ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಸೃಷ್ಟಿಸಿರುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಿರುಚಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಕ್ಕೆ ಸಂಬಂಧಿಸಿದಂತೆ 'ಮೆಟಾ ಇಂಡಿಯಾ' ಮುಖ್ಯಸ್ಥ ಅರುಣ್ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರ ವಿರುದ್ಧವೂ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ನಂತರ ಈ ವಿಡಿಯೊಗಳು ಹರಿದಾಡಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೆಟಾ ಮಾಲೀಕತ್ವದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಿಡಿಯೊಗಳು ಹರಿದಾಡಲು ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಸಾರ್ವಜನಿಕರನ್ನು ದಾರಿ ತಪ್ಪಿಸುವ ಇಂತಹ ನಕಲಿ ಕಂಟೆಂಟ್‌ಗಳ ಹಂಚಿಕೆಯನ್ನು ತಡೆಯುವಲ್ಲಿ ಮೆಟಾ ಸಂಸ್ಥೆಯ ಭದ್ರತಾ ಕ್ರಮ ಮತ್ತು ನಿಯಮ ಎಷ್ಟು ಪರಿಣಾಮಕಾರಿಯಾಗಿವೆ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ಮುಂದುವರಿದಿದೆ.
ಕೆಲ ದಿನಗಳ ಹಿಂದೆ ಮೆಟಾ ಸಂಸ್ಥೆಯ ಪ್ರತಿನಿಧಿಗಳು ಸೈಬರ್ ಕ್ರೈಮ್ ಪೊಲೀಸರ ಮುಂದೆ ಹಾಜರಾಗಿ, ನಕಲಿ ಜಾಹೀರಾತುಗಳು ಮತ್ತು ಮಾರ್ಫ್ ಮಾಡಿದ ಕಂಟೆಂಟ್‌ಗಳನ್ನು ಪತ್ತೆ ಹಚ್ಚುವ ಕುರಿತು ಕಂಪನಿಯ ಸುರಕ್ಷತಾ ಕ್ರಮಗಳ ಬಗ್ಗೆ ವಿವರಣೆ ನೀಡಿದ್ದರು. ಆದರೆ ಇದೀಗ ನೇರವಾಗಿ ಮೆಟಾ ಇಂಡಿಯಾ ಮುಖ್ಯಸ್ಥರ ಹೆಸರಿನಲ್ಲಿಯೇ ಎಫ್‌ಐಆರ್ ದಾಖಲಾಗಿರುವುದು ಮಹತ್ವ ಪಡೆದುಕೊಂಡಿದೆ.
ಈ ತನಿಖೆಯ ಭಾಗವಾಗಿ ಜುಲೈ 29ರಂದು ಗೌತಮ್ ಬುದ್ಧ ನಗರದ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣವೊಂದು ದಾಖಲಾಗಿತ್ತು. ಘಾಜಿಯಾಬಾದ್ ನಿವಾಸಿ ಸ್ಮೃತಿ ಸಿಂಗ್ ನೀಡಿದ ದೂರಿನ ಮೇರೆಗೆ ನೋಯ್ಡಾದ ನಿವಾಸಿ ರುಚಿಕಾ ಸಿಂಗ್ ವಿರುದ್ಧ ಈ ಕಾನೂನು ಕ್ರಮ ಜರುಗಿಸಲಾಗಿದೆ.
ಜುಲೈ 23ರಂದು ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ಕಾರ್ಯಾಲಯದ ಘನತೆಗೆ ಚ್ಯುತಿ ಬರುವಂತೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ರೀತಿಯಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

