ಮೂಲಕ ಅಪರಾಧಗಳನ್ನು ತಡೆಯುವ ಗುರಿ ಹೊಂದಿದೆ.
ಶಿಕ್ಷಣ ತಜ್ಞರು ಈ ಹೊಸ ಕಾನೂನನ್ನು ಹೇಗೆ ನೋಡುತ್ತಿದ್ದಾರೆ?
ಅಕ್ರಮಗಳನ್ನು ಮೂಲದಲ್ಲಿ ತಡೆಯುವ ವ್ಯವಸ್ಥಿತ ಕಾರ್ಯವಿಧಾನದ ಕೊರತೆಯಿರುವುದರಿಂದ, ಇದು ಸಮಸ್ಯೆಯನ್ನು ಬಗೆಹರಿಸುವ ಬದಲಿಗೆ ಕೇವಲ 'ತೇಪೆ ಹಚ್ಚುವ' ಕೆಲಸವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಕ್ರಮ ಎಸಗುವವರಿಗೆ ಹೊಸ ಕಾನೂನಿನಲ್ಲಿರುವ ಶಿಕ್ಷೆಯ ಪ್ರಮಾಣವೇನು?
ಅಕ್ರಮ ಎಸಗುವ ವ್ಯಕ್ತಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50 ಲಕ್ಷ ದಂಡ, ಹಾಗೂ ಸಂಸ್ಥೆಗಳಿಗೆ ₹5 ಕೋಟಿಯವರೆಗೆ ದಂಡ ವಿಧಿಸಲಾಗುತ್ತದೆ.
ಸಂಘಟಿತ ಅಪರಾಧಗಳಿಗೆ ಕಾನೂನಿನಲ್ಲಿರುವ ಅವಕಾಶಗಳೇನು?
ಸಂಘಟಿತ ಅಪರಾಧ ಎಸಗುವವರಿಗೆ 10 ವರ್ಷಗಳವರೆಗೆ ಶಿಕ್ಷೆ ಮತ್ತು ₹10 ಕೋಟಿವರೆಗೆ ದಂಡ ವಿಧಿಸಲು ಪ್ರಸ್ತಾವಿಸಲಾಗಿದೆ, ಅಲ್ಲದೆ ವಿಶೇಷ ತನಿಖಾ ಪಡೆ ರಚನೆಯನ್ನು ಸೂಚಿಸಲಾಗಿದೆ.
ಶಶಿ ತರೂರ್ ಅವರ ಪ್ರಕಾರ ಪರೀಕ್ಷಾ ಸುಧಾರಣೆ ಹೇಗೆ ನಡೆಯಬೇಕು?
ಕೇವಲ ಜೈಲು ಶಿಕ್ಷೆಯ ಆಧಾರದ ಮೇಲೆ ಯಶಸ್ಸನ್ನು ಅಳೆಯಬಾರದು, ಬದಲಿಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯುವ ವ್ಯವಸ್ಥಿತ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಪ್ರಮುಖ ಅಂಕಿಅಂಶಗಳು
10 ವರ್ಷಅಕ್ರಮ ಎಸಗುವ ವ್ಯಕ್ತಿಗಳಿಗೆ ಗರಿಷ್ಠ ಜೈಲು ಶಿಕ್ಷೆ₹50 ಲಕ್ಷವ್ಯಕ್ತಿಗಳಿಗೆ ವಿಧಿಸುವ ದಂಡದ ಮೊತ್ತ₹5 ಕೋಟಿಅಕ್ರಮ ಎಸಗುವ ಸಂಸ್ಥೆಗಳಿಗೆ ದಂಡ₹10 ಕೋಟಿಸಂಘಟಿತ ಅಪರಾಧಕ್ಕೆ ವಿಧಿಸುವ ಗರಿಷ್ಠ ದಂಡ3 ತಿಂಗಳುವಿಚಾರಣೆ ಪೂರ್ಣಗೊಳಿಸಲು ನಿಗದಿತ ಅವಧಿ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಮೇಲ್ನೋಟಕ್ಕೆ ಈ ಕಾಯ್ದೆಯನ್ನು ಗಮನಿಸಿದರೆ ಇದು 2024ರ ವಿಧೇಯಕಕ್ಕೆ ತಿದ್ದುಪಡಿ ತಂದು ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವುದಕ್ಕೆ ಅವಕಾಶ ನೀಡಿದೆಯೇ ಹೊರತು, ಸೋರಿಕೆಯನ್ನು ಮೂಲದಲ್ಲೇ ತಡೆಯುವ ಬಲವಾದ ಕ್ರಮಗಳನ್ನು ಹೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೋರಿಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಸ್ವತಂತ್ರ ಹಾಗೂ ವ್ಯವಸ್ಥಿತ ಕಾರ್ಯವಿಧಾನ ರೂಪಿಸುವ ಬದಲು, ತಪ್ಪು ಎಸಗಿದವರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ಕ್ರಮಗಳಿಗಷ್ಟೇ ಸೀಮಿತವಾಗಿದೆ. ಹೀಗಾಗಿ, ಮೂಲದಲ್ಲೇ ಸೋರಿಕೆ ತಡೆಯುವ ಬದಲ ತೇಪೆ ಹಚ್ಚುವ ಕೆಲಸ ಮಾಡಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹೊಸ ತಿದ್ದುಪಡಿ ವಿಧೇಯಕದಲ್ಲಿ ಅಕ್ರಮ ಎಸಗುವವರ ವಿರುದ್ಧದ ದಂಡ ಹಾಗೂ ಶಿಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ಅಕ್ರಮ ಎಸಗುವ ವ್ಯಕ್ತಿಗಳಿಗೆ ನೀಡಲಾಗುತ್ತಿದ್ದ ಶಿಕ್ಷೆ ಪ್ರಮಾಣವನ್ನು 10 ವರ್ಷಗಳವರೆಗೆ ಹೆಚ್ಚಿಸಲಾಗಿದೆ. ವ್ಯಕ್ತಿಗಳಿಗೆ ವಿಧಿಸುವ ದಂಡದ ಮೊತ್ತವನ್ನು ₹50 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾವಿಸಲಾಗಿದೆ. ಪರೀಕ್ಷಾ ನಿರ್ವಹಣೆಯಲ್ಲಿ ಅಕ್ರಮ ಎಸಗುವ ಸಂಸ್ಥೆಗಳಿಗೆ ವಿಧಿಸುವ ದಂಡವನ್ನು ₹5 ಕೋಟಿಗೆ ಏರಿಸಲಾಗಿದೆ. ಸಂಘಟಿತ ಅಪರಾಧಕ್ಕೆ ಶಿಕ್ಷೆಯನ್ನು 10 ವರ್ಷಗಳವರೆಗೆ ಹೆಚ್ಚಿಸಲಾಗಿದೆ. ದಂಡದ ಮೊತ್ತವನ್ನು ₹10 ಕೋಟಿಗೆ ಹೆಚ್ಚಿಸಲಾಗಿದ್ದು, ವಿಶೇಷ ತನಿಖಾ ಪಡೆ, ಶೀಘ್ರ ವಿಲೇವಾರಿ, 3 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ.
ಈ ಕಠಿಣ ಕ್ರಮಗಳು ಅಪರಾಧಿಗಳಿಗೆ ಪರೀಕ್ಷಾ ಅಕ್ರಮವು ಅತ್ಯಂತ ಅಪಾಯಕಾರಿ ಮತ್ತು ವೆಚ್ಚದಾಯಕವನ್ನಾಗಿ ಮಾಡಲಿವೆ. ಆದರೆ, ಸೋರಿಕೆ ಸಂಭವಿಸುವ ತಾಂತ್ರಿಕ ಹಾಗೂ ವ್ಯವಸ್ಥಿತ ಲೋಪಗಳನ್ನು ಆರಂಭದಲ್ಲೇ ತಡೆಗಟ್ಟುವ ಯಾವುದೇ ಸ್ಪಷ್ಟ ಕಾರ್ಯವಿಧಾನ ಇದರಲ್ಲಿ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಕೋಟಿಗಟ್ಟಲೆ ವಿದ್ಯಾರ್ಥಿಗಳ ಭವಿಷ್ಯವನ್ನು ಕೆಲವೇ ಗಂಟೆಗಳ ಒತ್ತಡದ ಪರೀಕ್ಷೆಯಲ್ಲಿ ನಿರ್ಧರಿಸುವ ಮಾದರಿಯಿಂದ ನಾವು ಹೊರಬರಬೇಕು ಎಂದಿದ್ದಾರೆ.
ನಾವು ಎಷ್ಟು ಜನರನ್ನು ಜೈಲಿಗೆ ಕಳುಹಿಸಿದೆವು ಎಂಬುದರ ಆಧಾರದ ಮೇಲೆ ಈ ಕಾನೂನಿನ ಯಶಸ್ಸನ್ನು ಅಳೆಯಬಾರದು. ಬದಲಿಗೆ, ನಾವು ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಡೆಗಟ್ಟಿದೆವು ಎಂಬುದರ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.

